ಕುಶಾಲನಗರ, ಜ. 30: ಜಿಲ್ಲೆಯ ಜೇನುಕುರುಬ ಪಂಗಡಕ್ಕೆ ಸೇರಿದ ಯುವಕ, ಯುವತಿಯರಿಗೆ ನೀಡುತ್ತಿರುವ ನಿರುದ್ಯೋಗ ಭತ್ಯೆಯನ್ನು ಯರವ, ಸೋಲಿಗ, ಕುಡಿಯ, ಕೊರಗ ಹಾಗೂ ಬೆಟ್ಟಕುರುಬ ಸಮುದಾಯಕ್ಕೂ ನೀಡಬೇಕು ಎಂದು ಸೋಲಿಗರ ಅಭಿವೃದ್ಧಿ ಸಂಘದ ಅಧ್ಯಕ್ಷ ಸಣ್ಣಪ್ಪ ಆಗ್ರಹಿಸಿದ್ದಾರೆ.

ಕುಶಾಲನಗರದಲ್ಲಿ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಅವರು, ಸೋಲಿಗರು ಮೂಲನಿವಾಸಿ ಬುಡಕಟ್ಟು ಜನಾಂಗದವರಾಗಿದ್ದು, ಪ್ರಕೃತಿಯೊಂದಿಗೆ ಹೊಂದಿಕೊಂಡು ಸರಳ ಜೀವನ ಸಾಗಿಸುವ ಆರ್ಥಿಕವಾಗಿ, ರಾಜಕೀಯವಾಗಿ ಹಾಗೂ ಸಾಮಾಜಿಕವಾಗಿ ಹಿಂದುಳಿದ ಪರಿಶಿಷ್ಟ ಪಂಗಡ ವರ್ಗಕ್ಕೆ ಸೇರಿದವರಾಗಿದ್ದೇವೆ. ಹಿಂದಿನಿಂದಲೂ ಅನಕ್ಷರತೆ, ಬಡತನ, ನಿರುದ್ಯೋಗ ಸಮಸ್ಯೆಗಳನ್ನು ಎದುರಿಸುತ್ತಾ ಜೀವನ ಸಾಗಿಸುತ್ತಿದ್ದೇವೆ. ಸರ್ಕಾರ ಬುಡಕಟ್ಟು ಜನರಿಗಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತಂದರೂ ಸೋಲಿಗ ಜನಾಂಗಕ್ಕೆ ಮಾತ್ರ ಅನ್ಯಾಯವಾಗುತ್ತಿದೆ. ಜಿಲ್ಲೆಯ ಬುಡಕಟ್ಟು ಆದಿವಾಸಿ ಜನಾಂಗದಲ್ಲಿ 226 ಪದವೀಧರರಿದ್ದು ಇವರಿಗೆ ಯಾವುದೇ ಸರ್ಕಾರಿ ಅಥವಾ ಖಾಸಗಿ ನೌಕರಿ ಸಿಗದೆ ಓದಿದರೂ ಪ್ರಯೋಜನ ವಿಲ್ಲದಂತಾಗಿದೆ. ಅನೇಕ ಯುವಕ, ಯುವತಿಯರು ಕಾಫಿ ತೋಟಗಳಲ್ಲಿ ಕೂಲಿಗಾಗಿ ದುಡಿಯುತ್ತಿದ್ದಾರೆ. ಇವರಿಗೆ ಸೂಕ್ತ ಉದ್ಯೋಗ ಕಲ್ಪಿಸಲು ಸರ್ಕಾರ ಮುಂದಾಗಬೇಕು.

ಬಸವನಹಳ್ಳಿ ಮೊರಾರ್ಜಿ ಶಾಲಾ ಬಳಿ ಇರುವ 3 ಎಕರೆ ಜಾಗದಲ್ಲಿ ಮನೆ ಇಲ್ಲದ ಆದಿವಾಸಿಗಳಿಗೆ ಮನೆ ನಿರ್ಮಿಸಿ ಕೊಡಬೇಕು. ಉಳಿದ ಜಾಗದಲ್ಲಿ ಆದಿವಾಸಿಗಳಿಗಾಗಿ ಕಾಲೇಜು ನಿರ್ಮಾಣ ಮಾಡಬೇಕು. ಮೊರಾರ್ಜಿ ಶಾಲೆಯಲ್ಲಿ ಆದಿವಾಸಿ ಮಕ್ಕಳಿಗೆ ಆದ್ಯತೆ ಮೇರೆಗೆ ಪ್ರವೇಶ ಅವಕಾಶ ನೀಡಬೇಕು ಎಂದರು.

ಜಿಲ್ಲೆಯಲ್ಲಿ ಆದಿವಾಸಿಗಳು ಹಲವಾರು ದುಶ್ಚಟಗಳಿಗೆ ಹಾಗೂ ಕಾಯಿಲೆಗಳಿಂದ ಮರಣಕ್ಕೆ ತುತ್ತಾಗುತ್ತಿದ್ದಾರೆ. ಆದ್ದರಿಂದ ಸರ್ಕಾರ ಇಂತಹ ಆದಿವಾಸಿಗಳಿಗಾಗಿ ಮನಪರಿವರ್ತನ ಶಿಬಿರಗಳನ್ನು ಹಮ್ಮಿಕೊಳ್ಳಬೇಕು. ವೀರಾಜಪೇಟೆ ತಾಲೂಕಿನ ಬಾಡಗ, ಬಸವನಹಳ್ಳಿ, ಚನ್ನಂಗಿ, ಮಾಲ್ದಾರೆ, ಕೋಟೆಮಚ್ಚಿ ಹಾಡಿಗಳಿಗೆ ಸೂಕ್ತ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು ಎಂದು ಒತ್ತಾಯಿಸಿದರು.

ಗೋಷ್ಠಿಯಲ್ಲಿ ಸೋಲಿಗರ ಅಭಿವೃದ್ಧಿ ಸಂಘದ ಉಪಾಧ್ಯಕ್ಷೆ ಬಿ.ಕೆ. ಕಾವೇರಿ, ಕಾರ್ಯದರ್ಶಿ ಬಿ.ಆರ್. ಅನಿತಾ, ಸದಸ್ಯರಾದ ನವೀನ್, ನಾಗಮ್ಮ, ಗಂಗಮ್ಮ, ಅಣ್ಣಯ್ಯ, ರಾಜು, ಕರಿಯಪ್ಪ, ಸಂಧ್ಯಾ ಇದ್ದರು.