ಮಡಿಕೇರಿ, ಜ. 30: 2019 ರಲ್ಲಿ ಕೊಡಗಿನಲ್ಲಿ ಪ್ರವಾಸಿಗರ ಆಗಮನದ ಸಂಖ್ಯೆ ಈ ಹಿಂದಿನ ದಾಖಲೆ ಮುರಿದಿದೆ. ಜನವರಿಯಿಂದ ಡಿಸೆಂಬರ್‍ವರೆಗೆ 22 ಲಕ್ಷಕ್ಕೂ ಅಧಿಕ ಅಂದರೆ, 22,22,197 ಮಂದಿ ಪ್ರವಾಸಿಗರು ಜಿಲ್ಲೆಗೆ ಭೇಟಿಯಿತ್ತಿದ್ದಾರೆ. ಈ ಪೈಕಿ 5,552 ಮಂದಿ ವಿದೇಶೀ ಪ್ರವಾಸಿಗರಾಗಿದ್ದಾರೆ. ಜಿಲ್ಲಾ ಪ್ರವಾಸೋದ್ಯಮ ಸಹಾಯಕ ನಿರ್ದೇಶಕ ರಾಘವೇಂದ್ರ ಹಾಗೂ ಜಿಲ್ಲಾ ಪ್ರವಾಸೋದ್ಯಮ ಸಮಾಲೋಚಕರಾದ. ಚೇತನ್ ಅವರು ಈ ಕುರಿತು "ಶಕ್ತಿ"ಗೆ ಮಾಹಿತಿಯಿತ್ತಿ ದ್ದಾರೆ.ಜಿಲ್ಲೆಯ ಬಹುತೇಕ ಪ್ರಮುಖ ಪ್ರವಾಸಿ ಕೇಂದ್ರಗಳಲ್ಲಿ ನಮೂದಿಸಿರುವ ಪ್ರವಾಸಿಗರ ಆಗಮನದ ದಾಖಲೆ ಪ್ರಕಾರ ಕಳೆದ ಡಿಸೆಂಬರ್ ತಿಂಗಳಿನಲ್ಲಿ ಕಲ್ಪನೆಗೂ ಮೀರಿದಷ್ಟು ಪ್ರವಾಸಿಗರು ಕೊಡಗಿನ ಪ್ರವಾಸೀ ತಾಣಗಳಿಗೆ ಭೇಟಿಯಿತ್ತು ಪ್ರಾಕೃತಿಕ ಸೊಬಗನ್ನು ಸವಿದಿದ್ದಾರೆ, ಡಿಸೆಂಬರ್‍ನಲ್ಲಿ ಕೊಡಗಿನ ಪ್ರಮುಖ ಪ್ರವಾಸೀ ತಾಣಗಳಿಗೆ ಭೇಟಿ ನೀಡಿದ ಪ್ರವಾಸಿಗರ ಸಂಖ್ಯೆ 3 ಲಕ್ಷಕ್ಕೂ ಅಧಿಕ ಅಂದರೆ, 3,14,270 ಮಂದಿ. ಕಳೆದ ಸಾಲಿನಲ್ಲಿ ಅಧಿಕ ಮಳೆ ಪ್ರವಾಹದಿಂದ ವಿಕೋಪ ಪರಿಸ್ಥಿತಿಯಿದ್ದ ಆಗಸ್ಟ್ ತಿಂಗಳಿನಲ್ಲಿ ಅತಿ ಕಡಿಮೆ ಅಂದರೆ, 1,04,554 ಪ್ರವಾಸಿಗರು ಬಂದಿದ್ದರು. ಉಳಿದಂತೆ ಜನವರಿಯಲ್ಲಿ 2,17,990, ಫೆಬ್ರವರಿಯಲ್ಲಿ 1,10,708, ಮಾರ್ಚ್ ತಿಂಗಳಿನಲ್ಲಿ 1,11,107, ಏಪ್ರ್ರಿಲ್‍ನಲ್ಲಿ 1,36.490, ಮೇ ತಿಂಗಳಿನಲ್ಲಿ 2,48,651, ಜೂನ್‍ನಲ್ಲಿ 1,92,778, ಜುಲೈನಲ್ಲಿ 1,87,552, ಸೆಪ್ಟೆಂಬರ್‍ನ ಮಳೆ ಸಂದರ್ಭವೂ ಕೂಡ 1,25,860 ಮಂದಿ ಆಗಮಿಸಿದ್ದಾರೆ, ದಸರಾ ಕಾವೇರಿ ಸಂಕ್ರಮಣಗಳ ಪರ್ವ ಕಾಲಗಳ ಮಾಸವಾದ ಅಕ್ಟೋಬರ್‍ನಲ್ಲಿ 2,66,856 ಹಾಗೂ ನವೆಂಬರ್ ತಿಂಗಳಿನಲ್ಲಿ 2,05,381 ಪ್ರವಾಸಿಗರು ಆಗಮಿಸಿದ್ದುದು ಪ್ರವಾಸೋದ್ಯಮ ಬೆಳವಣಿಗೆಯ ನಿಟ್ಟಿನಲ್ಲಿ ವಿಶೇಷವೆನ್ನಬಹುದು.

2019 ಕ್ಕೆ ಹೋಲಿಸಿದಾಗ 2018 ರಲ್ಲಿ ಪ್ರವಾಸಿಗರ ಸಂಖ್ಯೆ ಶೇ.23 ರಷ್ಟು ಕಡಿಮೆಯಿತ್ತು ಎಂದು ತಿಳಿದುಬಂದಿದೆ. 2018 ರಲ್ಲಿ ಒಟ್ಟು ಪ್ರವಾಸಿಗರ ಸಂಖ್ಯೆ 17 ಲಕ್ಷಕ್ಕಿಂತ ಅಧಿಕ ಅಂದರೆ 17,17,735 ಮಂದಿಯಾಗಿದ್ದರು. ಆ ಪೈಕಿ 2,440 ವಿದೇಶೀಗರೂ ಒಳಗೊಂಡಿದ್ದಾರೆ. ಆ ವರ್ಷ ಆಗಸ್ಟ್‍ನ ಪ್ರಾಕೃತಿಕ ವಿಕೋಪದ ಬಳಿಕದ ಸೆಪ್ಟೆಂಬರ್ ತಿಂಗಳಿನಲ್ಲಿ ಅತಿ ಕಡಿಮೆ ಅಂದರೆ, 45,268 ಪ್ರವಾಸಿಗರು ಆಗಮಿಸಿದ್ದರು. ಆದರೆ, 2018 ರ ಏಪ್ರಿಲ್ ತಿಂಗಳಿನಲ್ಲಿ ಅತ್ಯಧಿಕ ವೆಂಬಂತೆ 2,75,702 ಪ್ರವಾಸಿಗರು ಜಿಲ್ಲೆಗೆ ಭೇಟಿಯತ್ತು ಪ್ರವಾಸೀ ತಾಣಗಳಲ್ಲಿ ಆನಂದಿಸಿದ್ದರು. 2017 ರ ಅಂಕಿ ಅಂಶ ಗಮನಿಸಿದಾಗ ಆ ವರ್ಷ ಒಟ್ಟು 11 ಲಕ್ಷಕ್ಕೂ ಅಧಿಕ ಅಂದರೆ 11,11,081 ಮಂದಿ ಪ್ರವಾಸಿಗರು ಭೇಟಿಯಿತ್ತಿದ್ದರು. ಈ ಪೈಕಿ ಮೂರು ವರ್ಷಗಳ ಹೋಲಿಕೆಯಲ್ಲಿ ಅತ್ಯಧಿಕ ವಿದೇಶಿಗರು 2017 ರಲ್ಲಿ ಬಂದಿದ್ದರು. ಆ ವರ್ಷ ವಿದೇಶೀಯರ ಸಂಖ್ಯೆ 7,788.

2017 ಕ್ಕೆ ಹೋಲಿಸಿದರೆ 2019 ರಲ್ಲಿ ಪ್ರವಾಸಿಗರ ಸಂಖ್ಯೆ ಶೇ. 50ಕ್ಕೂ ಅಧಿಕಗೊಂಡಿರುವದು ಮತ್ತೊಂದು ವಿಶೇಷ. 2017 ರ ಡಿಸೆಂಬರ್‍ನಲ್ಲಿ ಅತ್ಯಧಿಕ ಪ್ರವಾಸಿಗರು ಅಂದರೆ, 2,23,712 ಮಂದಿ ಭೇಟಿಯಿತ್ತಿದ್ದರು. ಆ ವರ್ಷ

(ಮೊದಲ ಪುಟದಿಂದ) ಮೇ ತಿಂಗಳಿನಲ್ಲಿ 53,475 ಮಂದಿ ಭೇಟಿ ನೀಡಿದ್ದುದು ಕಡಿಮೆ ದಾಖಲಾತಿಯ ತಿಂಗಳೆನಿಸಿದೆ.

ವಸ್ತು ಸಂಗ್ರಹಾಲಯ ವಿಸ್ತರಣೆಗೆ ಕ್ರಮ

ಮಡಿಕೇರಿಯ ಕೋಟೆ ಆವರಣರಣದಲ್ಲಿರುವ ಜಿಲ್ಲಾ ವಸ್ತು ಸಂಗ್ರಹಾಲಯದ ಕ್ಯೂರೇಟರ್ ರೇಖಾ ಅವರ ಪ್ರಕಾರ 2019 ರಲ್ಲಿ ಜಿಲ್ಲೆಯ ವಸ್ತು ಸಂಗ್ರಹಾಲಯಕ್ಕೆ ಅಧಿಕ ಪ್ರವಾಸಿಗರು ಭೇಟಿ ನೀಡಿ ವೀಕ್ಷಿಸಿದ್ದಾರೆ. ಇತ್ತೀಚೆಗೆ ಜಿಲ್ಲೆಯ ಅನೇಕ ಭಾಗಗಳಿಂದ ,ಹೊರ ತಾಣಗಳಿಂದಲೂ ಅತ್ಯಮೂಲ್ಯ ಅಪರೂಪದ ವಸ್ತುಗಳೂ ಶಿಲಾ ವಿಗ್ರಹಗಳು ಬರುತ್ತಿವೆ. ಜನರು ನೀಡಲು ಆಸಕ್ತಿ ತೋರುತ್ತಿದ್ದಾರೆ. ಇತ್ತೀಚೆಗೆ ಹಳೆಯ ನಾಣ್ಯಗಳ ಸಂಗ್ರ್ರಾಹಕರಾದ ಕೇಶವಮೂರ್ತಿ ಅವರು ಕೊಡಗಿನದ್ದೇ ಆಗಿರುವ ಹಳೆಯ ಅಪರೂಪದ ನಾಣ್ಯಗಳನ್ನು ಶಾಶ್ವತವಾಗಿ ವಸ್ತು ಸಂಗ್ರಹಾಲಯದಲ್ಲಿಡಲು ನೀಡಿರುವದು ವಿಶೇಷವಾಗಿದೆ ಎಂದು ರೇಖಾ ತಿಳಿಸಿದರು. ಪ್ರಾಚ್ಯ ವಸ್ತು ಇಲಾಖಾಧೀನದ ನಾಲಕ್‍ನಾಡು ಅರಮನೆ, ಮಡಿಕೇರಿಯ ರಾಜರ ಗದ್ದುಗೆಗೂ ಜನರು ಅಧಿಕ ಸಂಖ್ಯೆಯಲ್ಲಿ ಭೇಟಿ ನೀಡುತ್ತಿರುವದಾಗಿ ಅವರು ತಿಳಿಸಿದರು. ಇದೀಗ ಮಡಿಕೇರಿಯ ವಸ್ತು ಸಂಗ್ರಹಾಲಯದಲ್ಲಿ ಅಮೂಲ್ಯ ವಸ್ತುಗಳನ್ನು ಇರಿಸಲು ಸ್ಥಳಾವಕಾಶದ ಕೊರತೆಯಾಗುತ್ತಿದೆ.

ಈ ಹಿನ್ನೆಲೆಯಲ್ಲಿ ಬೇರೆಯೊಂದು ಸ್ಥಳಾವಕಾಶದ ಅಗತ್ಯವಿದೆ. ಸದ್ಯದಲ್ಲಿಯೇ ಸನಿಹದ ಗ್ರಂಥಾಲಯವು ಕೈಗಾರಿಕಾ ಬಡಾವಣೆಯ ಕಟ್ಟಡವೊಂದಕ್ಕೆ ಸ್ಥಳಾಂತರಗೊಳ್ಳುತ್ತಿದೆ. ಕೋಟೆ ಆವರಣದಲ್ಲಿ ಖಾಲಿಯಾಗುವ ಗ್ರಂಥಾಲಯ ಕಟ್ಟಡವನ್ನು ವಸ್ತು ಸಂಗ್ರಹಾಲಯಕ್ಕೆ ಬಿಟ್ಟು ಕೊಡುವಂತೆ ಹಿರಿಯ ಅಧಿಕಾರಿಗಳಲ್ಲಿ ಕೋರಲಾಗಿದೆ. ಆ ಕಟ್ಟಡ ದೊರೆತರೆ ವಸ್ತು ಸಂಗ್ರಹಾಲಯವನ್ನು ಪ್ರವಾಸಿಗರ ನೋಟಕ್ಕೆ ಇನ್ನೂ ಆಕರ್ಷಣೀಯವಾಗಿ ಮಾಡಬಹುದು ಎಂದು ರೇಖಾ ಅಭಿಪ್ರಾಯಪಟ್ಟರು. ಮಡಿಕೇರಿಯ ಹಳೆಯ ಕೋಟೆಯನ್ನೂ ಪ್ರಾಚ್ಯ ವಸ್ತು ಇಲಾಖೆ ದುರಸ್ತಿ ಮಾಡಿ ಯಥಾ ರೂಪದಲ್ಲಿ ಅಭಿವೃದ್ಧಿಗೊಳಿಸುವ ನಿಟ್ಟಿನಲ್ಲಿ ಹೆಜ್ಜೆಯಿರಿಸಿದೆ. ಆ ಬಳಿಕ ಕೋಟೆಯೂ ಕೂಡ ಪ್ರವಾಸಿಗರನ್ನು ಸೆಳೆಯುವ ತಾಣವಾಗಲಿದೆ ಎಂದು ರೇಖಾ ಆಶಾ ಭಾವನೆ ವ್ಯಕ್ತಪಡಿಸಿದರು.