ಸಿದ್ದಾಪುರ, ಜ.29: ಪ್ರವಾಹಕ್ಕೆ ಸಿಲುಕಿ ಮನೆ ಕಳೆದುಕೊಂಡ ನೆಲ್ಯಹುದಿಕೇರಿ ಭಾಗದ ಸಂತ್ರಸ್ತರಿಗೆ ಜಿಲ್ಲಾಡಳಿತದ ವತಿಯಿಂದ ನಿವೇಶನ ಹಂಚಿಕೆ ಪ್ರಕ್ರಿಯೆಗೆ ಜಿಲ್ಲಾ ಉಪ ವಿಭಾಗಾಧಿಕಾರಿ ಜವರೇಗೌಡ ಚಾಲನೆ ನೀಡಿದರು. ನೆಲ್ಯಹುದಿಕೇರಿ ಗ್ರಾಮದ ಸಂಪೂರ್ಣ ಮನೆ ಕಳೆದುಕೊಂಡ 57 ಮಂದಿಯ ಮೊದಲ ಪಟ್ಟಿಯನ್ನು ಚೀಟಿ ಎತ್ತುವ ಮೂಲಕ ಗ್ರಾ.ಪಂ ಸಭಾಂಗಣದಲ್ಲಿ ಫಲಾನುಭವಿಗಳನ್ನು ಆಯ್ಕೆಗೊಳಿಸಲಾಯಿತು. ಈ ಬಾರಿಯ ಮಹಾ ಮಳೆಗೆ ಕಾವೇರಿ ನದಿಯಲ್ಲಿ ನೀರಿನ ಪ್ರಮಾಣ ಏರಿಕೆಯಾಗಿ ಪ್ರವಾಹದಿಂದಾಗಿ ನೆಲ್ಯಹುದಿಕೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನದಿ ತೀರದ ನೂರಾರು ಮನೆಗಳು ಹಾನಿಗೊಳಗಾಗಿದ್ದವು. 50 ಕ್ಕೂ ಅಧಿಕ ಮನೆಗಳು ಸಂಪೂರ್ಣವಾಗಿ ನೆಲ ಸಮಗೊಂಡಿತ್ತು. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತದ ವತಿಯಿಂದ ಅರೆಕಾಡು ಗ್ರಾಮದಲ್ಲಿ ಅಭ್ಯತ್‍ಮಂಗಲ ಗ್ರಾಮದ ಸರ್ವೆ ನಂ. 87/2 ರಲ್ಲಿ ಹಾಗೂ ಇನ್ನೊಂದು ಸರ್ವೆ ನಂ ಸೇರಿ ಒಟ್ಟು 8.22 ಎಕರೆ ಒತ್ತುವರಿ ಜಾಗವನ್ನು ವಶಕ್ಕೆ ಪಡೆದುಕೊಂಡಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಉಪವಿಭಾಗಾಧಿಕಾರಿ ಜವರೇಗೌಡ ಈ ಬಾರಿಯ ಪ್ರವಾಹಕ್ಕೆ ಸಿಲುಕಿ ಸಂಪೂರ್ಣವಾಗಿ ಮನೆ ಕಳೆದುಕೊಂಡ ನೆಲ್ಯಹುದಿಕೇರಿಯ ನದಿ ತೀರದಲ್ಲಿ ಅನಧಿಕೃತವಾಗಿ ವಾಸ ಮಾಡಿಕೊಂಡಿದ್ದ 57 ಮಂದಿ ಫಲಾನು ಭವಿಗಳನ್ನು ಆಯ್ಕೆಗೊಳಿಸಲಾಗಿದೆ. ಸರ್ಕಾರದ ವತಿಯಿಂದ ಸಂತ್ರಸ್ತರಿಗೆ ಪುನರ್ವಸತಿ ಒದಗಿಸುವ ನಿಟ್ಟನಲ್ಲಿ ಜಿಲ್ಲಾಡಳಿತವು ಅರೆಕಾಡು ಗ್ರಾಮದಲ್ಲಿ ಒತ್ತುವರಿ ಭೂಮಿಯನ್ನು ವಶಕ್ಕೆ ಪಡೆದುಕೊಂಡಿರುತ್ತದೆ. ಈ ಜಾಗದಲ್ಲಿ ಒಟ್ಟು 160 ನಿವೇಶನಗಳನ್ನು ರಚಿಸುವ ನಕಾಶೆಯನ್ನು ರೂಪಿಸಲಾಗಿದ್ದು ಈಗಾಗಲೇ ಮನೆ ಕಳೆದುಕೊಂಡಿರುವ ಸಂತ್ರಸ್ತರ ಪಟ್ಟಿಗಳನ್ನು ತಯಾರಿಸಲಾಗಿದೆ.
ಮೊದಲ ಬಾರಿಗೆ ನೆಲ್ಯಹುದಿಕೇರಿಯ ನದಿ ತೀರದಲ್ಲಿ ಅನಧಿಕೃತವಾಗಿ ವಾಸವಿದ್ದ 57 ಕುಟುಂಬಗಳನ್ನು ಚೀಟಿ ಎತ್ತುವ ಮೂಲಕ ಆಯ್ಕೆಗೊಳಿಸಲಾಗಿದೆ. ಆಯ್ಕೆಗೊಳಿಸಿದ ಫಲಾನುಭವಿಗಳಿಗೆ ಸರ್ಕಾರದ ವತಿಯಿಂದ ರಾಜೀವ್ ಗಾಂಧಿ ವಸತಿ ಯೋಜನೆಯ ಮುಖಾಂತರ ಮನೆ ನಿರ್ಮಾಣಕ್ಕೆ ರೂ. 5 ಲಕ್ಷವನ್ನು ನೀಡಲಾಗುತ್ತದೆ.
(ಮೊದಲ ಪುಟದಿಂದ) ಫಲಾನುಭವಿಗಳ ಖಾತೆಗೆ ಹಣ ಸಂದಾಯವಾಗುತ್ತದೆ. ಸಂತ್ರಸ್ತರಿಗೆ ನಿರ್ಮಾಣವಾಗುವ ಮನೆಗಳ ಜಾಗವನ್ನು ಬಡಾವಣೆಯ ರೀತಿಯಲ್ಲಿ ರೂಪಿಸಲಾಗುವುದು. ಅಲ್ಲಿ ಎಲ್ಲಾ ರೀತಿಯ ಮೂಲಭೂತ ಸೌಕರ್ಯ ಗಳನ್ನು ಒದಗಿಸಿಕೊಡಲಾಗುವುದು ಎಂದರು. ಕೂಡಲೇ ಫಲಾನುಭವಿಗಳು ಹಣವನ್ನು ಸದುಪಯೋಗ ಪಡಿಸಿಕೊಂಡು ಮನೆ ನಿರ್ಮಿಸಿ ಕೊಳ್ಳಬೇಕೆಂದು ಜವರೇಗೌಡ ಸೂಚಿಸಿದರು.
ಬಡಾವಣೆಯಲ್ಲಿ ಮನೆಗಳು ನಿರ್ಮಾಣ ಮಾಡುವ ಉದ್ದೇಶದಿಂದ ಒತ್ತುವರಿ ಜಾಗದಲ್ಲಿದ್ದ ಮರಗಳನ್ನು ಅಗತ್ಯವಿದ್ದ ಜಾಗದಿಂದ ತೆರವುಗೊಳಿಸಲಾಗುವುದು ಎಂದರು. ಉಳಿದ ಮರಗಳನ್ನು ಅದೇ ಜಾಗದಲ್ಲಿ ಇರಿಸಲಾಗುವುದು. ಬಡಾವಣೆಯಲ್ಲಿ ರಸ್ತೆ ಹಾಗೂ ಪಾರ್ಕ್ ಇನ್ನಿತರ ಸಾರ್ವಜನಿಕ ಸೌಕರ್ಯಗಳನ್ನು ಒದಗಿಸಲಾಗುವುದು ಎಂದರು. ಈಗಾಗಲೇ ಪ್ರವಾಹದಿಂದ ಹಾನಿಗೊಳಗಾದ ಮನೆಗಳ ಪಟ್ಟಿಯನ್ನು ಎ., ಬಿ., ಸಿ., ರೀತಿಯಲ್ಲಿ ವಿಂಗಡಣೆ ಮಾಡಲಾಗಿದ್ದು ಎ ಪಟ್ಟಿಯಂತೆ ಸಂಪೂರ್ಣ ಮನೆ ಕಳೆದುಕೊಂಡವರಿಗೆ ಪ್ರಥಮ ಆದ್ಯತೆ ಮೇರೆಗೆ ನಿವೇಶನ ನೀಡಿ ಮನೆ ನಿರ್ಮಾಣಕ್ಕೆ ರೂ. 5 ಲಕ್ಷ ನೀಡಲಾಗುವುದು. ಬಿ. ಪಟ್ಟಿಯಲ್ಲಿರು ವವರಿಗೆ ಭಾಗಶಃ ಹಾನಿಗೆ ರೂ 3 ಲಕ್ಷವನ್ನು ಹಾಗೂ ಸಿ. ಪಟ್ಟಿಯಲ್ಲಿರು ವವರಿಗೆ ಸಣ್ಣ ಪುಟ್ಟ ಹಾನಿಗಳಿಗೆ ರೂ, 50 ಸಾವಿರವನ್ನು ನೀಡಲಾಗುವು ದೆಂದು ಅಲ್ಲದೇ ಅಧಿಕೃತ ದಾಖಲಾತಿ ಹೊಂದಿಕೊಂಡಿರುವ ಮನೆ ಕಳೆದುಕೊಂಡ ಫಲಾನುಭವಿಗಳಿಗೆ ರೂ. 5 ಲಕ್ಷ ನೀಡಲಾಗುವುದು ಎಂದು ಮಾಹಿತಿ ನೀಡಿದರು.
ಈಗಾಗಲೇ ಎ ಪಟ್ಟಿಯಲ್ಲಿ ಇರುವವರಿಗೆ 30x30 ಅಳತೆಯಲ್ಲಿ ನಿವೇಶನವನ್ನು ಸರ್ಕಾರದ ಆದೇಶದ ಮೇರೆಗೆ ಹಂಚಿಕೆಗೊಳಿಸಲಾಗಿದೆ. ಇವರುಗಳಿಗೆ ಆಯಾ ಗ್ರಾ.ಪಂ. ಮುಖಾಂತರ ರಾಜೀವ್ ಗಾಂಧಿ ವಸತಿ ಯೋಜನೆ ಅಡಿಯಲ್ಲಿ ಮನೆ ನಿರ್ಮಾಣದ ಸಂಪೂರ್ಣ ಜವಬ್ದಾರಿ ಯನ್ನು ನೀಡಲಾಗುವು ದೆಂದು ಉಪ ವಿಭಾಗಾಧಿಕಾರಿ ತಿಳಿಸಿದರು. ಇದೇ ಸಂದರ್ಭದಲ್ಲಿ ಕೆಲವು ಸಂತ್ರಸ್ತರು ತಮಗೆ 3.3/4 ಸೆಂಟು ಜಾಗವನ್ನು ನೀಡುವಂತೆ ಮನವಿ ಮಾಡಿ ಕೊಂಡರು. ಆದರೆ ಸರ್ಕಾರದ ಆದೇಶದಂತೆ 30x30 ಅಳತೆಯ ನಿವೇಶನ ನೀಡಲು ಆದೇಶ ಬಂದಿರುವುದಾಗಿ ಅಧಿಕಾರಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಸೋಮವಾರಪೇಟೆ ತಾಲೂಕು ತಹಶೀಲ್ದಾರ್ ಗೋವಿಂದರಾಜು, ಕುಶಾಲನಗರ ಹೋಬಳಿ ಉಪ ತಹಶೀಲ್ದಾರ್ ಚಿನ್ನಪ್ಪ, ಕಂದಾಯ ಪರಿವೀಕ್ಷಕ ಮಧುಸೂದನ್ ಗ್ರಾಮ ಲೆಕ್ಕಿಗರಾದ ಸಂತೋಷ್, ಪಿಡಿಓ ಅನಿಲ್ ಕುಮಾರ್, ನೆಲ್ಯಹುದಿಕೇರಿ ಗ್ರಾ.ಪಂ. ಸದಸ್ಯರುಗಳು ಹಾಜರಿದ್ದರು.