ಮಡಿಕೇರಿ ಜ. 30: ರಾಜ್ಯದ ಸೌಹಾರ್ದ ಸಹಕಾರಿ ಸಂಸ್ಥೆಗಳು ತೆರಿಗೆ ವಿನಾಯಿತಿಗೆ ಅರ್ಹ ಎಂದು ರಾಜ್ಯ ಉಚ್ಛ ನ್ಯಾಯಾಲಯ ತೀರ್ಪು ನೀಡಿದ್ದು, ಈ ಸಂಬಂಧ ಎರಡು ವರ್ಷಗಳಿಂದ ಸರಕಾರ, ತೆರಿಗೆ ಇಲಾಖೆ ಮತ್ತು ಸೌಹಾರ್ದ ಸಹಕಾರ ಸಂಸ್ಥೆಗಳ ನಡುವೆ ನಡೆಯುತ್ತಿದ್ದ ಕಾನೂನು ಹೋರಾಟಕ್ಕೆ ತೆರೆ ಬಿದ್ದಂತಾಗಿದೆ.

ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ಹಾಗೂ ದಾಖಲೆಗಳನ್ನು ನೀಡಿದ ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ನಿಯಮಿತದ ಮಾಜಿ ನಿರ್ದೇಶಕ ಮದ್ರೀರ ಕೆ.ಸೋಮಯ್ಯ ‘ರಾಜ್ಯದ ಸ್ವಾಯತ್ತ ಸಹಕಾರ ಕಾಯ್ದೆಯಾದ ಸೌಹಾರ್ದ ಸಹಕಾರಿ ಅಧಿನಿಯಮದಡಿ ನೋಂದಾಯಿಸಲ್ಪಟ್ಟ ಸೌಹಾರ್ದ ಸಹಕಾರಿ ಸಂಸ್ಥೆಗಳು ಸಹಕಾರಿ ಸಂಘಗಳಲ್ಲ’ ಎಂದು ವ್ಯಾಖ್ಯಾನಿಸಿದ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು, ಈ ಹಿನ್ನೆಲೆಯಲ್ಲಿ ತೆರಿಗೆ ಕಟ್ಟಬೇಕೆಂದು ನೋಟೀಸ್ ಹಾಗೂ ಆದೇಶಗಳನ್ನು ನೀಡುತ್ತಿದ್ದರು. ಇದು ಸೌಹಾರ್ದ ಸಹಕಾರಿಗಳಲ್ಲಿ ಆತಂಕವನ್ನು ಉಂಟು ಮಾಡಿದ ಹಿನ್ನೆಲೆಯಲ್ಲಿ ಸೌಹಾರ್ದ ಸಹಕಾರ ಕ್ಷೇತ್ರದ ಮಾತೃ ಸಂಸ್ಥೆಯಾದ ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ಮೂಲಕ ಕಳೆದ ಎರಡು ವರ್ಷಗಳಿಂದ ಕೇಂದ್ರ, ರಾಜ್ಯ ಸರಕಾರಗಳು, ಪ್ರಧಾನ ಮಂತ್ರಿ, ಹಣಕಾಸು ಸಚಿವರು, ಸಿಬಿಡಿಟಿ ಅಧ್ಯಕ್ಷರು ಮುಂತಾದವರನ್ನು ಭೇಟಿ ಮಾಡಲಾಗಿತ್ತು ಎಂದರು.

ನಿರಂತರವಾಗಿ ಆದಾಯ ತೆರಿಗೆ ಸಮಸ್ಯೆ ಪರಿಹಾರಕ್ಕೆ ಪ್ರಯತ್ನ ನಡೆಸಲಾಗಿತ್ತು. ಅಲ್ಲದೆ ತಜ್ಞರೊಂದಿಗೆ ಸಮಾಲೋಚಿಸಿ ರಾಜ್ಯ ಉಚ್ಛ ನ್ಯಾಯಾಲಯದಲ್ಲಿ ಪ್ರಕರಣವನ್ನೂ ದಾಖಲಿಸಲಾಗಿತ್ತು ಎಂದು ಹೇಳಿದರು.

ಸೌಹಾರ್ದ ಸಹಕಾರಿ ಸಂಸ್ಥೆಗಳು ಸ್ವಾಯತ್ತ ಸಹಕಾರಿ ಸಂಸ್ಥೆಗಳಾಗಿದ್ದು, ಇದರಲ್ಲಿ ಸರಕಾರ ಹಾಗೂ ಅಧಿಕಾರಿಗಳ ಯಾವುದೇ ಹಸ್ತಕ್ಷೇಪಕ್ಕೆ ಅವಕಾಶವಿಲ್ಲ. ಸಹಕಾರ ಸಂಘಗಳು ಆದಾಯ ತೆರಿಗೆ ವ್ಯಾಪ್ತಿಯಿಂದ ಹೊರಗಿರುವಾಗ ಸೌಹಾರ್ದ ಸಹಕಾರಿ ಸಂಸ್ಥೆಗಳನ್ನು ಆದಾಯ ತೆರಿಗೆ ವ್ಯಾಪ್ತಿಗೆ ತಂದಿರುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ರಿಟ್ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ಇದೀಗ ಜ.16ರಂದು ಆದೇಶ ಹೊರಡಿಸಿ ಸೌಹಾರ್ದ ಸಹಕಾರಿಗಳು ಕೂಡ ಸಹಕಾರಿ ಸಂಸ್ಥೆಗಳಾಗಿದ್ದು, ಅವುಗಳು ಕೂಡಾ ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 80ಪಿ(2)ರಡಿ ತೆರಿಗೆ ವಿನಾಯಿತಿ ಪಡೆಯಲು ಅರ್ಹ ಎಂದು ಸ್ಪಷ್ಟವಾಗಿ ತಿಳಿಸಿದೆ ಎಂದು ವಿವರಿಸಿದರು.

ಸೌಹಾರ್ದ ಸಹಕಾರ ಕ್ಷೇತ್ರದ ಆದಾಯ ತೆರಿಗೆ ನಿವಾರಣೆ ದೃಷ್ಟಿಯಿಂದ ಸೌಹಾರ್ದ ಸಹಕಾರಿಗಳು ಕೂಡಾ ಸಹಕಾರ ಸಂಘಗಳೆಂದು ಆದ್ಯಾದೇಶ ಹೊರಡಿಸುವಂತೆ ಮುಖ್ಯಮಂತ್ರಿಗಳು, ಗೃಹ ಹಾಗೂ ಸಹಕಾರ ಸಚಿವ ಬಸವರಾಜ ಬೊಮ್ಮಾಯಿ ಅವರನ್ನು ಕೋರಲಾಗಿದ್ದು, ಇದಕ್ಕೆ ಅವರಿಂದ ಒಪ್ಪಿಗೆ ದೊರೆತು ಆದ್ಯಾದೇಶ ಹೊರಡಿಸುವ ಅಥವಾ ಕಾಯ್ದೆ ತಿದ್ದುಪಡಿ ಮಾಡುವ ಪ್ರಕ್ರಿಯೆ ಈಗಾಗಲೇ ಆರಂಭವಾಗಿದೆ ಎಂದು ಸೋಮಯ್ಯ ತಿಳಿಸಿದರಲ್ಲದೆ, ನ್ಯಾಯಾಲಯದ ಈ ತೀರ್ಪು ಸೌಹಾರ್ದ ಸಹಕಾರಿಗಳಿಗೆ ಪೂರಕವಾಗಿದೆ ಎಂದು ಅಭಿಪ್ರಾಯಪಟ್ಟರು.

ಹಣಕಾಸು ಸಚಿವರ ಭೇಟಿ: ಈ ತೊಂದರೆ ಕೇವಲ ಸೌಹಾರ್ದ ಸಹಕಾರ ಕ್ಷೇತ್ರಕ್ಕೆ ಮಾತ್ರ ಮೀಸಲಾಗಿದ್ದರೆ, ಇದನ್ನು ಹೊರತುಪಡಿಸಿ ಸಮಗ್ರ ಸಹಕಾರ ಕ್ಷೇತ್ರಕ್ಕೆ ಆದಾಯ ತೆರಿಗೆಯ ಅನೇಕ ತೊಂದರೆಗಳು ಎದುರಾಗಿದ್ದು, ಇದನ್ನು ಪರಿಹರಿಸುವಂತೆ ಒತ್ತಾಯಿಸಲು ಈಗಾಗಲೇ ಕೇಂದ್ರ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ಅವರನ್ನು ಸಹಕಾರ ಭಾರತಿ ಮೂಲಕ ಭೇಟಿ ಮಾಡಿ ಮನವಿ ಸಲ್ಲಿಸಲಾಗಿದೆ. ಇದಕ್ಕೆ ಸ್ಪಂದಿಸುವ ಭರವಸೆಯನ್ನು ಸಚಿವರು ನೀಡಿದ್ದಾರೆ ಎಂದೂ ಸೋಮಯ್ಯ ಅವರು ತಿಳಿಸಿದರು.

ಸಹಕಾರ ಸಂಸ್ಥೆಗಳಿಗೆ ಆದಾಯ ತೆರಿಗೆ ಕಾಯ್ದೆ 80ಪಿ ಅಡಿಯಲ್ಲಿ ತೆರಿಗೆ ವಿನಾಯಿತಿ ಇದ್ದರೂ, ಆದಾಯ ತೆರಿಗೆ ಅಧಿಕಾರಿಗಳು ನೋಟೀಸ್ ನೀಡಿ ವಿನಾ ಕಾರಣ ಗೊಂದಲ ಮೂಡಿಸುತ್ತಿರುವುದು, ರಾಜ್ಯ ಕಾಯ್ದೆಯಲ್ಲಿರುವ ಸಹ ಸದಸ್ಯರು ಹಾಗೂ ನಾಮ ಮಾತ್ರ ಸದಸ್ಯರ ಅವಕಾಶವನ್ನು ಪರಿಗಣಿಸದೆ ಇವರೊಂದಿಗಿನ ವ್ಯವಹಾರಕ್ಕೆ ತೆರಿಗೆ ವಿಧಿಸುತ್ತಿರುವುದು, ಸಹಕಾರ ಬ್ಯಾಂಕ್‍ಗಳಿಗೆ ಅನ್ವಯವಾಗುವ ಪ್ರಾವಧಾವನ್ನು ಸಹಕಾರ ಸಂಸ್ಥೆಗಳಿಗೂ ಅನ್ವಯಿಸುತ್ತಿರುವುದು, ಸಹಕಾರಿಗಳು ಬ್ಯಾಂಕ್‍ನಲ್ಲಿಟ್ಟಿರುವ ಮೀಸಲು ನಿಧಿಗಳ ಮೇಲಿನ ಬಡ್ಡಿಗೆ ತೆರಿಗೆ ಪಾವತಿಸಲು ಸೂಚಿಸುತ್ತಿರುವುದು, ಸಹಕಾರಿ ಕ್ಷೇತ್ರಗಳಿಗೆ ಮಾರಕವಾಗಿರುವ ಸೆಕ್ಷನ್‍ಗಳಾದ 269ಎಸ್‍ಟಿ, 194ಎನ್ ಮೂಲಕ ನಗದು ವ್ಯವಹಾರಕ್ಕೆ ಕಡಿವಾಣ ಹಾಕುತ್ತಿರುವುದರ ಬಗ್ಗೆ ಸಚಿವರ ಗಮನ ಸೆಳೆಯಲಾಗಿದೆ ಎಂದು ಸೋಮಯ್ಯ ವಿವರಿಸಿದರು. ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿಯ ಜಿಲ್ಲಾ ಸಂಯೋಜಕ ಆರ್.ಎಸ್.ಸುರೇಶ್ ಮಾತನಾಡಿ, ರಾಜ್ಯದಲ್ಲಿ ಸುಮಾರು 4500ಕ್ಕೂ ಅಧಿಕ ಸೌಹಾರ್ದ ಸಹಕಾರಿಗಳಿದ್ದು, ಕೊಡಗು ಜಿಲ್ಲೆಯಲ್ಲಿ 10 ಸೌಹಾರ್ದ ಸಹಕಾರಿ ಸಂಸ್ಥೆಗಳು ಹಾಗೂ 3800ಕ್ಕೂ ಅಧಿಕ ಸದಸ್ಯರಿದ್ದಾರೆ. ಹಲವು ಸಹಕಾರಿ ಸಂಘಗಳು ಸೌಹಾರ್ದ ಸಹಕಾರಿಗಳಾಗಿ ಪರಿವರ್ತನೆಗೊಂಡಿದ್ದು, ಜಿಲ್ಲೆಯಲ್ಲಿ ಸೌಹಾರ್ದ ಸಹಕಾರಿ ಸಂಸ್ಥೆಗಳನ್ನು ಆರಂಭಿಸಲು ಇಚ್ಛಿಸುವವರಿಗೆ ಸೂಕ್ತ ಮಾರ್ಗದರ್ಶನ ಮಾಡಲಾಗುವುದು ಎಂದು ಹೇಳಿದರು.

ಗೋಷ್ಠಿಯಲ್ಲಿ ಕೊಡಗು ಸೌಹಾರ್ದ ಪತ್ತಿನ ಸಹಕಾರಿಯ ಅಧ್ಯಕ್ಷ ಚೋವಂಡ ಡಿ. ಕಾಳಪ್ಪ, ಕೊಡಗು ವಿದ್ಯಾ ಇಲಾಖೆ ನೌಕರರ ಪತ್ತಿನ ಸೌಹಾರ್ದ ಸಹಕಾರಿಯ ಅಧ್ಯಕ್ಷ ಡಿ.ಬಿ. ಸೋಮಪ್ಪ ಹಾಗೂ ನಾಪೋಕ್ಲು ನಾಡ್ ಕೊಡವ ಸೌಹಾರ್ದ ಪತ್ತಿನ ಸಹಕಾರಿಯ ಅಧ್ಯಕ್ಷ ಎ.ಎಸ್. ಅಯ್ಯಪ್ಪ ಉಪಸ್ಥಿತರಿದ್ದರು.