ಮಡಿಕೇರಿ, ಜ. 30 : ಪ್ರಗತಿಪರ ಜನಾಂದೋಲನ ವೇದಿಕೆ ವತಿಯಿಂದ ಪೌರತ್ವ ತಿದ್ದುಪಡಿ ಕಾಯಿದೆ ವಿರೋಧಿಸಿ ಗಣರಾಜ್ಯೋತ್ಸವ ದಿನದಿಂದ ಗಾಂಧಿ ಮೈದಾನದಲ್ಲಿ ನಡೆಯುತ್ತಿದ್ದ ಉಪವಾಸ ಸತ್ಯಾಗ್ರಹ ಇಂದು ಕೊನೆಗೊಂಡಿತು.
ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಮಾಜಿ ಸಚಿವ ಯಂ.ಸಿ ನಾಣಯ್ಯ, ಪ್ರಜಾಪ್ರಭುತ್ವ ರಾಷ್ಟ್ರ ಭಾರತದಲ್ಲಿ ಸಂವಿಧಾನದ ಆಶಯ ಉಳಿಯಬೇಕು, ಭಾರತದಲ್ಲಿರುವ ವಿವಿಧ ಸಂಸ್ಕøತಿ, ಆಚಾರ, ವಿಚಾರ, ಧಾರ್ಮಿಕ ರೀತಿ ನೀತಿ ಬೇರೆ ಯಾವುದೇ ದೇಶದಲ್ಲಿಲ್ಲ. ಸರ್ವ ಜನಾಂಗದ ಸಹಬಾಳ್ವೆಗೆ ಭಾರತ ಸಾಕ್ಷಿಯಾಗಿದೆ. ರಾಜ್ಯಗಳ ಒಕ್ಕೂಟದಿಂದ ದೇಶ ರಚನೆಯಾಗಿದೆ ಕಾಯಿದೆ ಅಂಗೀಕಾರಕ್ಕೆ ಎಲ್ಲಾ ರಾಜ್ಯದ ಒಪ್ಪಿಗೆ ಬೇಕಾಗಿದೆ.
ಆದರೆ ದೇಶದಲ್ಲಿ ಕೇಂದ್ರ ಸರ್ಕಾರ ಅತಂತ್ರ ಸ್ಥಿತಿ ನಿರ್ಮಿಸಿ ಮಾನವ ಹಕ್ಕುಗಳ ಉಲ್ಲಂಘನೆ ಮಾಡುತ್ತಿದೆ ಎಂದು ಪ್ರಪಂಚದಲ್ಲಿ ಚರ್ಚೆಯಾಗುತ್ತಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಬಿಜೆಪಿ ಹೊರತುಪಡಿಸಿ ಜಾತ್ಯತೀತ ಶಕ್ತಿಗಳು ಕಾಯಿದೆಯನ್ನು ವಿರೋಧಿಸುತ್ತಿವೆ. ಕಾಯಿದೆಯಿಂದ ಸೃಷ್ಠಿಯಾಗಿರುವ ಸಂಘರ್ಷ ಕೊನೆಯಾಗಬೇಕಾದರೆ ಸರ್ವ ಪಕ್ಷದ ಶಾಸಕರನ್ನು ಗಣನೆಗೆ ತೆಗೆದುಕೊಂಡು ಚರ್ಚಿಸಿ ವಿಮರ್ಶೆ ನಡೆಸಬೇಕು ಎಂದರು. ವಿವಿಧ ಪ್ರಕರಣಗಳಲ್ಲಿ ಕ್ರಿಮಿನಲ್ ಹಿನ್ನೆಲೆಯುಳ್ಳ ಹಲವಾರು ಬಿಜೆಪಿ ಸದಸ್ಯರು ಇಂದು ಸಂಸತ್ ಸದಸ್ಯರಾಗಿದ್ದಾರೆ. ಬಿಜೆಪಿ, ಆರ್‍ಎಸ್‍ಎಸ್ ಮುಕ್ತವಾದರೆ ಸದೃಡ ಸಮಾಜ ನಿರ್ಮಾಣ ಸಾಧ್ಯ ಎಂದರು.
ಎಸ್‍ಡಿಪಿಐ ಪಕ್ಷದ ರಾಜ್ಯಧ್ಯಕ್ಷ ಇಲಿಯಾಜ್ ಮಹಮ್ಮದ್ ತುಂಬೆ ಮಾತನಾಡಿ, ಸರ್ಕಾರದ ಕೊನೆ ದಿನಗಳು ಸಮೀಪದಲ್ಲಿದೇ ತಮ್ಮ ಪದವಿ ದಾಖಲೆಗಳನ್ನು ನಕಲಿ ಮಾಡಿರುವ ಮೋದಿ ಪ್ರಜೆಗಳ ಪೌರತ್ವದ ದಾಖಲೆ ಕೇಳುತ್ತಿರುವುದು ವಿಪರ್ಯಾಸ. ಕೊಲೆ ಪ್ರಕರಣವೊಂದರಿಂದ ಗಡಿಪಾರದ ವ್ಯಕ್ತಿ ದೇಶದ ಗೃಹ ಸಚಿವ ಅಮಿತ್ ಷಾ, ಇಂದು ದೇಶದಲ್ಲಿ ಸಂಘರ್ಷ ಸೃಷ್ಠಿಸುತ್ತಿದ್ದು; 82 ದೇಶಗಳು ಈ ಕಾಯಿದೆಯನ್ನು ವಿರೋಧಿಸಿ ನಿರ್ಣಯ ಕೈಗೊಂಡಿವೆ ಎಂದು ಹೇಳಿದರು.
ಹಿರಿಯ ವಕೀಲ ಕೆ.ಪಿ. ಬಾಲಸುಬ್ರಮಣ್ಯ ಮಾತನಾಡಿ, ಈ ಕಾಯ್ದೆಯಿಂದ ಭಾರತವನ್ನು ಹಿಂದೂ ರಾಷ್ಟ್ರ ಮಾಡುವ ಹುನ್ನಾರ ಇದಾಗಿದೆ. ಕಾಯಿದೆ ಪರ ಪ್ರಾಯೋಜಿತ ಲೇಖನಗಳು ಮಾಧ್ಯಮಗಳಲ್ಲಿ ಪ್ರಕಟಗೊಳ್ಳುತ್ತಿವೆ. ಕಾಯಿದೆ ಹಿಂಪಡೆದರೆ ಮಾತ್ರ ಸಂವಿಧಾನ ಆಶಯ ಉಳಿಯುತ್ತದೆ. ಆಯೋಧ್ಯೆ ತೀರ್ಪು, ಕಾಶ್ಮೀರದ ವಿಶೇಷ ಅಧಿಕಾರ ರದ್ದುಮಾಡಿದಾಗ ಮುಸ್ಲಿಮರು ಸಂಘರ್ಷ ಸೃಷ್ಠಿ ಮಾಡಲಿಲ್ಲ ಆದರೂ ಕಾಯ್ದೆ ತಂದು ದೇಶವನ್ನು ವಿಭಜಿಸುವ ಪ್ರಯತ್ನವನ್ನು ಕೇಂದ್ರ ಸರ್ಕಾರ ಮಾಡುತ್ತಿದೆ ಎಂದು ಆರೋಪಿಸಿದರು.
ವೇದಿಕೆಯ ಪ್ರಮುಖ ನೆರವಂಡ ಉಮೇಶ್ ಮಾತನಾಡಿ, ಹಿಂದೂ-ಮುಸ್ಲಿಮರ ನಡುವಿನ ಸಂಬಂಧ ಹಾಳು ಮಾಡುವ ಸಂಚು ಕೇಂದ್ರ ಸರ್ಕಾರ ಮಾಡಿದೆ. ರಾಷ್ಟ್ರದ ಕಾವಲುಗಾರ ಎಂದು ಆಡಳಿತಕ್ಕೆ ಬಂದ ಮೋದಿ ಮತದಾರ ಮಾಲೀಕನ ದಾಖಲೆ ಕೇಳುತ್ತಿದ್ದಾರೆ. ಶಿಕ್ಷಣ, ಆರೋಗ್ಯ, ಮೂಲಭೂತ ಸೌಕರ್ಯದ ಬಗ್ಗೆ ತಲೆಕೆಡಿಸಿಕೊಳ್ಳದ ಕೇಂದ್ರ ಸರ್ಕಾರ ಕಾಯಿದೆಯನ್ನು ಬಲವಾಗಿ ಪ್ರಯೋಗಿಸುತ್ತಿದೆ ಎಂದರು.
ವೇದಿಕೆ ಸಂಚಾಲಕ ವಿ.ಪಿ ಶಶಿಧರ್ ಮಾತನಾಡಿ, ಹೋರಾಟ ಯಶಸ್ಸು ಕಂಡಿದೆ. ಹಲವರು ಉಪವಾಸ ಸತ್ಯಾಗ್ರಹಕ್ಕೆ ಬೆಂಬಲ ನೀಡಿದ್ದಾರೆ. ನಿರಂತರವಾಗಿ ಹೋರಾಟ ನಡೆಯಲಿದೆ. ಕಾಯಿದೆ ಕೈಬಿಡುವವರೆಗೂ ದೇಶದ ಜಾತ್ಯತೀತ ಚಿಂತನೆ ಪರ ಸಂಘಟನೆ ಇರಲಿದೆ ಎಂದರು.
ಈ ಸಂದರ್ಭ ಕಾಂಗ್ರೆಸ್ ಮುಖಂಡ ಮಿಟ್ಟು ಚಂಗಪ್ಪ,ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ಜಿಲ್ಲಾಧ್ಯಕ್ಷ ಕೆ. ಬಷೀರ್, ಕಮ್ಯುನಿಸ್ಟ್ ಪಾರ್ಟಿಯ ದುರ್ಗಾಪ್ರಸಾದ್, ಜಿ.ಪಂ. ಸದಸ್ಯೆ ಕೆ.ಪಿ ಚಂದ್ರಕಲಾ, ಎಸ್‍ಡಿಪಿಐ ಜಿಲ್ಲಾಧ್ಯಕ್ಷ ಅಬೂಬಕ್ಕರ್, ಮಾಜಿ ಅಧ್ಯಕ್ಷ ಅಮೀನ್ ಮೊಹ್ಸಿನ್, ಮಾಜಿ ಜಿ.ಪಂ. ಅಧ್ಯಕ್ಷೆ ಜಯಮ್ಮ, ಜೆಡಿಎಸ್ ಜಿಲ್ಲಾಧ್ಯಕ್ಷ ಕೆ.ಎಂ. ಗಣೇಶ್, ವೇದಿಕೆಯ ಪ್ರಮುಖ ಪಿ.ಆರ್. ಭರತ್, ಮುನೀರ್ ಅಹ್ಮದ್, ತೆನ್ನಿರಾ ಮೈನಾ, ಕಾಂಗ್ರೆಸ್ ಮಹಿಳಾ ಜಿಲ್ಲಾಧ್ಯಕ್ಷೆ ಸುರಯ್ಯ ಅಬ್ರಾರ್, ನಗರಸಭಾ ಮಾಜಿ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ, ನಗರಸಭಾ ಮಾಜಿ ಸದಸ್ಯರುಗಳಾದ ಮನ್ಸೂರ್, ಪೀಟರ್, ಅಬ್ದುಲ್‍ರಜಾಕ್, ಉದಯಕುಮಾರ್, ಲೀಲಾ ಶೇಷಮ್ಮ, ಜುಲೇಕಾಬಿ, ಆದಿವಾಸಿ ಒಕ್ಕೂಟದ ಸಂಚಾಲಕ ರಾಯ್ ಡೇವಿಡ್, ದಲಿತ ಸಂಘರ್ಷ ಸಮಿತಿ ಸಂಚಾಲಕ ರಾಜು ಕೆ.ಬಿ ಸೇರಿದಂತೆ ಇನ್ನಿತರರು ಹಾಜರಿದ್ದರು. ಬಳಿಕ ಮಾನವ ಸರಪಳಿ ರಚಿಸಲಾಯಿತು.