ಶನಿವಾರಸಂತೆ, ಜ. 29: ಶನಿವಾರಸಂತೆಯ ಲಯನ್ಸ್ ಕ್ಲಬ್ ಆಫ್ ಕಾವೇರಿ ಸೆಂಟಿನಲ್ ಮಾಸಿಕ ಸಭೆ ಶನಿವಾರಸಂತೆಯ ಕಚೇರಿಯಲ್ಲಿ ಲಯನ್ಸ್ ಉಪಾಧ್ಯಕ್ಷ ಬಿ.ಸಿ. ಧರ್ಮಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಲಯನ್ಸ್ ಕ್ಲಬ್ ಖಜಾಂಚಿ ಬಿ.ಕೆ. ಚಿಣ್ಣಪ್ಪ ಲೆಕ್ಕಪತ್ರಗಳ ವರದಿ ಮಂಡಿಸುತ್ತಾ ಕಳೆದ ಎರಡು ತಿಂಗಳಿನಲ್ಲಿ ಕೃಷಿ ಅಭಿಯಾನ ಕಾರ್ಯಕ್ರಮ, ಸೈಕಲ್ ವಿತರಣಾ ಕಾರ್ಯಕ್ರಮ, ಶಿಕ್ಷಕರ ಹಾಗೂ ವಕೀಲರ ದಿನದಂದು ನಡೆದ ಸನ್ಮಾನ ಸಮಾರಂಭಗಳಲ್ಲಿ ಆದ ಖರ್ಚು ವೆಚ್ಚಗಳನ್ನು ಕೂಲಂಕಶವಾಗಿ ಸಭೆಗೆ ಮಂಡಿಸಿ, ಸಭೆಯ ಅನುಮೋದನೆ ಪಡೆದರು. ಅದಲ್ಲದೆ ತಾ. 31 ರಂದು ಹಾಗೂ ಫೆ. 1 ರಂದು ನಿಡ್ತ ಗ್ರಾಮದಲ್ಲಿ ನಡೆಯುತ್ತಿರುವ ಜಿಲ್ಲಾ ಸಾಹಿತ್ಯ ಸಮ್ಮೇಳನ ಹಾಗೂ ಫೆ. 9 ರಂದು ಮೈಸೂರಿನಲ್ಲಿ ನಡೆಯುವ ಕಾನೂನು ಅರಿವಿನ ಕಾರ್ಯಾಗಾರದಲ್ಲಿ ಭಾಗವಹಿಸುವಂತೆ ಲಯನ್ಸ್ ಸದಸ್ಯರುಗಳಲ್ಲಿ ಮನವಿ ಮಾಡಿದರು.
ಲಯನ್ಸ್ ಕ್ಲಬ್ ಉಪಾಧ್ಯಕ್ಷ ಜಿ. ನಾರಾಯಣ ಸ್ವಾಮಿ ಮಾತನಾಡಿ, ಲಯನ್ಸ್ ಕ್ಲಬ್ ಸದಸ್ಯರುಗಳು ಸಭೆ, ಸಮಾರಂಭ ಹಾಗೂ ಕಚೇರಿಗಳಿಗೆ ಹೋಗುವಾಗ ಲಯನ್ಸ್ ಪಿನ್‍ಗಳನ್ನು ಧರಿಸಿಕೊಂಡು ಹೋಗುವ ಅಭ್ಯಾಸ ಇಟ್ಟುಕೊಂಡರೆ ಅದಕ್ಕೆ ಅದರದೇ ಆದ ಗೌರವ ದೊರೆಯುತ್ತದೆ ಎಂದರು.
ಸಭೆಯಲ್ಲಿ ಲಯನ್ಸ್ ಉಪಾಧ್ಯಕ್ಷ ಎನ್.ಕೆ. ಅಪ್ಪಸ್ವಾಮಿ, ಕಾರ್ಯದರ್ಶಿ ಎಂ.ಆರ್. ನಿರಂಜನ್, ಸದಸ್ಯರುಗಳಾದ ಸಿ.ಪಿ. ಹರೀಶ್, ಕೆ.ಎಂ. ಜಗನ್‍ಪಾಲ್, ಎಸ್.ಎಸ್. ಚಂದ್ರಶೇಖರ್, ಎನ್.ಕೆ. ಮೂರ್ತಿ, ಕೆ.ಎನ್. ಕಾರ್ಯಪ್ಪ, ಎಸ್.ಜಿ. ನರೇಶ್‍ಚಂದ್ರ, ಲಿಂಗರಾಜ್, ಎನ್.ಕೆ. ಕುಶಾಲಪ್ಪ, ಎಂ.ಆರ್. ಮಲ್ಲೇಶ್, ಜಿ.ಪಿ. ಪುಟ್ಟಪ್ಪ, ಇತರರು ಉಪಸ್ಥಿತರಿದ್ದರು.