ವೀರಾಜಪೇಟೆ, ಜ. 30: ಅಬಕಾರಿ ಸನ್ನದುಗಳಿಂದ ಸಾರ್ವಜನಿಕರಿಗೆ ತೊಂದರೆಯಾಗದ ರೀತಿಯಲ್ಲಿ ಸರ್ಕಾರ ಮದ್ಯ ಮಾರಾಟದ ಬೆಲೆಯನ್ನು ನಿಗದಿ ಪಡಿಸಿದ್ದು ಅದರಂತೆ ನಿಗದಿಪಡಿಸಿದ್ದ ದರಕ್ಕೆ ಸನ್ನದುದಾರರು ಮದ್ಯ ಮಾರಾಟ ಮಾಡಬೇಕು. ನಿಯಮ ಉಲ್ಲಂಘಿಸಿದಲ್ಲಿ ನಿಯಮಾನುಸಾರ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ರಾಜ್ಯ ಅಬಕಾರಿ ಇಲಾಖೆಯ ಕೊಡಗು ಜಿಲ್ಲೆಯ ಉಪ ಆಯುಕ್ತರು, ದೂರುದಾರರಾದ ಮುಲ್ಲೆಂಗಡ ಶಂಕರಿ ಪೊನ್ನಪ್ಪ ಅವರಿಗೆ ಬರೆದಿರುವ ಆದೇಶ ಪತ್ರದಲ್ಲಿ ತಿಳಿಸಿದ್ದಾರೆ.

ವೀರಾಜಪೇಟೆ ತಾಲೂಕು ಹಿರಿಯ ನಾಗರಿಕರ ವೇದಿಕೆ ಅಧ್ಯಕ್ಷ ಮುಲ್ಲೆಂಗಡ ಶಂಕರಿ ಪೊನ್ನಪ್ಪ ಅವರು ಕಳೆದ ನವೆಂಬರ್ ತಿಂಗಳಲ್ಲಿ ರಾಜ್ಯ ಅಬಕಾರಿ ಇಲಾಖೆಗೆ ದೂರು ನೀಡಿ ತಾಲೂಕಿನಾದ್ಯಂತ ಗ್ರಾಮಗಳ ದಿನಸಿ ಅಂಗಡಿಗಳಲ್ಲಿ ಮದ್ಯಗಳು ದುಪ್ಪಟ್ಟು ಹಣದಲ್ಲಿ ಅಕ್ರಮವಾಗಿ ಮಾರಾಟವಾಗುತ್ತಿದೆ. ನಗರ ಪ್ರದೇಶಗಳಲ್ಲಿ ಬಾಟಲಿಗಳಲ್ಲಿರುವ ಮದ್ಯವನ್ನು ಕಾನೂನು ಬಾಹಿರವಾಗಿ ಚಿಲ್ಲರೆಯಾಗಿ ಹೆಚ್ಚಿನ ದರದಲ್ಲಿ ಸನ್ನದುದಾರರು ಮಾರಾಟ ಮಾಡುತ್ತಿರುವ ಬಗ್ಗೆಯೂ ದೂರು ನೀಡಿದ್ದರು.

ದೂರಿನ ವಿಚಾರಣೆ ನಡೆಸಿದ ಅಧಿಕಾರಿಗಳು 2018-19, 2019-20ನೇ ಸಾಲಿಗೆ ಬೇರೆ ಬೇರೆ ಪ್ರಕರಣದಲ್ಲಿ ರಾಜ್ಯದಲ್ಲಿ 387 ಸನ್ನದುದಾರರ ವಿರುದ್ಧ ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ. ಹೆಚ್ಚಿನ ದರಕ್ಕೆ ಮದ್ಯ ಮಾರಾಟ ಮಾಡಿದ್ದನ್ನು ಪತ್ತೆಹಚ್ಚಿ ಅಂತಹ ಸನ್ನದುದಾರರ ವಿರುದ್ಧ ಕೊಡಗಿನಲ್ಲಿ 36 ಪ್ರಕರಣಗಳು ದಾಖಲಾಗಿದೆ. ಈ ಎಲ್ಲ ಪ್ರಕರಣಗಳಿಗೆ ಸರ್ಕಾರದ ಹಿತದೃಷ್ಟಿಯಿಂದ ಹೆಚ್ಚಿನ ದಂಡ ವಿಧಿಸಿ ಪ್ರಕರಣವನ್ನು ವಿಲೇವಾರಿಗೊಳಿಸಲಾಗುತ್ತಿದೆ ಎಂಬುದಾಗಿ ಇಲಾಖೆಯ ಅಧಿಕಾರಿಗಳು ದೂರಿಗೆ ಪ್ರತಿಕ್ರಿಯಿಸಿದ ಪತ್ರದಲ್ಲಿ ತಿಳಿಸಿದ್ದಾರೆ. ಮದ್ಯದ ಬಾಟಲುಗಳ ಮೇಲೆ ಮುದ್ರಿತ ದರವನ್ನು ಅವಲಂಭಿಸಿ ಅದರಂತೆ ನ್ಯಾಯ ಸಮ್ಮತವಾದ ದರದಲ್ಲಿ ಮದ್ಯವನ್ನು ಮಾರಾಟ ಮಾಡುವಂತೆಯೂ ಈ ಹಿಂದೆಯೇ ಇಲಾಖೆಯಿಂದ ಸನ್ನದುದಾರರಿಗೆ ಸೂಚಿಸಲಾಗಿದೆ.