ಸೋಮವಾರಪೇಟೆ, ಜ. 30: ಸಾಧಾರಣವಾಗಿ ತೋಟದೊಳಗೆ ಬೆಳೆಯುವ ಬಾಳೆ, ಬೈನೆ, ಹಲಸು ಸೇರಿದಂತೆ ಇನ್ನಿತರ ಗಿಡ-ಮರಗಳನ್ನು ಆಹಾರವಾಗಿ ಬಳಸುತ್ತಿದ್ದ ಕಾಡಾನೆ ಗಳು, ಇದೀಗ ಹಣ್ಣು ಕಾಫಿಯನ್ನೂ ಹೊಟ್ಟೆಗೆ ಹಾಕಿಕೊಳ್ಳುತ್ತಿವೆ.
ಇದರಿಂದಾಗಿ ಕಾಫಿ ಬೆಳೆಗಾರರಿಗೆ ಹೊಸ ಸಂಕಷ್ಟ ಎದುರಾಗಿದ್ದು, ಫಸಲು ನಷ್ಟ ಅನುಭವಿಸುತ್ತಿದ್ದಾರೆ. ಇದೀಗ ಕಾಫಿ ಹಣ್ಣು ಕೊಯ್ಲಿಗೆ ಬಂದಿದ್ದು, ಎಲ್ಲಾ ತೋಟಗಳಲ್ಲೂ ಹಣ್ಣು ಕಾಫಿ ಇವೆ. ಇಂತಹ ಸಂದರ್ಭದಲ್ಲೇ ಕಾಡಾನೆಗಳ ಹಿಂಡು ಕಾಫಿ ತೋಟಕ್ಕೆ ಲಗ್ಗೆಯಿಟ್ಟು, ಗಿಡಗಳಲ್ಲಿರುವ ಕಾಫಿಹಣ್ಣನ್ನು ತಿನ್ನುತ್ತಿವೆ.
ತಾಲೂಕಿನ ಐಗೂರು, ಕಾಜೂರು, ಯಡವಾರೆ, ಸಜ್ಜಳ್ಳಿ ಸುತ್ತಮುತ್ತಲಲ್ಲಿ 10 ರಿಂದ 15 ಕಾಡಾನೆಗಳ ಹಿಂಡು ಬೀಡುಬಿಟ್ಟಿದ್ದು, ಕಾಫಿ ತೋಟಗಳಿಗೆ ಮನಸೋಯಿಚ್ಛೆ ತೆರಳಿ ಫಸಲನ್ನು ತಿಂದು ನಷ್ಟ ಪಡಿಸುತ್ತಿವೆ. ಈ ಹಿಂದೆ ಹಲಸಿನಹಣ್ಣು ಬಿಡುವ ಸಮಯದಲ್ಲಿ ತೋಟಗಳಿಗೆ ಲಗ್ಗೆಯಿಟ್ಟು, ಹೊಟ್ಟೆ ತುಂಬಿಸಿ ಕೊಳ್ಳುತ್ತಿದ್ದ ಕಾಡಾನೆಗಳು, ಇದೀಗ ಕಾಫಿ ಹಣ್ಣನ್ನೂ ಬಿಡುತ್ತಿಲ್ಲ. ಆನೆಗಳು ಹಿಂಡುಹಿಂಡಾಗಿ ಬಂದು ಕಾಫಿ ಹಣ್ಣನ್ನು ತಿನ್ನುತ್ತಿರುವದರಿಂದ ಭಾರೀ ನಷ್ಟ ಅನುಭವಿಸುವಂತಾಗಿದೆ ಎಂದು ಯಡವಾರೆಯ ಕಾಫಿ ಬೆಳೆಗಾರ ಬಗ್ಗನ ಹರೀಶ್ ‘ಶಕ್ತಿ’ಯೊಂದಿಗೆ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ಆನೆಗಳಿಗೆ ಪ್ರಿಯವಾದ ಬೈನೆ, ಬಿದಿರು ಕಣ್ಮರೆಯಾಗುತ್ತಿರುವದರಿಂದ ಅನಿವಾರ್ಯವಾಗಿ ಸಿಕ್ಕಿದ್ದನ್ನು ತಿನ್ನುವ ಪರಿಸ್ಥಿತಿ ಅವುಗಳಿಗೆ ಬಂದೊದಗಿದೆ. ಇದರೊಂದಿಗೆ ಯಡವಾರೆ, ಸಜ್ಜಳ್ಳಿ ಭಾಗದಲ್ಲಿರುವ ಹಾರಂಗಿ ಹಿನ್ನೀರು ಪ್ರದೇಶ, ತೋಟದೊಳಗಿರುವ ಕೆರೆಗಳಿಂದ ನೀರು ಕುಡಿಯಲು ಆಗಮಿಸುವ ಕಾಡಾನೆಗಳು, ತಾವು ಸಂಚರಿಸುವ ಪ್ರದೇಶದಲ್ಲೆಲ್ಲಾ ಕಾಫಿ ಫಸಲನ್ನು ನಷ್ಟಪಡಿಸುತ್ತಿವೆ. ವಿವಿಧ ಪಕ್ಷಿಗಳು, ಅಳಿಲು, ಕಬ್ಬೆಕ್ಕು ಸೇರಿದಂತೆ ಇತರ ಸಣ್ಣಪುಟ್ಟ ವನ್ಯಪ್ರಾಣಿಗಳೂ ಸಹ ಕಾಫಿ ಹಣ್ಣನ್ನು ತಿನ್ನುತ್ತವೆ. ಇದೀಗ ಆನೆಗಳೂ ಸಹ ಕಾಫಿ ಹಣ್ಣನ್ನು ತಿನ್ನಲು ಪ್ರಾರಂಭಿಸಿರುವದರಿಂದ ಬೆಳೆಗಾರರಿಗೆ ಹೊಸ ಸಂಕಷ್ಟ ಎದುರಾಗಿದೆ ಎಂದು ಹರೀಶ್ ಅಭಿಪ್ರಾಯಿಸಿದ್ದಾರೆ.
ಇದೀಗ ರೊಬಸ್ಟಾ ಮತ್ತು ಅರೇಬಿಕಾ ಕಾಫಿ ಕೊಯ್ಲಿಗೆ ಬಂದಿದ್ದು, ಬಹುತೇಕ ಕಡೆಗಳಲ್ಲಿ ಮುಕ್ತಾಯದ ಹಂತದಲ್ಲಿದ್ದರೆ, ಐಗೂರು, ಯಡವಾರೆ ಭಾಗದಲ್ಲಿ ಈಗಷ್ಟೇ ಪ್ರಾರಂಭವಾಗಿದೆ. ರಾತ್ರಿ ವೇಳೆಯಲ್ಲಿ ಹಿಂಡುಹಿಂಡಾಗಿ ಆಗಮಿಸುವ ಕಾಡಾನೆಗಳನ್ನು ಸದ್ಯದ ಮಟ್ಟಿಗಾದರೂ ತಡೆಹಿಡಿಯುವ ಕಾರ್ಯ ಅರಣ್ಯ ಇಲಾಖೆಯಿಂದ ಆಗಬೇಕಿದೆ ಎಂದು ಈ ಭಾಗದ ಕಾಫಿ ಬೆಳೆಗಾರರು ಆಗ್ರಹಿಸಿದ್ದಾರೆ.