ಕುಶಾಲನಗರ, ಜ. 29: ಚೊಚ್ಚಲ ಹೆರಿಗೆಗಾಗಿ ಇನ್ನೆರಡೇ ದಿನಗಳಲ್ಲಿ ತನ್ನ ತವರುಮನೆಗೆ ತೆರಳುವುದರೊಂದಿಗೆ ಹಲವು ಕನಸು ಹೊತ್ತ ಗರ್ಭಿಣಿ ಮಹಿಳೆಯೊಬ್ಬರನ್ನು ಹಾವಿನ ರೂಪದಲ್ಲಿ ಬಂದ ವಿಧಿ ತನ್ನ ಹಾಗೂ ತನ್ನ ಕನಸಿನ ಮಗುವೊಂದರ ಜೀವ ಕಸಿದ ಕರುಣಾಜನಕ ಘಟನೆಯೊಂದು ಇತ್ತೀಚೆಗೆ ಕುಶಾಲನಗರದ ಬಡಾವಣೆ ಯೊಂದರ ಮನೆಯಲ್ಲಿ ನಡೆದಿದೆ.ಹೆಸರು ಸುಜಿತಾ (36). ತಂದೆ, ತಾಯಿ ಇಲ್ಲದ ತಬ್ಬಲಿ ಮಗಳನ್ನು ಅಣ್ಣ, ಅತ್ತಿಗೆ ಪಾಲನೆಯೊಂದಿಗೆ ಜೀವನಕ್ಕೆ ನೆಲೆ ಕಲ್ಪಿಸಿಕೊಂಡ ಸುಜಿತ ಮೂಲತಃ ಸಿದ್ದಾಪುರ ಸಮೀಪದ ಅರೆಕಾಡು ಗ್ರಾಮದ ನಿವಾಸಿ. 6 ವರ್ಷಗಳ ಹಿಂದೆ ವಿವಾಹವಾದ ಸುಜಿತ ಪತಿ ಸೌದಿಯ ಸಂಸ್ಥೆ ಯೊಂದರಲ್ಲಿ ಕೆಲಸ ನಿರ್ವಹಿಸಿದರೆ ಇತ್ತ ತಾನೂ ಕೂಡ ದುಡಿದು ಸಂಸಾರದ ಭಾರ ತೂಗಿಸುವ ಹೊಣೆ ಹೊತ್ತು ಕಳೆದ 15 ವರ್ಷಗಳಿಂದ ಮಡಿಕೇರಿ, ಕುಶಾಲನಗರ ಆಸ್ಪತ್ರೆಗಳಲ್ಲಿ ದಾದಿಯಾಗಿ ಸೇವೆ ಸಲ್ಲಿಸುತ್ತಿದ್ದರು.ಕುಶಾಲನಗರ ರಾಧಾಕೃಷ್ಣ ಬಡಾವಣೆಯಲ್ಲಿ ‘ತವರುಮನೆ’ ಎಂಬ ಹೆಸರು ಹೊತ್ತ ಮನೆಯೊಂದರಲ್ಲಿ ಬಾಡಿಗೆ ಪಡೆದು ತನ್ನ ಅಣ್ಣ, ಅತ್ತಿಗೆಯ ಋಣ ತೀರಿಸುವ ಆಸೆಯೊಂದಿಗೆ ಅಣ್ಣನ ಇಬ್ಬರು ಮಕ್ಕಳನ್ನು ತನ್ನ ಮನೆಯಲ್ಲಿ ಸಲಹುತ್ತಿದ್ದ ಸುಜಿತ ಮಗುವೊಂದಕ್ಕೆ ಜನ್ಮನೀಡುವ ಕನಸು ಸಾಕಾರಗೊಳ್ಳುವ ಹಂತದಲ್ಲಿದ್ದಾಗಲೇ ದಿಢೀರನೆ ಮನೆಯಲ್ಲಿ ಹಾವೊಂದು ಆಕೆಗೆ ಸಾವಾಗಿ ಕಾಡಿದ್ದು ನಿಜಕ್ಕೂ ಕರುಳು ಚುರುಕ್ ಎನ್ನುವಂತಿದೆ.
ತಂದೆ, ತಾಯಿಗೆ ಮೂವರು ಮಕ್ಕಳಲ್ಲಿ ಸುಜಿತ ಸಹೋದರ, ಸಹೋದರಿಯರೊಂದಿಗೆ ಬಾಳಿ ನಂತರ ಕುಶಾಲನಗರದಲ್ಲಿ ನೆಲೆಕಂಡ ಮೇಲೆ ಸ್ಥಳೀಯ ಖಾಸಗಿ ಕ್ಲಿನಿಕ್ ಒಂದರಲ್ಲಿ ನರ್ಸ್ ಆಗಿ ಸೇವೆಯಲ್ಲಿ ತೊಡಗಿದ್ದಳು. ಇದಕ್ಕೂ ಮುನ್ನ ಮಡಿಕೇರಿಯ ಖಾಸಗಿ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸಿದ ಅನುಭವ ಕೂಡ ಹೊಂದಿದ್ದಳು.
ಇಲ್ಲಿ ಮನಕಲಕುವ ಸಂಗತಿ ಯೆಂದರೆ 5 ವರ್ಷಗಳ ನಂತರ ತಾಯ್ತನ ಹೊಂದುವ ಕನಸು ಸಾಕಾರಗೊಂಡು ಫೆ. 29 ಕ್ಕೆ ವೈದ್ಯರು ಹೆರಿಗೆ ದಿನಾಂಕವನ್ನು ಕೂಡ ದೃಢಪಡಿಸಿದ್ದರು.
ಒತ್ತಡದ ಕೆಲಸದ ನಡುವೆ ಜನವರಿ ಒಂದರಿಂದ ತನ್ನ ಕೆಲಸಕ್ಕೆ ಕೂಡ ರಜೆ ಪಡೆದು ಬಾಡಿಗೆಯ ತವರುಮನೆಯಲ್ಲಿ ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದ ಸಂದರ್ಭ ತನ್ನ ಮನೆಯ ಹಿಂಬಾಗಿಲ ಹೊಸಲಲ್ಲಿ ವಾಸ್ತವ್ಯ ಹೂಡಿದ್ದ ಹಾವೊಂದು ರಾತ್ರಿ ವೇಳೆ ಕಚ್ಚಿ ದೊಡ್ಡ ದುರಂತವನ್ನು ಸೃಷ್ಟಿ ಮಾಡಿತು.
ತನ್ನ ಜೀವಿತಾವಧಿಯಲ್ಲಿ ಸಾವಿರಾರು ಸಂಖ್ಯೆಯ ರೋಗಿ ಗಳನ್ನು ಆರೈಕೆ ಮಾಡಿ ಅನುಭವ ಹೊಂದಿರುವ ಸುಜಿತಾಗೆ ಈ ಆಘಾತಕಾರಿ ಘಟನೆ ತನ್ನ ಜೀವವನ್ನು ಬಲಿ ತೆಗೆದುಕೊಳ್ಳುವ ಸಾಧ್ಯತೆ ಇದೆ ಎನ್ನುವುದು ತಕ್ಷಣವೇ ಗೊತ್ತಾಗಿತ್ತು ಎಂದು ಆಕೆಯ ಗೆಳತಿ ‘ಶಕ್ತಿ’ಯೊಂದಿಗೆ ದುಃಖತಪ್ತರಾಗಿ ನೋವನ್ನು ಹಂಚಿಕೊಂಡದ್ದು ಹೀಗೆ...
‘ತಾನು ಮತ್ತು ಆಕೆ ಕಳೆದ 5 ವರ್ಷಗಳಿಂದ ಸ್ನೇಹಿತರಾಗಿದ್ದು, ಒಂದೇ ಆವರಣದಲ್ಲಿ ಬಾಡಿಗೆ ಮನೆÉಯಲ್ಲಿದ್ದೆವು. ತುಂಬಾ ಕನಸು ಹೊತ್ತ ತನ್ನ ಸ್ನೇಹಿತೆಗೆ ಇಂತಹ ಸಾವು ಬರಬಾರದಿತ್ತು’ ಎಂದಷ್ಟೆ ಹೇಳುತ್ತಾರೆ.
ಸಾವಿರ ಕನಸು ಹೊತ್ತು ಸುಜಿತ ಮತ್ತು ಆಕೆಯ ಹೊಟ್ಟೆಯಲ್ಲಿದ್ದ ಹೆಣ್ಣು ಮಗುವಿನ ಮೃತದೇಹಗಳನ್ನು ಕಂಡಾಗ ಇಂತಹ ಸಾವು ಯಾರಿಗೂ ಬರಬಾರದು ಎನ್ನುತ್ತಾರೆ.
ಪತಿ ಸೌದಿಯಲ್ಲಿ ನೌಕರಿಯಲ್ಲಿದ್ದು, ಅಕ್ಟೋಬರ್ ತಿಂಗಳಿನಲ್ಲಷ್ಟೇ ಬಂದು ಹೋಗಿದ್ದರು. ಘಟನೆ ತಿಳಿದರೂ ಆ ದೇಶದಿಂದ ತಕ್ಷಣಕ್ಕೆ ಬರಲು ತಾಂತ್ರಿಕ ತೊಂದರೆಗಳಿದ್ದ ಕಾರಣ ಪತ್ನಿಯ ಅಂತಿಮ ದರ್ಶನ
(ಮೊದಲ ಪುಟದಿಂದ) ಮಾಡುವ ಭಾಗ್ಯಕೂಡ ಅವರಿಗೆ ಸಿಗಲಿಲ್ಲ. ಜನವರಿ 24ರಂದು ರಾತ್ರಿ ಸುಮಾರು 10.30 ಕ್ಕೆ ಮನೆಯೊಳಗೆ ಹಾವು ಕಚ್ಚಿದ ತಕ್ಷಣ ಅಣ್ಣನ ಮಗ ಸ್ಥಳೀಯ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಪ್ರಥಮ ಚಿಕಿತ್ಸೆ ನೀಡಿ ಮಡಿಕೇರಿಗೆ ಸಾಗಿಸುವ ಹಂತದಲ್ಲಿ ತಾನು ಸೇವೆ ಸಲ್ಲಿಸಿದ ಮಡಿಕೇರಿಯ ಆಸ್ಪತ್ರೆಗೆ ಸುಜಿತ ಮೊಬೈಲ್ ಮೂಲಕ ಮಾಹಿತಿ ತಿಳಿಸಿದ್ದಾರೆ. ‘ಔಷಧಿ ರೆಡಿ ಮಾಡಿ ನನ್ನನ್ನು ಉಳಿಸಿಕೊಳ್ಳಿ’ ಎಂದು ಕೋರಿದ್ದಾರೆ. ಆದರೆ ದುರಾದೃಷ್ಟವಶಾತ್ ವೈದ್ಯರು ಊರಲ್ಲಿಲ್ಲದ ಬಗ್ಗೆ ಅರಿತ ಸುಜಿತ ತನ್ನ ಸಾವು ಖಚಿತ ಎಂದು ತಿಳಿಯಲು ಸಮಯ ಬೇಕಾಗಲಿಲ್ಲ. ತಾನು ಕಟ್ಟಿದ ಕನಸು ಭಗ್ನವಾಗುವುದು ತಿಳಿದ ಸುಜಿತ ಅಲ್ಲಿಂದ ಕೋಮಾಕ್ಕೆ ತೆರಳುವಂತಾಯಿತು ಎಂದು ಆಕೆಯೊಂದಿಗಿದ್ದ ಆಕೆಯ ಸ್ನೇಹಿತೆ ಹೇಳುತ್ತಾರೆ. ಬಡಾವಣೆಯ ಈ ಮನೆಯ ಆವರಣದಲ್ಲಿ ಹಾವುಗಳು ಆಗಾಗ್ಗೆ ಓಡಾಡುತ್ತಿದ್ದವು ಎಂಬುದು ಮಹಿಳೆಯೊಬ್ಬರ ಪ್ರತಿಕ್ರಿಯೆಯಾಗಿದೆ. ಸ್ವಚ್ಛತೆಯ ಕೊರತೆಯೇ ಹಾವುಗಳು ಸೇರಿಕೊಳ್ಳಲು ಕಾರಣ ಎನ್ನುತ್ತಾರೆ ನೆರೆಮನೆಯ ಮಾಲ ಅವರು.
ಹಾವು ಕಚ್ಚಿದ ತಕ್ಷಣ ಸುಜಿತ ಅವರನ್ನು ತಕ್ಷಣ ಸರಕಾರಿ ಆಸ್ಪತ್ರೆಗೆ ಕೊಂಡೊಯ್ದರೆ ಇತ್ತ ಮನೆಯಲ್ಲಿದ್ದ ಅಣ್ಣನ ಮಗಳು ಮಾತ್ರ ಹಾವಿನ ಚಲನವಲನದ ಬಗ್ಗೆ ನಿಗಾವಹಿಸುವುದರೊಂದಿಗೆ ತನ್ನ ಚಿಕ್ಕಪ್ಪನಿಗೆ ಬೇಗ ಬರಲು ಬೇಡಿಕೊಂಡಿದ್ದಾಳೆ. ತಕ್ಷಣ ಬಂದ ಚಿಕ್ಕಪ್ಪ ಹಾವನ್ನು ಹೊರಗೆಳೆದು ಸಾಯಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇತ್ತ ಹಾವಿನಿಂದ ಕಚ್ಚಿಸಿಕೊಂಡು ವಿಷವೇರಿದ ಸುಜಿತ ಮತ್ತು ಹೊಟ್ಟೆಯಲ್ಲಿದ್ದ ಮಗುವನ್ನು ಉಳಿಸಿಕೊಳ್ಳಲು ಸಾಧÀ್ಯವಾಗದಿರುವುದು ಬೇಸರದ ವಿಷಯವಾಗಿದೆ. ಮಡಿಕೇರಿ ಸರಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ನಂತರದ ದೃಶ್ಯವಂತೂ ಇಡೀ ಜನರ ಮನಸ್ಸನ್ನು ಕಲಕುವಂತಿತ್ತು. ನೂರಾರು ಕನಸು ಹೊತ್ತ ಸುಜಿತಾಳ ದೇಹ ಕಂಡುಬಂದರೆ ಇನ್ನೇನು ತಿಂಗಳಲ್ಲಿ ಜಗತ್ತು ಕಾಣಬೇಕಾದ ಶಿಶುವಿನ ಮೃತದೇಹವನ್ನು ಆಪರೇಶನ್ ಮಾಡಿ ತೆಗೆದು ಅಮ್ಮನ ದೇಹದ ಬಳಿ ಇರಿಸಿದ್ದು ಎಂತಹ ಕಟುಕನ ಮನಸ್ಸನ್ನು ಕೂಡ ಕಲಕುವಂತಿತ್ತು.
ಈ ಎಲ್ಲಾ ಘಟನೆ ಬೆನ್ನಲ್ಲೇ ವಾರ್ಡ್ ಸದಸ್ಯರಾದ ರೂಪಾ ಉಮಾಶಂಕರ್ ಮತ್ತು ಅವರ ಪತಿ ಉಮಾಶಂಕರ್ ಬಡಾವಣೆಯ ಪ್ರತಿ ಮನೆಗಳಿಗೆ ಆರೋಗ್ಯಾಧಿಕಾರಿಗಳು ಭೇಟಿ ನೀಡಿ ಇಂತಹ ಅನಾಹುತಗಳು ಮರುಕಳಿಸದಂತೆ ಎಚ್ಚರ ವಹಿಸುವಂತೆ ಕೋರಿದ್ದಾರೆ.