ಮಡಿಕೇರಿ, ಜ. 30: ಮತದಾರರ ಪಟ್ಟಿಯಲ್ಲಿ ಅರ್ಹ ಮತದಾರರ ಹೆಸರು ಬಿಟ್ಟು ಹೋಗದಂತೆ ಎಚ್ಚರ ವಹಿಸುವಂತೆ ಮತದಾರರ ಪಟ್ಟಿಯ ಪರಿಷ್ಕರಣೆಯ ಜಿಲ್ಲಾ ನೋಡಲ್ ವೀಕ್ಷಕ ಜಾವಿದ್ ಅಖ್ತರ್ ಸೂಚಿಸಿದ್ದಾರೆ.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಎರಡನೇ ಹಂತದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಒಂದು ನಿರ್ದಿಷ್ಟ ಪ್ರದೇಶದಲ್ಲಿ ಮತದಾರರ ಪಟ್ಟಿಯಿಂದ ಹೆಸರು ತೆಗೆದಿರುವುದು ಹಾಗೂ ಹೆಸರು ಸೇರ್ಪಡೆಗೊಂಡಿರುವ ಬಗ್ಗೆ ಪರಿಶೀಲಿಸಿ ಅಂತಿಮ ಮತದಾರರ ಪಟ್ಟಿಯನ್ನು ಸಿದ್ಧಪಡಿಸಬೇಕೆಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಗಣ್ಯ ವ್ಯಕ್ತಿಗಳ ಹೆಸರು ಮತದಾರರ ಪಟ್ಟಿಯಲ್ಲಿ ಇರುವ ಬಗ್ಗೆ ಖಚಿತ ಪಡಿಸಿಕೊಳ್ಳಬೇಕು ಹಾಗೂ ಗುರುತಿನ ಚೀಟಿಯಲ್ಲಿ ಮತದಾರರ ಭಾವ ಚಿತ್ರವು ವ್ಯತ್ಯಾಸಗೊಂಡಿದ್ದಲ್ಲಿ ಸರಿಪಡಿಸಲು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಮಾತನಾಡಿ ಮಿಂಚಿನ ನೋಂದಣಿ ವಿಶೇಷ ಅಭಿಯಾನದ ಮೂಲಕ ಮತದಾರರ ಪಟ್ಟಿಗೆ 18 ವರ್ಷ ಪೂರ್ಣಗೊಂಡಿರುವವರ ಹೆಸರು ಸೇರ್ಪಡೆ ಹಾಗೂ ಮನೆ ಮನೆಗೆ ತೆರಳಿ ಹೆಸರು ಸೇರ್ಪಡೆ ಮತ್ತು ಮರಣ ಹೊಂದಿರುವವರ ಹಾಗೂ ಬೇರೆ ಕಡೆಗೆ ಸ್ಥಳಾಂತರ ಗೊಂಡಿರುವವರ ಹೆಸರುಗಳನ್ನು ಪರಿಶೀಲಿಸಿರುವುದಾಗಿ ಮಾಹಿತಿ ನೀಡಿದರು.
ಬಿ.ಎಲ್.ಒ.ಗಳಿಂದ ಅರ್ಹ ಮತದಾರರ ಹೆಸರುಗಳನ್ನು ಪರಿಶೀಲಿಸಿದ್ದು ಸಂಶಯಾಸ್ಪದ ಅನರ್ಹ ಮತದಾರರ ಹೆಸರುಗಳನ್ನು ಪಟ್ಟಿಯಿಂದ ಪರಿಶೀಲನೆಗೆ ಒಳಪಡಿಸಿರುವುದಾಗಿ ಅವರು ಮಾಹಿತಿ ನೀಡಿದರು.
ಮತದಾರರ ಗುರುತಿನ ಚೀಟಿಯ ಸಂಖ್ಯೆಯಲ್ಲಿ ವ್ಯತ್ಯಾಸಗಳು ಕಂಡುಬಂದಂತಹ ಸಮಸ್ಯೆಯನ್ನು ಪರಿಹರಿಸಲು ಮುಖ್ಯ ಚುನಾವಣಾ ಆಯುಕ್ತರ ಕಚೇರಿಗೆ ಮಾಹಿತಿ ನೀಡಿರುವುದಾಗಿ ಅಪರ ಜಿಲ್ಲಾಧಿಕಾರಿ ಡಾ. ಸ್ನೇಹ ತಿಳಿಸಿದರು.
ಉಪ ವಿಭಾಗಾಧಿಕಾರಿ ಟಿ. ಜವರೆಗೌಡ ಮಾತನಾಡಿ ತಹಶೀಲ್ದಾರ್ ನೇತೃತ್ವದಲ್ಲಿ 18 ವರ್ಷ ಪೂರ್ಣಗೊಂಡಿರುವವರ ಹೆಸರು ಸೇರ್ಪಡೆ ಹಾಗೂ ಮರಣ ಹೊಂದಿದವರ, ವಿವಾಹವಾಗಿ ಬೇರೆಡೆ ನೆಲೆಸಿರುವವರ ಹೆಸರುಗಳನ್ನು ಪರಿಶೀಲಿಸಿ ಮತದಾರರ ಪಟ್ಟಿಯಿಂದ ಹೆಸರನ್ನು ತೆಗೆದು ಹಾಕಲಾಗಿದೆ ಎಂದು ಮಾಹಿತಿ ನೀಡಿದರು.
ಕಾಂಗ್ರೆಸ್ ಪಕ್ಷದ ತೆನ್ನೀರ ಮೈನ, ಭಾರತೀಯ ಜನತಾ ಪಕ್ಷದ ಸಜೀಲ್ ಕೃಷ್ಣ ಜಾತ್ಯತೀತ ಜನತಾ ದಳ ಪಕ್ಷದ ಅಜಿತ್, ಚುನಾವಣಾ ತಹಶೀಲ್ದಾರ್ ಕುಸುಮ, ಶಿರಸ್ತೆದಾರದ ಪ್ರಕಾಶ್, ಪ್ರವೀಣ್ ಕುಮಾರ್, ಅನಿಲ್ ಕುಮಾರ್, ಇತರರು ಇದ್ದರು.