ಸೋಮವಾರಪೇಟೆ, ಜ. 30: ತಾಲೂಕಿನ ಯುವಕನೋರ್ವ ಶಿವಮೊಗ್ಗದಲ್ಲಿ ಸಾವಿಗೀಡಾಗಿದ್ದು, ಯುವಕನ ಸಾವಿಗೆ ಸಂಬಂಧಿಸಿದಂತೆ ಪೋಷಕರು ಸಂಶಯ ವ್ಯಕ್ತಪಡಿಸಿ ಅಲ್ಲಿನ ಪೊಲೀಸರಿಗೆ ದೂರು ನೀಡಿದ್ದಾರೆ.ತಾಲೂಕಿನ ಕಿರಗಂದೂರು ಗ್ರಾಮ ನಿವಾಸಿ ನಿಂಗರಾಜು ಮತ್ತು ಪವಿತ್ರ ದಂಪತಿಯ ಪುತ್ರ, ಬೆಂಗಳೂರಿನ ಖಾಸಗಿ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ವಿನೀತ್ (21) ಎಂಬಾತನೇ ಸಾವನ್ನಪ್ಪಿದವನಾಗಿದ್ದು, ನಿನ್ನೆ ದಿನ ಮೃತದೇಹದ ಅಂತ್ಯ ಸಂಸ್ಕಾರ ನಡೆಸಲಾಗಿದೆ. ತಾ. 27ರಂದು ಕಂಪೆನಿ ಕೆಲಸದ ನಿಮಿತ್ತ ತನ್ನ ಸಹಪಾಠಿಗಳೊಂದಿಗೆ ರೈಲಿನಲ್ಲಿ (ಮೊದಲ ಪುಟದಿಂದ) ಶಿವಮೊಗ್ಗಕ್ಕೆ ಆಗಮಿಸಿದ್ದ ವಿನೀತ್, ಅಂದೇ ಸಂಜೆ ಅಸ್ವಸ್ಥಗೊಂಡಿದ್ದಾನೆ. ತಾ. 28ರಂದು ಆಸ್ಪತ್ರೆಗೆ ದಾಖಲಾಗಿ ಪೋಷಕರಿಗೆ ಅನಾರೋಗ್ಯದ ಬಗ್ಗೆ ಮಾಹಿತಿ ನೀಡಿದ್ದಾನೆ. ತಾ. 29ರಂದು ಪೋಷಕರು ಶಿವಮೊಗ್ಗಕ್ಕೆ ತೆರಳಿದ ಸಂದರ್ಭ ವಿನೀತ್ ಸಾವನ್ನಪ್ಪಿರುವದು ಕಂಡುಬಂದಿದೆ. ಈತನ ಸಾವಿನ ಬಗ್ಗೆ ಸಂಶಯ ವ್ಯಕ್ತಪಡಿಸಿರುವ ಪೋಷಕರು, ಶಿವಮೊಗ್ಗ ಪೊಲೀಸರಿಗೆ ದೂರು ನೀಡಿದ್ದಾರೆ. ಮರಣೋತ್ತರ ಪರೀಕ್ಷೆ ನಡೆಸಿದ ನಂತರ ಮೃತದೇಹವನ್ನು ಕಿರಗಂದೂರಿಗೆ ತಂದು ಅಂತ್ಯಕ್ರಿಯೆ ನೆರವೇರಿಸಲಾಗಿದೆ.ತಾ. 27ರಂದು ಬೆಂಗಳೂರಿನಿಂದ ಶಿವಮೊಗ್ಗಕ್ಕೆ ರೈಲಿನಲ್ಲಿ ಬರುವ ಸಂದರ್ಭ, ವಿನೀತ್ ಸೇವಿಸಿದ ಆಹಾರದಲ್ಲಿ ವ್ಯತ್ಯಾಸವಾಗಿ ಹೊಟ್ಟೆನೋವು ಶುರುವಾಗಿತ್ತು. ಸಂಜೆ ಸಹಪಾಠಿಗಳು ಹೊರ ತೆರಳಿದರೂ ವಿನೀತ್ ಕೊಠಡಿಯಲ್ಲಿಯೇ ಇದ್ದ. ನಂತರ ಆರೋಗ್ಯದಲ್ಲಿ ಚೇತರಿಕೆ ಕಾಣದ ಹಿನ್ನೆಲೆ, ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೂ ಚಿಕಿತ್ಸೆ ಫಲಕಾರಿಯಾಗದೆ ವಿನೀತ್ ಸಾವನ್ನಪ್ಪಿದ್ದಾನೆ ಎಂದು ಹೇಳಲಾಗಿದ್ದು, ಮರಣೋತ್ತರ ಪರೀಕ್ಷೆಯ ಸಂಪೂರ್ಣ ವರದಿ ಬಂದ ನಂತರವಷ್ಟೇ ನಿಖರ ಕಾರಣ ತಿಳಿದುಬರಲಿದೆ.