ಯಾವುದೇ ಹೊಸ ಪ್ರದೇಶ, ಸ್ಥಳಗಳಿಗೆ ಪ್ರವಾಸ ಹೊರಡುವುದೆಂದರೆ ಅದೊಂದು ಸಂತೋಷದ ಸಮಯ. ಪರಿಚಯವಿಲ್ಲದ ಸ್ಥಳಗಳಲ್ಲಿ ಅಲ್ಲಿಯ ಭಾಷೆ,ಜನರೊಂದಿಗೆ ಬೆರೆಯುವುದು ಸಹಜವಾಗಿಯೇ ಇರುವಂತಹದ್ದು ಪ್ರವಾಸಿ ಸ್ಥಳಗಳ ಮಾಹಿತಿಗಳನ್ನು ಇಂಟರ್‍ನೆಟ್ ಹಾಗೂ ಪುಸ್ತಕಗಳಲ್ಲಿ ಓದಿ ತಿಳಿದುಕೊಂಡಿದ್ದರೂ ಸ್ಥಳದಲ್ಲಿ ಸಿಗುವ ಹೊಸ ಅನುಭವಗಳನ್ನು ವರ್ಣಿಸಲಸಾಧ್ಯ.
ಈ ಬಾರಿ ಕೊಡಗು ಪ್ರೆಸ್ ಕ್ಲಬ್ ಆಯೋಜಿಸಿದ್ದ ಕನ್ಯಾಕುಮಾರಿಯ ಸ್ವಾಮಿ ವಿವೇಕಾನಂದ ಧ್ಯಾನ ಮಾಡಿದ ಬಂಡೆ, ಧ್ಯಾನಾಶ್ರಮ, ತಿರುವಳ್ಳವರ್ ಪ್ರತಿಮೆ, ಸೂರ್ಯೋದಯ, ಸೂರ್ಯಾಸ್ತಮ, ವೀಕ್ಷಣೆ ಅದ್ಭುತ. ಕಣ್ಣೂರು ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣ ತಿರುವನಂತಪುರಂ, ಅನಂತ ಪದ್ಮನಾಭ ದೇಗುಲ, ಮ್ಯೂಸಿಯಂ, ಕೋವಳಮ್ ಬೀಚ್, ರಾಮೇಶ್ವರಂ ನಲ್ಲಿ ರಾಮೇಶ್ವರಂ ದೇಗುಲ, ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ವಾಸದ ಮನೆ, ಮ್ಯೂಸಿಯಂ, ಶ್ರೀಲಂಕಾ ಗಡಿಯಲ್ಲಿರುವ ಧನುಷ್‍ಕೋಡಿ, 1964ರಲ್ಲಿ ಚಂಡಮಾರುತದಿಂದ ನಾಶವಾದ ಊರು, ರಾಮನ ಸಹೋದರ ವಿಭಿಷಣನಿಗಾಗಿ ನಿರ್ಮಿಸಿದ ಕೋದಂಡ ರಾಮ ದೇಗುಲ, ದೇಶದ ಅತಿ ಉದ್ದನೆಯ ಮೂರುವರೆ ಕಿ.ಮೀ. ದೂರದ ಪಾಂಬನ್ ಸೇತುವೆ,ಅದ್ಬುತ ವಾಸ್ತುಶಿಲ್ಪದ ಮಧುರೈ ಮೀನಾಕ್ಷಿ ದೇವಾಲಯ,ವೀಕ್ಷಿಸಿದ ಜಿಲ್ಲೆಯ 34 ಪತ್ರಕರ್ತರ ಪೈಕಿ ಬಹುತೇಕ ಪತ್ರಕರ್ತರಿಗೆ ಇದು ಮೊದಲ ಪ್ರವಾಸದ ಭೇಟಿಯ ಊರುಗಳಾಗಿತ್ತು. ಮೊದಲ ಬಾರಿಗೆ ವಿಮಾನಯಾನ, ರೈಲ್ವೆ ಪಯಣದ ಅನುಭವ ಪಡೆದಿದ್ದಾರೆ. ಪ್ರವಾಸಿ ತಾಣಗಳಿಗೆ ತೆರಳಿದ ಸಂದರ್ಭ ನೂರಾರು ಅನುಭವಗಳು ಕಣ್ಣಮುಂದೆ ಹಾದುಹೋದವು. ಈ ಬಾರಿ ಹಮ್ಮಿಕೊಂಡಿದ್ದ ಪ್ರವಾಸಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಕೊಡಗಿನ ವಿವಿಧ ಭಾಗದ ಪತ್ರಕರ್ತರು ತಮ್ಮ ಅಮೂಲ್ಯ ಸಮಯವನ್ನು ಮೀಸಲಿಟ್ಟು 5 ದಿನಗಳ ಪ್ರವಾಸದಲ್ಲಿ ಪಾಲ್ಗೊಂಡಿರುವುದು ವಿಶೇಷವಾಗಿತ್ತು.
ವಿಮಾನದಲ್ಲಿ ಪ್ರಯಾಣಿಸಬೇಕೆಂಬ ಹಲವು ವರ್ಷಗಳ ಕನಸು ನನಸಾದ ದಿನವಾಗಿತ್ತು. ವಿಮಾನ ನಿಲ್ದಾಣ ಪ್ರವೇಶಿಸುವ ಸಂದರ್ಭ ಅನುಸರಿಸಬೇಕಾದ ಕ್ರಮಗಳು ಅಲ್ಲಿಯ ವ್ಯವಸ್ಥೆಗಳು ಕಂಡು ಬೆರಗಾಗಿದ್ದರು. ಮಟ್ಟನೂರಿನ ವಿಮಾನ ನಿಲ್ದಾಣದಲ್ಲಿ ಅಲ್ಲಿಯ ಸಿಬ್ಬಂದಿಗಳ ಸ್ವಾಗತ, ಒಳಾಂಗಣ ವಿದ್ಯುತ್ ದ್ವೀಪಗಳಿಂದ ಕಂಗೊಳಿಸುತ್ತಿದ್ದ ರೀತಿ ಇಲ್ಲಿಯ ಸಿಬ್ಬಂದಿಗಳು ಪ್ರತಿ ಹಂತದಲ್ಲೂ ಪ್ರವಾಸಿಗರನ್ನು ಅತ್ಯಂತ ವಿನಯದಿಂದ ಮಾತನಾಡಿಸುವ ಮೂಲಕ ತಮ್ಮೊಂದಿಗೆ ತೆಗೆಸಿಕೊಂಡ ಫೋಟೋ ನಿಜಕ್ಕೂ ಅವಿಸ್ಮರಣೀಯ. ವಿಮಾನ ಹತ್ತುವ ಸಂದರ್ಭ ವಿಮಾನದಲ್ಲಿರುವ ಗಗನ ಸಖಿಯರ ನಗುಮುಖದ ಸ್ವಾಗತ ಶ್ಲಾಘನೀಯ. ವಿಮಾನದಲ್ಲಿ ಪ್ರಯಾಣಿಕರು ಅನುಸರಿಸಬೇಕಾದ ನಿಬಂಧನೆಗಳ ಮಾಹಿತಿಯನ್ನು ಹತ್ತಿರದಿಂದಲೇ ನೋಡಿದ ಅನುಭವ. 17 ಸಾವಿರ ಅಡಿಗಳ ಎತ್ತರದಲ್ಲಿ ವಿಮಾನ ಸಾಗುತ್ತಿದ್ದ ಸಂದರ್ಭ ಗಗನ ಸಖಿಯರು ನೀಡಿದ ಮಾಹಿತಿಯಿಂದ ಕೆಲ ಕಾಲ ದಿಗ್ಬ್ರಮೆಗೊಂಡು ಭೂಮಿಯಿಂದ ನಾವೆಷ್ಟು ಎತ್ತರದಲ್ಲಿ ಸಾಗುತ್ತಿದ್ದೇವೆ ಎನ್ನಿಸಿತ್ತು. ಬಹುತೇಕ ಪತ್ರಕರ್ತರಿಗೆ ಇದು ಹೊಸ ಅನುಭವವಾಗಿತ್ತು.
ವಿಮಾನವು ರನ್‍ವೇಯಲ್ಲಿ ಸಾಗಿ ಹಾರಾಟ ಆರಂಭವಾದ ಕ್ಷಣ ಅತ್ಯಂತ ರೋಮಾಂಚಕಾರಿ ಅನುಭವ. ಒಮ್ಮೆಲೆ ಮುಗಿಲೆತ್ತರಕ್ಕೆ ತನ್ನ ಹಾರಾಟವನ್ನು ಮುಂದುವರೆಸುವ ಸಂದರ್ಭ ಮೈ ಜುಮ್ಮೆನ್ನಿಸುವ ಕ್ಷಣ ನಿಜಕ್ಕೂ ಅವಿಸ್ಮರಣಿಯ.ಆಕಾಶದಿಂದ ಭೂಮಿಯನ್ನು ನೋಡನೋಡುತ್ತಿದ್ದಂತೆ ಎಲ್ಲವೂ ಮಂಜುಮುಸುಕಿದ ದೊಡ್ಡ ದೊಡ್ಡ ಮಂಜುಗಡ್ಡೆಗಳಂತೆ ಭಾಸವಾಗುವ ಈ ಅನುಭವ ಜೀವನದಲ್ಲಿ ಮರೆಯಲಾಗದ ಕ್ಷಣಗಳಲ್ಲೊಂದು. ಮೋಡಗಳನ್ನು ನುಸುಳಿಕೊಂಡು ಮುಂದೆ ಸಾಗುವ ವಿಮಾನವು ಕೆಲವೊಂದು ಕ್ಷಣ ಮೋಡದಲ್ಲಿ ಅಲುಗಾಡುವ ಸನ್ನಿವೇಶಗಳು ಕೂಡ ಕಣ್ಣಿನಿಂದ ನೋಡಿದ ಅನುಭವ ಅತ್ಯಂತ ರೋಮಾಂಚನಕಾರಿ. ಅನುಭವ ಮರೆಯಲಾಗದು. ವಿಶ್ವ ಪ್ರಸಿದ್ಧ ಕನ್ಯಾಕುಮಾರಿಯ ಸ್ವಾಮಿ ವಿವೇಕಾನಂದ ಧ್ಯಾನ ಮಾಡಿದ ಬಂಡೆ, ಧ್ಯಾನಾಶ್ರಮ,ತಿರುವಳ್ಳವರ್ ಪ್ರತಿಮೆ, ಸಾವಿರಾರು ಕಲ್ಲಿನ ಕಲಾಕೃತಿಗಳಿಂದ ನಿರ್ಮಾಣಗೊಂಡಿರುವುದು, ವಿಶೇಷವಾಗಿ ಸಮುದ್ರದ ಮಧ್ಯಭಾಗದಲ್ಲಿ ನೆಲೆ ನಿಂತಿರುವ ಈ ಮಂದಿರ ಎಲ್ಲರನ್ನು ಮಂತ್ರಮುಗ್ದರನ್ನಾಗಿಸುತ್ತಿದೆ. ಮುಂಜಾನೆಯ ಸೂರ್ಯೋದಯವನ್ನು ವೀಕ್ಷಿಸಲು ಸಮುದ್ರದ ತೀರದಲ್ಲಿ ಸೇರುವ ಅಸಂಖ್ಯಾತ ಪ್ರವಾಸಿಗರು ತಮ್ಮ ಮೊಬೈಲ್‍ನಲ್ಲಿ ಈ ಚಿತ್ರವನ್ನು ಸೆರೆ ಹಿಡಿಯುವ ಕಾತರ ಅತ್ಯಂತ ಸುಂದರ ಸಂಜೆಯಾಗುತ್ತಿದ್ದಂತೆಯೇ ಸಮೀಪದ ಮೂರು ಕಿ.ಮೀ. ದೂರದ ಸಮುದ್ರ ತೀರದಲ್ಲಿ ಸೂರ್ಯಾಸ್ತಮ ವಾಗುವುದನ್ನು ವೀಕ್ಷಿಸಲು ಸಾಗರೋಪಾದಿಯಲ್ಲಿ ಪ್ರವಾಸಿಗರು ಗೋಚರಿಸುತ್ತಾರೆ. ಸೂರ್ಯಸ್ತಮವನ್ನು ಕಣ್ತುಂಬಿಕೊಂಡು ಮರಳುವಾಗ ಇಷ್ಟು ಬೇಗನೇ ಸಮಯ ಕಳೆದುಹೋಯಿತು ಎನಿಸದಿರದು.
30 ಕಿ.ಮೀ. ದೂರದಲ್ಲಿರುವ ಶ್ರೀಲಂಕಾ ಗಡಿಯಲ್ಲಿರುವ ಧನುಷ್ ಕೋಡಿಯ ಪ್ರವಾಸಿ ತಾಣದಲ್ಲಿ ನೂರಾರು ಕುಟುಂಬಗಳು ಮೀನುಗಾರಿಕೆಯ ಜೀವನ ಸಾಗಿಸುತ್ತಿದ್ದಾರೆ. ಈ ಪ್ರದೇಶವು ಅರಣ್ಯ ಇಲಾಖೆಯ ವ್ಯಾಪ್ತಿಗೆ ಒಳಪಟ್ಟಿದೆ. ಈ ಪ್ರದೇಶದಲ್ಲಿ ಇಂದಿಗೂ ವಿದ್ಯುತ್ ಸೌಕರ್ಯವಿಲ್ಲ. ರಸ್ತೆಯ ಉದ್ದಗಲಕ್ಕೂ ಸಮುದ್ರದಿಂದ ಬಂದು ಶೇಖರಣೆಗೊಂಡ ಮರಳು ರಾಶಿ ಪ್ರವಾಸಿಗರನ್ನು ಸ್ವಾಗತಿಸುತ್ತದೆ. ಧನುಷ್‍ಕೋಡಿಯಿಂದ ಕೇವಲ 18 ಕಿ.ಮೀ. ಕ್ರಮಿಸಿದರೆ ಶ್ರೀಲಂಕಾ ಪ್ರವೇಶಿಸಬಹುದು. ಸುತ್ತಲೂ ಸಮುದ್ರ ಆವರಿಸಿಕೊಂಡಿದ್ದು ಈ ಪ್ರದೇಶಕ್ಕೆ ರಸ್ತೆ ಮಾರ್ಗ ಕೊನೆಯಾಗಿದೆ.ಸಮೀಪದಲ್ಲಿ 1964ರಲ್ಲಿ ಚಂಡಮಾರುತದಿಂದ ನಾಶವಾದ ಊರು ನೋಡಬಹುದಾಗಿದ್ದು ದೇವಸ್ಥಾನ, ಚರ್ಚ್ ಮನೆಗಳ ಅವಶೇಷಗಳು ಕಾಣಬಹುದಾಗಿದೆ.
ರಾಮೇಶ್ವರಂದಲ್ಲಿ ದೇಶದ ರಾಷ್ಟ್ರಪತಿ ಡಾ. ಎ.ಪಿ.ಜೆ.ಅಬ್ದುಲ್ ಕಲಾಂ ವಾಸಿಸುತ್ತಿದ್ದ ಮನೆಯು ನೋಡಬಹುದಾಗಿದ್ದು ಈ ಮನೆಯಲ್ಲಿ ಇವರ ಸಹೋದರ ವಾಸವಿದ್ದಾರೆ. ಇವರ ಮನೆಯ ಮೇಲ್ಭಾಗದಲ್ಲಿ ಕಲಾಂರವರ ಭಾವಚಿತ್ರಗಳು,ಇವರು ಪಡೆದ ಪ್ರಶಸ್ತಿಗಳು, ಕಾಣಬಹುದಾಗಿದೆ. ಅನತಿ ದೂರದ ಮುಖ್ಯ ರಸ್ತೆಯಲ್ಲಿ ಸಿಗುವ ಕಲಾಂರವರ ಮ್ಯೂಸಿಯಂ ಎಲ್ಲರನ್ನು ಕೈ ಬೀಸಿ ಕರೆಯುತ್ತಿದೆ. ವಿಸ್ತಾರವಾದ ಪ್ರದೇಶದಲ್ಲಿ ನೆಲೆ ನಿಂತಿರುವ ಈ ಮ್ಯೂಸಿಯಂನಲ್ಲಿ ಕಲಾಂರವರ ಬದುಕಿನ ಪಯಣ,ದೇಶಕ್ಕಾಗಿ ಸಲ್ಲಿಸಿದ ಸೇವೆ ಪ್ರತಿ ಕೊಠಡಿಗಳಲ್ಲಿಯೂ ಚಿತ್ರ, ಕಲಾಕೃತಿ ಸಹಿತ ತೋರಿಸುತ್ತಿವೆ. ಹೊರಭಾಗದಲ್ಲಿ ಸುಂದರವಾದ ಉದ್ಯಾನವನವು ಅಚ್ಚುಕಟ್ಟಾಗಿ ನಿರ್ವಹಣೆಯಾಗುತ್ತಿದೆ. ಪ್ರತಿ ನಾಗರಿಕನು ನೋಡಲೇಬೇಕಾದ ಅದ್ಬುತ ತಾಣಗಳಲ್ಲಿ ಇದೊಂದು. ದೇಶದ ಅತಿ ಉದ್ದನೆಯ ಮೂರುವರೆ ಕಿ.ಮೀ. ದೂರದ ಪಾಂಬನ್ ಸೇತುವೆಯ ಮೇಲೆ ನಿಂತಾಗ ಸಮುದ್ರದಿಂದ ಬೀಸುವ ರಭಸದ ಗಾಳಿ ಮುದ ನೀಡುತ್ತದೆ. ರಾಮೇಶ್ವರಂ ದೇಗುಲ, ಮಧುರೈ ಮೀನಾಕ್ಷಿ ದೇವಾಲಯ, ರಾಮನ ಸಹೋದರ ವಿಭಿಷಣನಿಗಾಗಿ ನಿರ್ಮಿಸಿದ ಕೋದಂಡ ರಾಮ ದೇಗುಲ, ದೇಶದ ಅತಿ ಅದ್ಬುತ ವಾಸ್ತುಶಿಲ್ಪ ಎಲ್ಲರನ್ನು ಮಂತ್ರಮುಗ್ದರನ್ನಾಗಿಸಿದೆ. ಕನ್ಯಾಕುಮಾರಿಯ ಪ್ರವಾಸವು ಹಲವು ನೆನಪುಗಳು ನೂರಾರು ಅನುಭವಗಳು ತಂದಿವೆ. - ಹೆಚ್.ಕೆ. ಜಗದೀಶ್