ಮಡಿಕೇರಿ, ಜ. 30: ಕೊಡಗು ಜಿಲ್ಲೆಯಲ್ಲಿ ಜೀರ್ಣೋದ್ಧಾರ ಗೊಳ್ಳುತ್ತಿರುವ ದೇವಾಲಯಗಳಿಗೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಕಾಣಿಕೆ ನೀಡುವುದರೊಂದಿಗೆ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಅವರು ಆಶೀರ್ವದ ಪತ್ರದೊಂದಿಗೆ ಶುಭ ಕೋರಿದ್ದಾರೆ.

ಇಲ್ಲಿನ ಮಂಗಳಾದೇವಿ ನಗರದಲ್ಲಿ ಪುನರ್ ನಿರ್ಮಾಣಗೊಳ್ಳುತ್ತಿರುವ ಶ್ರೀ ರಾಜರಾಜೇಶ್ವರಿ ಸನ್ನಿಧಿಗೆ ರೂ. 3 ಲಕ್ಷದ ಕಾಣಿಕೆ ನೀಡಿದ್ದಾರೆ. ತಾಳತ್ತಮನೆಯ ಶ್ರೀ ದುರ್ಗಾ ಭಗವತಿ ಸನ್ನಿಧಿಗೆ ಕ್ಷೇತ್ರದಿಂದ ರೂ. 2.50 ಲಕ್ಷದ ಕಾಣಿಕೆ ಸಲ್ಲಿಸಲಾಗಿದೆ.

ಸಂಪಾಜೆ ಬಳಿಯ ಶ್ರೀ ಅರೆಕಲ್ಲು ಅಯ್ಯಪ್ಪ ದೇವರಿಗೆ ರೂ. 1 ಲಕ್ಷ, ಕೈಕೇರಿಯ ಶ್ರೀ ಭಗವತಿ ಸನ್ನಿಧಿಗೆ ರೂ. 1.50 ಲಕ್ಷದ ನಿಧಿಯನ್ನು ಧರ್ಮಾಧಿಕಾರಿಗಳು ಆಶೀರ್ವಾದ ಪತ್ರದೊಂದಿಗೆ ತಲುಪಿಸಿದ್ದಾರೆ.

ಇಂದು ಕ್ಷೇತ್ರದ ಪ್ರತಿನಿಧಿಗಳಾದ ಪುಷ್ಪರಾಜ್, ಸದಾಶಿವಗೌಡ, ಹರೀಶ್ ಹಾಗೂ ಸ್ಥಳೀಯ ಸೇವಾ ಪ್ರತಿನಿಧಿಗಳು ಶ್ರೀ ರಾಜರಾಜೇಶ್ವರಿ ದೇವಾಲಯದ ಜೀರ್ಣೋದ್ಧಾರ ಕಾರ್ಯ ವೀಕ್ಷಣೆ ಮಾಡಿದರು. ಅಲ್ಲದೆ ಸಮಿತಿ ಪ್ರಮುಖರಿಗೆ ಕ್ಷೇತ್ರದ ಕಾಣಿಕೆಯನ್ನು ಹಸ್ತಾಂತರಿಸಿದರು.

ಪ್ರಮುಖರಾದ ಕೆ.ಹೆಚ್. ಚೇತನ್, ಮನು ಮಂಜುನಾಥ್, ರವಿ, ಸುರೇಶ್, ವಸಂತ ಮೊದಲಾದವರು ಹಾಜರಿದ್ದು, ಕ್ಷೇತ್ರದ ಕಾಣಿಕೆಯ ಚೆಕ್ ಸ್ವೀಕರಿಸಿದರು.