ಗೋಣಿಕೊಪ್ಪ ವರದಿ, ಜ. 30: ಇಲ್ಲಿನ ಕಕೂನ್ ಸಭಾಂಗಣದಲ್ಲಿ ಪಿ. ಆಂಡ್ ಜಿ ಕ್ರಿಯೇಷನ್ ಆಯೋಜಿಸಿದ್ದ ಬಾವ ಬಟ್ಟೆಲ್ (ಬದುಕಿನ ಹಾದಿಯಲ್ಲಿ) ಎಂಬ ಕೊಡವ ಕಿರು ಸಿನೆಮಾವನ್ನು ಉದ್ಯಮಿ ಮಚ್ಚಮಾಡ ಅನೀಶ್ ಮಾದಪ್ಪ ಹಾಗೂ ನಿರ್ಮಾಪಕ ಕೊಟ್ಟ್‍ಕತ್ತೀರ ಪ್ರಕಾಶ್ ಕಾರ್ಯಪ್ಪ ಬಿಡುಗಡೆಗೊಳಿಸಿದರು.
ಪಿ. ಆಂಡ್ ಜಿ ಕ್ರಿಯೇಷನ್ ಪ್ರಮುಖರಾದ ಬಾಳೆಯಡ ಪ್ರತೀಸ್ ಪೂವಯ್ಯ ಹಾಗೂ ಆಚೆಯಡ ಗಗನ್ ಗಣಪತಿ ಅವರ ಪ್ರಯತ್ನದಿಂದ ಕೊಡಗಿನ ಆಚಾರ-ವಿಚಾರವನ್ನು ಸಿನೆಮಾದ ಮೂಲಕ ತಲುಪಿಸಲು ಕಾರಣವಾಗುತ್ತಿದೆ ಎಂಬ ಅಭಿಪ್ರಾಯ ವ್ಯಕ್ತವಾಯಿತು.
ಕಥೆಗಾರ್ತಿ ಉಳುವಂಗಡ ಕಾವೇರಿ ಉದಯ ಅವರಿಂದ ಕಥೆ ಮೂಲಕ ಕೊಡಗಿನ ಸಂಸ್ಕøತಿಯನ್ನು ಉಳಿಸುವ ಪ್ರಯತ್ನ ನಡೆದಿದೆ. ನಿರ್ದೇಶನದ ಮೂಲಕ ಮಂಡುವಂಡ ಪ್ರಜ್ವಲ್ ಮಂದಣ್ಣ ಜನರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ವೀಕ್ಷಕರು ಅಭಿಪ್ರಾಯ ಹಂಚಿಕೊಂಡರು.
ಯುಕೋ ಸಂಘಟನೆ ಸಂಚಾಲಕ ಕೊಕ್ಕಲೆಮಾಡ ಮಂಜು ಚಿಣ್ಣಪ್ಪ ಮಾತನಾಡಿ, ಧನಾತ್ಮಕ ಚಿಂತನೆಯಲ್ಲಿ ಸಿನೆಮಾ ನಿರ್ಮಾಣಕ್ಕೆ ಮುಂದಾಗಬೇಕಿದೆ ಎಂದರು.
ಪೊನ್ನಂಪೇಟೆ ಕೊಡವ ಸಮಾಜ ಅಧ್ಯಕ್ಷ ಚೊಟ್ಟೆಕ್‍ಮಾಡ ರಾಜೀವ್ ಬೋಪಯ್ಯ ಮಾತನಾಡಿ, ಕೊಡವರ ಇತಿಹಾಸದ ಬಗ್ಗೆ ಸಿನೆಮಾ ನಿರ್ಮಾಣವಾಗಬೇಕೆಂದರು.
ಮೊಮ್ಮಗಳ ಪಾತ್ರದಲ್ಲಿ ತೇಜಸ್ವಿನಿ ಶರ್ಮ, ಅಜ್ಜಿಯ ಪಾತ್ರದಲ್ಲಿ ತಾತಂಡ ಪ್ರಭಾ ನಾಣಯ್ಯ, ತಂದೆಯ ಪಾತ್ರದಲ್ಲಿ ಬಿದ್ದಂಡ ಉತ್ತಮ್ ಕಾಣಿಸಿಕೊಂಡಿದ್ದಾರೆ.
ಈ ಸಂದರ್ಭ ನಟ ವಾಂಚೀರ ನಾಣಯ್ಯ, ಜಯ ನಂಜಪ್ಪ, ಸುಜಾ ನಾಣಯ್ಯ, ಮಲ್ಲಮಾಡ ಶ್ಯಾಮಲಾ, ನೆಲ್ಲಚಂಡ ಹೇಮಾ ಪಾಲ್ಗೊಂಡಿದ್ದರು.