ಬೇಸಿಗೆ ತಿಂಗಳು ಆರಂಭ ಎಂದರೆ ಆಗುವುದೇ ಬರ ಗಾಲದ ಅನುಭವ. ಅದರಲ್ಲಿಯೂ ನೀರಿನ ಲಭ್ಯತೆ, ಅಗತ್ಯತೆ ಹಾಗೂ ಬಳಕೆಯ ಬಗ್ಗೆ ಅರಿವು ಮೂಡಿಸು ವುದು ಹಾಗೂ ಅದರಂತೆ ನಡೆಯುವುದು ಅತ್ಯವಶ್ಯಕ. ಅದರಲ್ಲಿಯೂ ಕೃಷಿಗೆ ನೀರು ಅಗತ್ಯ. ವಿಶ್ವದ ಪ್ರತಿ ಕಾರ್ಯಕ್ರಮದಲ್ಲಿ ನೀರಿನ ಬಳಕೆ ಆಗುತ್ತಿದೆ. ಆದ್ದರಿಂದ ನೀರು, ಕೃಷಿ, ಕೈಗಾರಿಕೆ ಈ ಮೂರು ಕಾರ್ಯಕ್ರಮಗಳು ಅತಿಮುಖ್ಯವಾದವುಗಳು ಎನ್ನಬಹುದು. ಇವು ಮೂರರಲ್ಲಿ ಒಂದು ಬೇರೆಯಾದರೂ ಅಭಿವೃದ್ಧಿ ಕುಂಠಿತವಾಗುತ್ತದೆ. ನೀರಿಲ್ಲದೆ ಕೃಷಿ ಇಲ್ಲ. ಕೃಷಿ ಇಲ್ಲದೆ ಕೈಗಾರಿಕೆಗಳಿಲ್ಲ. ಹಾಗೂ ಕೈಗಾರಿಕೆಗಳಿಲ್ಲದೆ ದೇಶದ ಅಭಿವೃದ್ಧಿಯಂತೂ ಇಲ್ಲವೇ ಇಲ್ಲ. ಆಧುನಿಕ ಜಗತ್ತಿನಲ್ಲಿ ನೀರಿನ ಅವಶ್ಯಕತೆ ಅಗತ್ಯಕ್ಕಿಂತಲೂ ಹೆಚ್ಚು. ನೀರಿನ ಸದ್ಬಳಕೆಯ ಬಗ್ಗೆ ನಮಗೆ ಕಾಳಜಿ ಇರÀಬೇಕು.
ಒಟ್ಟು ದೊರೆಯುವ ನೀರಿನಲ್ಲಿ ಸಮುದ್ರದ ನೀರಿನ ಪ್ರಮಾಣ ಶೇ.97.20 ಇದೆ. ಉಳಿದ ಶೇ.2.80 ಮಾನವನ ಉಪಯೋಗಕ್ಕೆ ಬರುತ್ತದೆ. 2.8 ರ ಶೇ.85.3 ಕೃಷಿಗೆ ಬಳಕೆಯಾದರೆ ಶೇ.6.5 ಗೃಹಬಳಕೆ, ಶೇ.1.3 ರಿಂದ 1.5 ರಷ್ಟು ನೀರು ಉದ್ಯಮಕ್ಕೆ ಹಾಗೂ ಶೇ.0.30 ವಿದ್ಯುತ್ ಉತ್ಪಾದನೆಗೆ ಬಳಕೆಯಾಗುತ್ತದೆ.
ಕರ್ನಾಟಕದಲ್ಲಿ 1,91,976 ಚ ಕಿ.ಮೀ. ವಿಸ್ತೀರ್ಣದಲ್ಲಿ ಭೂಮಿ ಇದ್ದು, ಅದರಲ್ಲಿ 121.6 ಲಕ್ಷ ಹೆಕ್ಟೇರ್ ಭೂಮಿ ಕೃಷಿಗೆ ಯೋಗ್ಯವಾಗಿದ್ದು, 35-36 ಲಕ್ಷ ಹೆಕ್ಟೇರ್‍ಗೆ ಮಾತ್ರ ಇಲ್ಲಿಯವರೆಗೆ ನೀರಾವರಿ ಸೌಲಭ್ಯ ಕಲ್ಪಿಸಲಾಗಿದೆ. ಭಾರತ ವಿಶ್ವದ ಅತಿ ಪ್ರಾಚೀನ ಹಾಗೂ ಜಗತ್ತಿನ 7ನೇ ಅತಿದೊಡ್ಡ ಭೌಗೋಳಿಕ ಪ್ರದೇಶವನ್ನು ಹೊಂದಿರುವ ರಾಷ್ಟ್ರವಾಗಿದೆ. ಇದರ ಜೊತೆಗೆ ಅತಿದೊಡ್ಡ ಫಲವತ್ತಾದ ಭೂಮಿಯನ್ನು ಹೊಂದಿದೆ. ಹಾಗೂ ಅದರಿಂದ ಭಾರತ ವಿಶ್ವದ ಅತಿದೊಡ್ಡ ಮಾನವ ಸಂಪನ್ಮೂಲವನ್ನು ಹೊಂದಲು ಸಾಧ್ಯವಾಗಿದೆ.
ಅಂದರೆ ದುಡಿಯುವ ಕೈಗಳು ಭಾರತದಲ್ಲಿದ್ದು ಗಂಗಾ, ಯಮುನ, ಬ್ರಹ್ಮಪುತ್ರ, ನರ್ಮದಾ, ಸಿಂಧು, ಕಾವೇರಿ, ಕೃಷ್ಣ, ಗೋದಾವರಿ, ಸೇರಿ ಹಿಮಾಲಯದ ತಪ್ಪಲಿನಲ್ಲಿ ಹರಿಯುವ ನದಿಗಳು ಜನರ ಜೀವನ ಪಾವನವಾಗುವಂತೆ ಮಾಡಿದೆ. ಆದುದರಿಂದ ಆಧುನಿಕ ಕೃಷಿ ಪದ್ಧತಿಯಂತೆ ನೀರಿನ ಆದ್ಯತೆ ಅರಿತು ನೀರಿನ ಸದ್ಬಳಕೆ ಮಾಡಬೇಕು. ನೀರಾವರಿ ಕ್ಷೇತ್ರವನ್ನು ವೃದ್ಧಿಸಿ, ಆಧುನಿಕ ಕೃಷಿ ಪದ್ಧತಿಯನ್ನು ಉತ್ತೇಜಿಸಿ, ಕೃಷಿಗೆ ಪೂರಕ ಮಾರುಕಟ್ಟೆ ಒದಗಿಸುವ ಕಾರ್ಖಾನೆಗಳು ಬೆಳೆದು ದೇಶವನ್ನು ಅಭಿವೃದ್ಧಿಯತ್ತ ಕೊಂಡೊಯ್ಯಬೇಕು.
ಪ್ರಕೃತಿಯ ಲಕ್ಷೋಪಲಕ್ಷ ಜೀವರಾಶಿಗಳಲ್ಲಿ ಮಾನವನು ಒಂದು ಕೊಂಡಿ ಮಾತ್ರ. ಮಾನವನು ಅಸಾಮಾನ್ಯ ಬುದ್ಧಿಶಕ್ತಿಯಿಂದ ಭೌದ್ಧಿಕವಾಗಿ, ತಾಂತ್ರಿಕವಾಗಿ, ವೈಜ್ಞಾನಿಕವಾಗಿ ಬೆಳೆದರೂ ಮಣ್ಣು ಮತ್ತು ನೀರಿನ ಮೇಲೆ ಮಾನವನಂತೆ ಎಲ್ಲಾ ಜೀವ ರಾಶಿಗಳಿಗೆ ಸಮಾನ ಹಕ್ಕಿದೆ. ಮನುಷ್ಯನ ಅತಿ ಆಸೆಯ ಫಲವಾಗಿ ಇಂದು ನೀರು ಮತ್ತು ಮಣ್ಣು ಕಲುಷಿತಗೊಳ್ಳುತ್ತ್ತಿದೆ. ಮಣ್ಣು ಮತ್ತು ನೀರು ನಾವು ಗಳಿಸಿದ ಆಸ್ತಿಯಲ್ಲ. ನಮ್ಮ ಹಿರಿಯರು ನಮಗೆ ಕೊಟ್ಟ ಬಳುವಳಿ. ಇದನ್ನು ಇದೇ ತೆರದಲ್ಲಿ ಸಂರಕ್ಷಿಸಿ ಮುಂದಿನ ಪೀಳಿಗೆಗೆ ಹಸ್ತಾಂತರಿಸುವ ಜವಾಬ್ದಾರಿ ನಮ್ಮ ಮೇಲಿದೆ. ಅತಿಯಾದ ರಸಾಯನಿಕ ಬಳಸಿ ಮಣ್ಣಿನ ಫಲವತ್ತತೆ ಹಾಳು ಮಾಡುವುದರ ಬದಲು ಸಾವಯವ ಕೃಷಿ ಪದ್ಧತಿ ಅಳವಡಿಸಲು ದೇಸೀ ಕೃಷಿಗೆ ಉತ್ತೇಜನ ಕೊಡುವ ಕಾಲ ಬಂದಾಯಿತು. ಮಳೆ ನೀರು ಕೊಯ್ಲು, ಕೆರೆಕಟ್ಟೆಗಳು ಹಾಗೂ ಜಲ ಮೂಲಗಳ ಸಂರಕ್ಷಣೆ, ಪ್ರತಿಯೊಬ್ಬರು ನೀರಿನ ಲಭ್ಯತೆ ಅರಿತು ವ್ಯಕ್ತಿಗತವಾಗಿ, ಅವಶ್ಯವಿರುವ ನೀರನ್ನು ಬಳಸುವುದು. ಕೃಷಿ ಹಾಗೂ ಕೈಗಾರಿಕೆಗಳಲ್ಲಿ ತಾಂತ್ರಿಕ ವಿಧಾನದ ಮೂಲಕ ನೀರಿನ ಬಳಕೆ ಮಾಡುವುದು, ಹಾಗೂ ಬಳಕೆ ಮಾಡಿದ ನೀರನ್ನು ಪುನರ್ ಶುದ್ಧೀಕರಿಸಿ ಬಳಕೆ ಮಾಡುವುದು. ನೀರು ಮನುಕುಲದ ಶ್ರೇಷ್ಠ ಅಮೃತ, ಜಲಾಶಯಗಳು ಅಕ್ಷಯಪಾತ್ರೆ ಹಾಗೂ ರೈತ ನಮ್ಮೆಲ್ಲರ ಪಾಲಿನ ನಡೆದಾಡುವ ದೇವರು, ಅವನೇ ಅನ್ನದಾತ. ಕೃಷಿ ಆಧಾರಿತ ಕೈಗಾರಿಕೆಗಳು ಆಧುನಿಕ ಭಾರತದ ದೇವಾಲಯಗಳು ಎಂಬುವುದನ್ನು ಅರಿತು, ದಿವ್ಯ ಹೆಜ್ಜೆ ಇಟ್ಟರೆ ಆಗಲೇ ಭಾರತ ವಿಶ್ವಗುರು. ಹಾಗೂ ಭಾರತವೇ ಜಗತ್ತಿನ ಪಾಲಿನ ದೊಡ್ಡಣ್ಣ ಆಗುವದರಲ್ಲಿ ಸಂದೇಹವಿಲ್ಲ.
ಇಂತಹ ಹಿನ್ನೆಲೆಯಲ್ಲಿ ಈಗ ಬೇಸಿಗೆ ಕಾಲ ಆರಂಭವಾಗಿದೆ. ಕೃಷಿ ಚಟುವಟಿಕೆಗಳು ನಡೆಯುತ್ತವೆ. ನೀರಿನ ಲಭ್ಯತೆ ಅರಿತು ನೀರಿನ ಸದ್ಭಳಕೆÉ ಆಗಲೇಬೇಕು.
ಸಲಹೆ:-ನೀರಿನ ಲಭ್ಯತೆ ಅರಿಯಬೇಕು. ಅದಕ್ಕನುಗುಣವಾಗಿ ಬೆಳೆಯ ಕಾರ್ಯ ಯೋಜನೆ ರೂಪುಗೊಳಿಸಿ, ಸಮರ್ಪಕವಾಗಿ ಬಳಸಿ. ಇಳಿಜಾರಿಗೆ ಅಡ್ಡಲಾಗಿ ಬದುಗಳ ನಿರ್ಮಾಣ. ಜಲಾನಯನ ಅಭಿವೃದ್ಧಿ ಕಾರ್ಯಕ್ರಮಗಳ ಅನುಷ್ಠಾನ. ಹನಿ ನೀರಾವರಿ ಅಳವಡಿಕೆ, ಹೊದಿಕೆ ಹಾಕುವುದು. ಶಿಪಾರಸ್ಸು ಮಾಡಿದ ಪ್ರಮಾಣದಲ್ಲಿ ಸಾವಯವ ಗೊಬ್ಬರ ಬಳಸುವುದರಿಂದ ಮಣ್ಣಿನಲ್ಲಿ ನೀರನ್ನು ಹಿಡಿದಿಟ್ಟು ಕೊಳ್ಳುವ ಶಕ್ತಿ ವೃದ್ಧಿಸುತ್ತದೆ. ಈಗಾಗಲೇ ಶುಂಠಿ ಕೃಷಿ ಆರಂಭವಾಗಿದೆ. ನೀರಿನ ಲಭ್ಯತೆ ಆಧಾರಿಸಿ ಯೋಜನೆ ರೂಪಿಸಬೇಕು. ಹಾಲಿ ಜಮೀನಿನಲ್ಲಿರುವ ತೋಟಗಾರಿಕೆ ಬೆಳೆಗಳಾದ ತಾಳೆ, ಕಾಳುಮೆಣಸು, ಅಡಿಕೆ, ತೆಂಗು ಹಾಗೂ ತರಕಾರಿ ಬೆಳೆಗಳಿಗೆ ನೀರಿನ ಬೇಡಿಕೆ ಇರುವುದರಿಂದ ನೀರಿನ ಸಮರ್ಪಕ ಬಳಕೆ ಮಾಡುವುದು ಅನಿವಾರ್ಯ.
-ಕರ್ನಾಟಕ ವಾರ್ತೆ