ಗೋಣಿಕೊಪ್ಪ ವರದಿ, ಜ. 30: ಪಶ್ಚಿಮಘಟ್ಟ ಪ್ರದೇಶದ ಪ್ರಾಕೃತಿಕ ಸಂಪನ್ಮೂಲ ರಕ್ಷಣೆಗೆ ಮುಂದಾಗಬೇಕು ಎಂದು ಕರ್ನಾಟಕ ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ ಡಾ. ಅನಂತ ಹೆಗಡೆ ಆಶಿಸರ ಅಭಿಪ್ರಾಯಪಟ್ಟರು.
ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದಲ್ಲಿ ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕಾ ಸಂಶೋಧನೆ ಮತ್ತು ವಿಸ್ತರಣಾ ವಿಶ್ವ ವಿದ್ಯಾಲಯ, ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯ ಆಯೋಜಿಸಿದ್ದ ಇಂಜಿನಿಯರಿಂಗ್ ದೃಷ್ಟಿಕೋನದಲ್ಲಿ ಸುಸ್ಥಿರ ನೈಸರ್ಗಿಕ ಸಂಪನ್ಮೂಲ ನಿರ್ವಹಣೆ ಸಮ್ಮೇಳನ ಸಮಾರೋ¥ Àದಲ್ಲಿ ಪಾಲ್ಗೊಂಡು ಮಾತನಾಡಿದರು.
ಪಶ್ಚಿಮಘಟ್ಟ ಸಂಪನ್ಮೂಲ ಅಭಿವೃಧ್ಧಿ ಎಲ್ಲರ ಕರ್ತವ್ಯವಾಗಿದ್ದು, ಸರ್ಕಾರ ಬಜೆಟ್‍ನಲ್ಲಿ ಪಶ್ಚಿಮಘಟ್ಟ ಅಭಿವೃದ್ಧಿಗೆ ವಿಶೇಷ ಅನುದಾನ ಜಾರಿ ಮಾಡಿದರೆ ಮಾತ್ರ ಮತ್ತಷ್ಟು ಸಂಶೋಧನೆಗಳಿಂದ ಸಂರಕ್ಷಿಸಲು ಅವಕಾಶ ಸಿಗಲಿದೆ. ಪಶ್ಚಿಮಘಟ್ಟ ಒತ್ತುವರಿಯಾಗಿರುವುದರಿಂದ ಪ್ರಾಕೃತಿಕ ಸಂಪನ್ಮೂಲ ನಾಶವಾಗುತ್ತಿದೆ. ಒತ್ತುವರಿ ಪ್ರದೇಶದಲ್ಲಿನ ಚಟುವಟಿಕೆ ಅರಿತು, ಅರಣ್ಯ ರಕ್ಷಣೆಗೆ ಮುಂದಾಗ ಬೇಕಿದೆ. ಅಲ್ಲಿನ ಜೀವ ವೈವಿಧ್ಯತೆಗೆ ಆದ್ಯತೆ ನೀಡಬೇಕಿದೆ ಎಂದರು.
ಸಂಶೋಧನಾ ವರದಿಗಳು ಅನುಷ್ಠಾನಗೊಳ್ಳುವಂತೆ ಸರ್ಕಾರಕ್ಕೆ ಒತ್ತಡ ಹೇರಬೇಕಿದೆ. ಭೂಮಂಡಲದ ವಿಚಾರದಲ್ಲಿ ವಿಚಾರ ಮಂಡನೆ, ಪ್ರಬಂಧ, ಸಂಶೋಧನೆಗಳಿಗೆ ಸರ್ಕಾರ ದಿಂದ ಪ್ರೋತ್ಸಾಹ ಸಿಗಬೇಕಾದರೆ, ಯೋಜನೆ ಅನುಷ್ಠಾನಗೊಳ್ಳಬೇಕು ಎಂದು ಅವರು ಹೇಳಿದರು.
ಶಿವಮೊಗ್ಗ ಯುಎಎಚ್‍ಎಸ್ ಕಮಿಟಿ ಸದಸ್ಯೆ ನೀತು ಯೋಗಿರಾಜ್ ಪಾಟೀಲ್ ಮಾತನಾಡಿ, ಕೃಷಿ ಯೊಂದಿಗೆ ಪ್ರಾಕೃತಿಕ ಸಂಪನ್ಮೂಲಗಳ ರಕ್ಷಣೆಗೆ ಹೆಚ್ಚು ಒತ್ತು ನೀಡಲು ಮುಂದಾಗಬೇಕು ಎಂದರು.
ವೀರಾಜಪೇಟೆ ಉಪ ಸಂರಕ್ಷಣಾಧಿಕಾರಿ ಶಿವಶಂಕರ್ ಮಾತನಾಡಿ, ಅರಣ್ಯ ರಕ್ಷಣೆಗೆ ಇರುವ ಸಾಕಷ್ಟು ಯೋಜನೆಗಳನ್ನು ಅನುಷ್ಠಾನಗೊಳಿಸಲು ವಿಶೇಷ ಕಾಳಜಿ ಅವಶ್ಯವಾಗಿದೆ. ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕಿದೆ ಎಂದರು.
ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದ ಡೀನ್ ಡಾ. ಸಿ. ಜಿ ಕುಶಾಲಪ್ಪ, ಕಾರ್ಯಾಗಾರ ಸಂಚಾಲಕ ಡಾ. ಜಿ. ಎಂ. ದೇವಗಿರಿ, ಕಾರ್ಯದರ್ಶಿ ಡಿ. ರವಿಕುಮಾರ್, ಸಂಘಟನಾ ಕಾರ್ಯದರ್ಶಿ ಡಾ.ಎಸ್ ಶೋಭ ಉಪಸ್ಥಿತರಿದ್ದರು.
ಸಮ್ಮೇಳನ ಸಲಹೆ ; ಕೊಡಗಿನ ನೈಸರ್ಗಿಕ ಸಂಪನ್ಮೂಲ ರಕ್ಷಣೆಗೆ ತಳಮಟ್ಟದ ಮಾಹಿತಿ ಸಂಗ್ರಹಕ್ಕೆ ಪ್ರಬಂಧಗಳಲ್ಲಿ ಹೆಚ್ಚು ಸಲಹೆಗಳು ವ್ಯಕ್ತವಾಯಿತು.
ಭೂಮಿಯ ಫಲವತ್ತತೆ, ಪೋಷಕಾಂಶ ಹಾಗೂ ಬೆಳೆ ಅನುಷ್ಠಾನದ ಮಾಹಿತಿ ನಿರಾಧಾರ. ನಿರ್ಧಿಷ್ಟ ಮಾಹಿತಿ ಸಂಗ್ರಹಿಸಲು ಮೈಕ್ರೋ ಲೆವೆಲ್ ಮಾಹಿತಿ ಅವಶ್ಯ. ಪಶ್ಚಿಮಘಟ್ಟದಲ್ಲಿ ರೋಗಕ್ಕೆ ತುತ್ತಾಗುತ್ತಿರುವ ಗಿಡಗಳ ಮಾಹಿತಿ, ಕಳೆಯಿಂದ ಬಯೋಗ್ಯಾಸ್, ಬೆಳೆ ಪದ್ಧತಿಯಲ್ಲಿ ಕೊಯ್ಲು ನಂತರದ ಮೌಲ್ಯಾಧಾರಿತ ಮಾರುಕಟ್ಟೆ ಅಭಿವೃದ್ಧಿ, ಗ್ರ್ರಾಹಕ ಹಾಗೂ ವ್ಯಾಪಾರಿಗಳ ನಡುವಿನ ಅಂತರ ತಗ್ಗಿಸುವ ಯೋಜನೆ ಬಗ್ಗೆ ಹೆಚ್ಚು ಪ್ರಬಂಧಗಳು ಮಂಡನೆಯಾದವು.
ಒಟ್ಟು 108 ಪ್ರಬಂಧಗಳಲ್ಲಿ 50 ಮಂಡನೆಯಾಗಿ, 58 ಪ್ರಬಂಧಗಳು ಅಂಚೆ ಮೂಲಕ ಮಂಡಿಸಲಾಯಿತು. ನೈಸರ್ಗಿಕ ಸಂಪನ್ಮೂಲ ವಿಭಾಗಕ್ಕೆ 59, ಯಾಂತ್ರೀಕೃತ ಕೃಷಿಗೆ 10, ಅರಣ್ಯ ಇಂಜಿನಿಯರಿಂಗ್‍ಗೆ 22, ಮೌಲ್ಯಾಧಾರಿತ ಬೆಳೆ ಪದ್ಧತಿಗೆ 17 ಪ್ರಬಂಧಗಳು ಮಂಡನೆಯಾದವು. ಕೆ.ಎಸ್. ಸಚಿನ್-ಕೆ. ವೀರಣ್ಣ, ಬಸವರಾಜು ಬೋಗಿ-ಚೆನ್ನಬಸಪ್ಪ, ಬಿ. ಸಿ. ಪುನಿತಾ ಅವರಿಗೆ ಉತ್ತಮ ಪ್ರಬಂಧ ಮಂಡನೆ ಪ್ರಶಸ್ತಿ ನೀಡಲಾಯಿತು.