ಮಡಿಕೇರಿ, ಜ. 29: ಕೊಡಗು ಜಿಲ್ಲೆಯಲ್ಲಿ ಯಾವದೇ ಇಲಾಖೆಯ ಹೊಣೆಗಾರಿಕೆ ನಿರ್ವಹಿಸಲು ಅಧಿಕಾರಿಗಳು ಬರುವುದಿಲ್ಲ ಎಂಬ ಆರೋಪವಿದೆ. ಇನ್ನೊಂದೆಡೆ ಇರುವ ಅಧಿಕಾರಿಗಳನ್ನು ಕೆಲವರು ಕೆಲಸ ನಿರ್ವಹಿಸಲು ಬಿಡುತ್ತಿಲ್ಲ ಎಂಬ ಅಸಮಾಧಾನದ ಮಾತುಗಳಿವೆ. ಇದಕ್ಕೆ ಸಾಕ್ಷಿಯೆಂಬಂತೆ ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಅಭಿಯಂತರರಾಗಿ ಕೆಲಸ ನಿರ್ವಹಿಸಿದವರು ಇಂದು ಕಾಣುತ್ತಿಲ್ಲ. ಅಂತೆಯೇ ಪಂಚಾಯತ್ ರಾಜ್ ಇಲಾಖೆಯ ಸಹಾಯಕ ಕಿರಿಯ ಅಭಿಯಂತರರಿಗೂ ಕೆಲಸವಿಲ್ಲ!ಕಳೆದ ಎರಡು ವರ್ಷಗಳಲ್ಲಿ ಮಳೆಗಾಲದ ನಡುವೆ ಸಂಭವಿಸಿದ ಭೂಕುಸಿತ, ಭಾರೀ ಮರಳು ಧರೆಗುರುಳಿದ ದಿನಗಳಲ್ಲಿ ಲೋಕೋಪಯೋಗಿ ಅಭಿಯಂತರ ಇಬ್ರಾಹಿಂ ಹಾಗೂ ಪಂಚಾಯತ್ ರಾಜ್ ಕಿರಿಯ ಇಂಜಿನಿಯರ್ ಗವಿಸಿದ್ದಯ್ಯ ಮತ್ತಿತರರು ಹಗಲಿರುಳೆನ್ನದೆ ಶ್ರಮಿಸಿದ್ದು, ಎಲ್ಲರಿಗೆ ತಿಳಿದಿರುವ ಅಂಶ.

ಇತ್ತೀಚಿನ ದಿನಗಳಲ್ಲಿ ಈ ಇಬ್ಬರು ಅಧಿಕಾರಿಗಳು ಕೆಲವರ ಕೆಂಗಣ್ಣಿಗೆ ಗುರಿಯಾಗಿದ್ದು, ಸುಮಾರು ಒಂದು ತಿಂಗಳಿನಿಂದ ಇಂಜಿನಿಯರ್ ಇಬ್ರಾಹಿಂ ಅವರು ಕಚೇರಿ ಕೆಲಸದಿಂದ ಹೊರಗುಳಿದಿದ್ದಾರೆ. ಅದೇ ರೀತಿ ಗವಿಸಿದ್ದಯ್ಯ ಅವರನ್ನು ಹಠಾತ್ ದೂರದ ಗುಲ್ಬರ್ಗಕ್ಕೆ ವರ್ಗಾಯಿಸಲಾಗಿತ್ತು. ಅವರು ಸಂಬಂಧಿಸಿದ ಇಲಾಖೆಯ ನ್ಯಾಯಮಂಡಳಿ ಮೊರೆ ಹೋಗಿ ಈ ಆದೇಶಕ್ಕೆ ತಡೆಯಾಜ್ಞೆ ತಂದಿದ್ದಾರೆ.

ಹೀಗಿದ್ದರೂ ಅವರಿಗೆ ಕರ್ತವ್ಯಕ್ಕೆ ಅವಕಾಶವಾಗಿಲ್ಲ. ಒಟ್ಟಿನಲ್ಲಿ ಎರಡು ವರ್ಷದ ಮಳೆಗಾಲ ಜಿಲ್ಲೆಯ ವಿಪತ್ತಿಗೆ ಎದುರಾಗಿ ಕೆಲಸ ಮಾಡಿರುವ ಅಧಿಕಾರಿಗಳಿಬ್ಬರು ಇಂದು ತ್ರಿಶಂಕುಗೊಂಡಿದ್ದು, ನಿಖರ ಕಾರಣ ತಿಳಿದು ಬಂದಿಲ್ಲ.