ಮಡಿಕೇರಿ, ಜ. 29: ಇಲ್ಲಿನ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ರಾಷ್ಟ್ರೀಯ ಮತದಾರರ ದಿನಾಚರಣೆಯ ಪ್ರಯುಕ್ತ ಮತದಾರರ ಪ್ರತಿಜ್ಞೆ ಸ್ವೀಕರಿಸಲಾಯಿತು. ಚುನಾವಣಾ ಸಾಕ್ಷರತಾ ಕ್ಲಬ್ ಮತ್ತು ರಾಜ್ಯಶಾಸ್ತ್ರ ವಿಭಾಗದ ಸಹಯೋಗದೊಂದಿಗೆ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಭಾಗಮಂಡಲದ ಉಪನ್ಯಾಸಕ ಕೆ.ಜೆ. ದಿವಾಕರ್ ಕಾರ್ಯಕ್ರಮ ಉದ್ಘಾಟಿಸಿದರು. ‘ಪ್ರಜಾಪ್ರಭುತ್ವಕ್ಕಾಗಿ ಮತದಾರರ ಸಾಕ್ಷರತೆ’ ಎಂಬ ಪೋಷಣೆಯೊಂದಿಗೆ ಮತದಾರರ ದಿನಾಚರಣೆಯನ್ನು ಆಚರಿಸಲಾಗುತ್ತಿದೆ. ಸಂವಿಧಾನ ಜಾರಿಗೆ ಬರುವುದರ ಜೊತೆಯಲ್ಲಿ ಮತದಾರರ ಹಕ್ಕು ಮತ್ತು ಕರ್ತವ್ಯಗಳ ಬಗ್ಗೆ ಪ್ರಸ್ತಾಪ ಆಗಿದೆ. ಮತದಾರರು ತಮ್ಮ ಹಕ್ಕನ್ನು ಚಲಾಯಿಸುವುದರ ಮೂಲಕ ಉತ್ತಮ ಪ್ರತಿನಿಧಿಗಳನ್ನು ಆಯ್ಕೆ ಮಾಡಬೇಕು.
ಯುವ ಜನತೆಯು ಸಕ್ರೀಯವಾಗಿ ಮತ್ತು ಅಧಿಕವಾಗಿ ಮತದಾನದಲ್ಲಿ ಪಾಲ್ಗೊಳ್ಳಬೇಕಾಗಿದೆ. ಬಲಿಷ್ಠ ಭಾರತದ ನಿರ್ಮಾಣದಲ್ಲಿ ಯುವ ಜನತೆಯ ಪಾತ್ರ ಮುಖ್ಯ ಎಂದು ತಿಳಿಸಿದರು. ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಿ.ಜೆ. ಮತದಾರರು ತಮ್ಮ ಹಕ್ಕುಗಳ ಜೊತೆಯಲ್ಲಿ ಕರ್ತವ್ಯವನ್ನು ನಿರ್ವಹಿಸಬೇಕೆಂದು ತಿಳಿಸಿದರು.
ವೇದಿಕೆಯಲ್ಲಿ ಮತದಾರರ ಸಾಕ್ಷರತಾ ಕ್ಲಬ್‍ನ ಸಂಚಾಲಕಿ ನಿರ್ಮಲ ಹೆಚ್.ಪಿ., ರಾಯಬಾರಿಗಳಾದ ಕವಿತ, ಕೀರ್ತನ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಬೋಧಕ, ಬೋಧಕೇತರ ವರ್ಗ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು. ದಿವ್ಯ ಮತ್ತು ತಂಡದವರ ಪ್ರಾರ್ಥನೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಐಶ್ವರ್ಯ ಸ್ವಾಗತಿಸಿ, ಸುಶ್ಮಿತಾ ವಂದಿಸಿ, ಕಾರ್ಯಕ್ರಮದ ನಿರೂಪಣೆಯನ್ನು ಬಿ.ಎ. ಪೂಜಾ ನೆರವೇರಿಸಿದರು.