ಮಡಿಕೇರಿ, ಜ. 29: 2018 ಹಾಗೂ 2019ನೇ ಇಸವಿಯ ಮಳೆಗಾಲ ಭೂಕುಸಿತದಿಂದ; ಕರ್ನಾಟಕ - ಕೇರಳ ರಾಜ್ಯಗಳನ್ನು ಬೆಸೆಯುವ ಮಾಕುಟ್ಟ ಅಂತರರಾಜ್ಯ ಹೆದ್ದಾರಿ ಹಾಗೂ ಗಡಿಭಾಗದ ಕೂಟುಹೊಳೆ ಸೇತುವೆ ಕಾಮಗಾರಿಗೆ ಅರಣ್ಯ ಇಲಾಖೆಯ ತೊಡರುಗಾಲಿ ನಿಂದ ಗಂಭೀರ ಸಮಸ್ಯೆ ಎದುರಾಗಿದೆ. ಪರಿಣಾಮವಾಗಿ ನಿತ್ಯ ಪ್ರಯಾಣಿಕರು ಮತ್ತು ವಾಹನ ಚಾಲಕರು ತೀವ್ರ ತೊಂದರೆ ಅನುಭವಿಸುವಂತಾಗಿದೆ.ವೀರಾಜಪೇಟೆಯ ಪೆರುಂಬಾಡಿ ಮೂಲಕ ಮಾಕುಟ್ಟಕ್ಕಾಗಿ ಇರ್ಟಿ ಹಾಗೂ ಕಣ್ಣೂರುಗೆ ತೆರಳುವ ಹೆದ್ದಾರಿಯಲ್ಲಿ ಭೂಕುಸಿತದಿಂದ ಅಲ್ಲಲ್ಲಿ ರಸ್ತೆ ಹಾನಿಗೊಂಡಿದೆ. ಈ ಹೆದ್ದಾರಿಯ ಇಕ್ಕಡೆಗಳಲ್ಲಿ ಕೊಡಗು ಅರಣ್ಯ ಇಲಾಖೆಗೆ ಒಳಗೊಂಡಿರುವ ವನ್ಯಜೀವಿ ಸಂರಕ್ಷಿತ ಅರಣ್ಯ ಪ್ರದೇಶವಿದೆ. ಈ ಪ್ರದೇಶದೊಳಗೆ ಬ್ರಿಟಿಷ್ ಆಳ್ವಿಕೆಯಿಂದಲೂ ರಸ್ತೆ ನಿರ್ಮಾಣದೊಂದಿಗೆ; ನಿತ್ಯ ಉಭಯ ರಾಜ್ಯಗಳ ಜನತೆ ದೈನಂದಿನ ವ್ಯವಹಾರ ನಿಮಿತ್ತ ಪ್ರಯಾಣಿಸುತ್ತಿದ್ದಾರೆ.ಹೀಗಿದ್ದರೂ ಪ್ರಸ್ತುತ ದಿನಗಳಲ್ಲಿ ಕಳೆದ ಎರಡು ವರ್ಷಗಳಿಂದ ಕೊಡಗು ಸೇರಿದಂತೆ ಉಭಯ ರಾಜ್ಯಗಳ ಜನತೆ ನಿತ್ಯ ತೊಂದರೆ ಅನುಭವಿಸುತ್ತಿದ್ದಾರೆ. ಕಾರಣ ಪೆರುಂಬಾಡಿ ಹಾಗೂ ಮಾಕುಟ್ಟ ನಡುವೆ ಅಲ್ಲಲ್ಲಿ ರಸ್ತೆಯು ಭೂಕುಸಿತದಿಂದ ಹಾನಿಗೊಂಡು ವಾಹನಗಳು ತೆರಳಲು ತೊಂದರೆ ಯಾಗಿದೆ. ಎರಡು ವಾಹನಗಳು ಈ ಅಪಾಯದ ಸ್ಥಳಗಳಲ್ಲಿ ಮುಖಾಮುಖಿ ಯಾದಾಗ; ಮುಂದೆ ಸಾಗಲು ಅಸಾಧ್ಯವಾಗಿದೆ. ಒಂದೆಡೆ ರಸ್ತೆಬದಿ ಬೆಟ್ಟ ಸಾಲಿನ ಅರಣ್ಯದಿಂದ ಕೂಡಿದ್ದರೆ; ಇನ್ನೊಂದು ಬದಿ ಭಾರೀ ಪ್ರಪಾತದ ಕಾಡುಗಳಿಂದ ಅಪಾಯವನ್ನು ಆಹ್ವಾನಿಸುವಂತಾಗಿದೆ.
ಅರಣ್ಯ ಇಲಾಖೆ ಅಡ್ಡಿ : ಕರ್ನಾಟಕ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು; ಹಾನಿಗೊಂಡಿರುವ ಸ್ಥಳಗಳಲ್ಲಿ ರಸ್ತೆ ಅಭಿವೃದ್ಧಿಗೆ ಜಾಗ ಬಿಟ್ಟುಕೊಡುವಂತೆ ಅರಣ್ಯ ಇಲಾಖೆಗೆ ಪತ್ರ ಬರೆದಿದ್ದಲ್ಲದೆ; ಕೊಡಗಿನ ಉಸ್ತುವಾರಿ ಸಚಿವರ ಸಹಿತ ಜನಪ್ರತಿನಿಧಿಗಳು ಈ ಕೆಲಸಕ್ಕೆ ಅಡ್ಡಿಪಡಿ ಸದಂತೆ ಸೂಚಿಸಿದ್ದರೂ ಸಂಬಂಧಿಸಿದ ಅಧಿಕಾರಿಗಳು ಸ್ಪಂದಿಸಿಲ್ಲ.
ಪರಿಣಾಮ ಇರುವ ರಸ್ತೆಯನ್ನೇ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು;
(ಮೊದಲ ಪುಟದಿಂದ) ಜನತೆಯ ತೆರಿಗೆ ಹಣ ವ್ಯಯಿಸಿ ರಿಪೇರಿ ಮಾಡುತ್ತಿದ್ದರೂ; ಕೊಡಗಿನ ಮಳೆಗಾಲ ಮತ್ತೆ ಎಲ್ಲವೂ ಮಣ್ಣು ಪಾಲಾಗುವಂತಾಗಿದೆ. ಕಳೆದ ಎರಡು ವರ್ಷದಿಂದ ಇದೊಂದು ಗಂಭೀರ ಸಮಸ್ಯೆಯಾಗಿದೆ. ಆದರೆ ಅರಣ್ಯ ಇಲಾಖೆಯಿಂದ ಯಾವದೇ ಸ್ಪಂದನವಿಲ್ಲ.
ಅಪೂರ್ಣ ಸೇತುವೆ : ಅದೇ ರೀತಿಯಾಗಿ ಮಾಕುಟ್ಟದಿಂದ ಇರ್ಟಿ ಮೂಲಕ ಕಣ್ಣೂರು ಜಿಲ್ಲೆಯ ಮಟ್ಟನೂರು ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳಬೇಕಿದೆ. ಈ ಅಪಾಯಕಾರಿ ರಸ್ತೆಗಾಗಿ ಮುಂದೆ ಸಾಗಿದರೆ; 1920ರ ಅವಧಿಗೆ ಬ್ರಿಟಿಷರು ಕೂಟುಹೊಳೆಗೆ ಅಡ್ಡಲಾಗಿ; ಕರ್ನಾಟಕ - ಕೇರಳವನ್ನು ಬೆಸೆಯುವ ರಸ್ತೆ ನಿರ್ಮಿಸಿದ್ದು; ಇದು ತೀರಾ ಅಪಾಯದಲ್ಲಿದೆ.
ಪರಿಣಾಮ ಈಗಾಗಲೇ ಕೇರಳ ಸರಕಾರ ಕಣ್ಣೂರು ಹೆದ್ದಾರಿ ಅಭಿವೃದ್ಧಿಯೊಂದಿಗೆ ಕೊಡಗಿನ ಗಡಿಯ ತನಕ ಕೂಟುಹೊಳೆಗೆ ಅಡ್ಡಲಾಗಿ ನೂತನ ಸೇತುವೆ ಕಾಮಗಾರಿ ಕೈಗೊಂಡಿದೆ; ಕೆಲವೇ ಅಡಿಗಳಷ್ಟು ಈ ಸೇತುವೆ ನಿರ್ಮಾಣಕ್ಕೆ; ಕೊಡಗಿನ ಅರಣ್ಯಾಧಿಕಾರಿಗಳು ಜಾಗ ಕಲ್ಪಿಸಲು ಪ್ರಸ್ತಾವನೆ ಸಲ್ಲಿಸಿ ವರ್ಷಗಳೇ ಉರುಳಿವೆ. ಹೀಗಿದ್ದರೂ ಸ್ಪಂದನ ಲಭಿಸದೆ; ಕೆಲಸ ನಿಂತು ಹೋಗಿದೆ.
ಮುಖ್ಯಮಂತ್ರಿ ಮಧ್ಯಸ್ಥಿಕೆಗೆ ಮನವಿ : ಈ ಹೆದ್ದಾರಿ ಹಾಗೂ ಅಪೂರ್ಣ ಸೇತುವೆ ಕಾಮಗಾರಿ ಬಗ್ಗೆ; ಸಾರ್ವಜನಿಕ ದೂರುಗಳ ಹಿನ್ನೆಲೆ ಮೇಲ್ಮನೆ ಸದಸ್ಯೆ ವೀಣಾ ಅಚ್ಚಯ್ಯ ಖುದ್ದು ಪರಿಶೀಲಿಸಿದ್ದಾರೆ. ಈ ವೇಳೆ ‘ಶಕ್ತಿ’ಯೊಂದಿಗೆ ಮಾತನಾಡಿದ ಅವರು; ಎರಡು ರಾಜ್ಯಗಳನ್ನು ಬೆಸೆಯುವ ಮುಖ್ಯ ಹೆದ್ದಾರಿ ಹಾಗೂ ಸಂಬಂಧಿಸಿದ ಸೇತುವೆ ಕಾಮಗಾರಿ ವಿಳಂಬ ಬಗ್ಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಮಧ್ಯೆ ಪ್ರವೇಶಿಸುವಂತೆ ಒತ್ತಾಯ ಮಾಡಿದ್ದಾರೆ.
ಅಲ್ಲದೆ ಮುಖ್ಯಮಂತ್ರಿಗಳು ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರೊಂದಿಗೆ ಮಾತುಕತೆ ನಡೆಸಿ; ನಮ್ಮ ರಾಜ್ಯದಿಂದ ಅರಣ್ಯ ಇಲಾಖೆ ತೊಡರುಗಾಲು ಹಾಕಿರುವ ಅಭಿವೃದ್ಧಿ ಕೆಲಸಕ್ಕೆ; ಕೂಡಲೇ ಅನುವು ಮಾಡಿಕೊಡಬೇಕೆಂದು ಮನವಿ ಮಾಡಿದ್ದಾರೆ. ಈ ಬಗ್ಗೆ ಮುಂದಿನ ವಿಧಾನಸಭಾ ಅಧಿವೇಶನದಲ್ಲಿ ಸರಕಾರದ ಗಮನ ಸೆಳೆಯುವೆ ಎಂದು ಭರವಸೆ ನೀಡಿದ್ದಾರೆ.
ಬೇಸರ ತಂದಿದೆ : ಕೊಡಗಿನ ಜನತೆ ಕೇವಲ ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣ ಮಾತ್ರವಲ್ಲದೆ; ನಿತ್ಯ ಜಿಲ್ಲೆಯಿಂದ ಬೈತೂರು, ಪಯ್ಯವೂರ್ ಹಾಗೂ ಇತರ ದೇವಾಲಯಗಳಿಗೆ ಇದೇ ಮಾರ್ಗವಾಗಿ ಸಂಚರಿಸುತ್ತಿದ್ದು; ನಮ್ಮ ಜಿಲ್ಲೆಯನ್ನು ಬಳಸಿಕೊಂಡು ತೆರಳುವ ರಸ್ತೆ ಮತ್ತು ಸೇತುವೆಯ ದುಸ್ಥಿತಿ ಬೇಸರ ತಂದಿದೆ ಎಂದು ಪ್ರತಿಕ್ರಿಯಿಸಿದ್ದಾರೆ.