ಮಡಿಕೇರಿ, ಜ. 29: ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ನಗರದ ಗಾಂಧಿ ಮೈದಾನದಲ್ಲಿ ಪ್ರಗತಿಪರ ಜನಾಂದೋಲನ ವೇದಿಕೆ ವತಿಯಿಂದ ನಡೆಯುತ್ತಿರುವ 4ನೇ ದಿನದ ಉಪವಾಸ ಸತ್ಯಾಗ್ರಹಕ್ಕೆ ಕೇಸರಿ ಶಾಲು ಧರಿಸಿ ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಕಾರ್ಯಕರ್ತರು ಬೆಂಬಲ ಸೂಚಿಸಿದರು.
ಯುವ ಕಾಂಗ್ರೆಸ್ ಅಧ್ಯಕ್ಷ ಜಮ್ಮಡ ಸೋಮಣ್ಣ ಮಾತನಾಡಿ, ಪೌರತ್ವ ತಿದ್ದುಪಡಿ ಕಾಯಿದೆಯಿಂದ ಕೇವಲ ಮುಸ್ಲಿಮರಿಗೆ ಮಾತ್ರ ಸಮಸ್ಯೆಯಲ್ಲ. ಮುಂದಿನ ದಿನಗಳಲ್ಲಿ ಹಿಂದೂಗಳು ಕೂಡ ತೊಂದರೆ ಅನುಭವಿಸುವುದು ಸ್ಪಷ್ಟ. ಪರಿಶಿಷ್ಟ ಜಾತಿ, ಪಂಗಡ, ಹಿಂದುಳಿದ ವರ್ಗ, ಕೂಲಿ ಕಾರ್ಮಿಕರ ಬಳಿ ಸೂಕ್ತ ದಾಖಲಾತಿಗಳಿಲ್ಲ; ಇದು ಸಮಸ್ಯೆಗೆ ಕಾರಣವಾಗುತ್ತದೆ. ವಿರೋಧಿ ಪ್ರತಿಭಟನೆಯಲ್ಲಿ ಕೇಸರಿ ಶಾಲು ಧರಿಸುವ ಮೂಲಕ ಹಿಂದೂಗಳಿಗೂ ಕಾಯಿದೆಯಿಂದ ಸಮಸ್ಯೆ ಇದೆ ಎಂಬ ಸಂದೇಶ ನೀಡಲಾಗುತ್ತಿದೆ ಎಂದು ತಿಳಿಸಿದರು.
ಈ ಸಂದರ್ಭ ಯುವ ಕಾಂಗ್ರೆಸ್ನ ಪದಾಧಿಕಾರಿಗಳಾದ ಮುರುಘ, ರಕ್ಷಿತ್, ಅಂಕಿತ್ ಪೊನ್ನಪ್ಪ, ಗೋಣಿಕೊಪ್ಪ ಗ್ರಾ.ಪಂ ಸದಸ್ಯ ಪ್ರಮೋದ್ ಗಣಪತಿ, ಅಲ್ಪಸಂಖ್ಯಾತ ಘಟಕದ ಜಿಲ್ಲಾ ಉಪಾಧ್ಯಕ್ಷ ಅಬ್ದುಲ್ ರೆಹಮಾನ್, ಕಾರ್ಯದರ್ಶಿ ಅಬ್ದುಲ್ ಸಮ್ಮದ್ ಸೇರಿದಂತೆ ಇನ್ನಿತರರು ಇದ್ದರು.