ಇತ್ತೀಚೆಗೆ ಜಬಲ್‍ಪುರದಲ್ಲಿ ಆತ್ಮಹತ್ಯೆ ಮಾಡಿಕೊಂಡ ಭಾರತೀಯ ಸೇನೆಯ ಸೈನಿಕ ಕೊಡಗಿನ ರತನ್‍ಬೋಪಣ್ಣ ಅವರ ಮೃತದೇಹದ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ತೆರಳಿದ ಮೃತರ ಸಂಬಂಧಿಕರಿಗೆ ಗೋಚರಿಸಿದ ಸೇನಾಧಿಕಾರಿಗಳ ಮಾನವೀಯತೆ ಸ್ಮರಣೀಯವಾದುದು. ಸೇನೆಯ ನಿವೃತ್ತ ಯೋಧ ಹವಾಲ್ದಾರ್ ಐನಂಡ ಮಂದಣ್ಣ ಸುಬ್ರಮಣಿ ಮೃತ ಬೋಪಣ್ಣ ಅವರ ಸೋದರಿ ರಚಿತಾಕಾವೇರಮ್ಮ, ಸಂಬಂಧಿ ಕಟ್ಟೆಂಗಡ ದಿಲೀಪ್ ಹಾಗೂ ನಾನು (ಚೀರಂಡ ಕಂದಾ ಸುಬ್ಬಯ್ಯ) ನಾವುಗಳು ಜ. 24 ರಂದು ಜಬ್ಬಲ್‍ಪುರ್ ವಿಮಾನ ನಿಲ್ದಾಣ ತಲಪಿದೆವು. ನಮ್ಮನ್ನು ಸೇನಾ ಶಿಬಿರದ ದಂಡಪಾಕ ಸುಬೇಧಾರ್ ಹನುಮಂತ ಗೌಡರವರು ಬರಮಾಡಿಕೊಂಡು ಸೇನಾ ತರಬೇತಿ ಶಿಬಿರಕ್ಕೆ ಕರೆದೊಯ್ದರು. ಮೃತ ಬೋಪಣ್ಣನವರ ಸೋದರಿ ರಚೀತರನ್ನು ಸೇನೆಯ ಮಹಿಳಾ ಅಧಿಕಾರಿಗಳಾದ ಲೆಫ್ಟಿನಂಟ್ ಕರ್ನಲ್ ವಿಭೂತಿ ಶರ್ಮ, ಕ್ಯಾಪ್ಟನ್ ಶೇಖಾ, ಕರ್ನಲ್‍ಅಖಿಲೇಶ್‍ರವರ ಧರ್ಮಪತ್ನಿ ಶ್ರೀಮತಿ ಅಂಜನಾ ಅಖಿಲೇಶ್, ಸುಬೇಧಾರ್ ಹನುಮಂತ ಗೌಡರವರ ಧರ್ಮಪತ್ನಿ ಶ್ರೀಮತಿ ವಿಜಯಲಕ್ಷ್ಮಿ ಇವರುಗಳು ಅಪ್ಪಿಕೊಂಡು ಸಂತೈಸಿದ ಆ ಕ್ಷಣ ನಮ್ಮಗಳ ಕಣ್ಣು ತುಂಬಿದವು. ಕೂಡಲೇ ಸೇನಾಧಿಕಾರಿ ಕರ್ನಲ್ ಅಖಿಲೇಶ್ ನಮ್ಮವರಾದ ಲೆಫ್ಟಿನೆಂಟ್ ಕರ್ನಲ್ ಬೇಪಡಿಯಂಡ ಅಜಿತ್ ಮತ್ತು ಅಧಿಕಾರಿಗಳು ಸೇನಾ ಆಸ್ಪತ್ರೆಯ ಶವಾಗಾರದಲ್ಲಿ ಇಟ್ಟಿದ್ದ ಬೋಪಣ್ಣನವರ ಮೃತ ದೇಹವನ್ನು ನೋಡುವ ವ್ಯವಸ್ಥೆ ಮಾಡಿದರು. ಒಂದು ಕ್ಷಣ ಬೋಪಣ್ಣನ ಮೃತ ದೇಹದ ಪರಿಸ್ಥಿತಿ ಕಂಡು ದಂಗಾದೆವು. ನಾವು ತಂದಿದ್ದ ಕಾವೇರಿ ಮಾತೆಯ ತೀರ್ಥವನ್ನು ನಾವೆಲ್ಲರು ಮೃತ ಬೋಪಣ್ಣನವರ ಬಾಯಿಗೆ ಹಾಕಿ ದೇವರಲ್ಲಿ ಪ್ರಾರ್ಥಿಸಿಕೊಂಡೆವು.
ಮೃತ ದೇಹವನ್ನು ಗ್ರಾಮಕ್ಕೆ ತರುವ ಪರಿಸ್ಥಿತಿ ಇರಲಿಲ್ಲ.. ಅದರಿಂದ ಸೇನಾ ಮಂದಿರದ ಪಂಡಿತರು (ಬ್ರಾಹ್ಮಣರು) ನಾಯಕ್ ಸುಬೇದಾರ್ ಹಿಂದೂ ಧರ್ಮದಂತೆ ವಿಧಿವಿಧಾನವನ್ನು ನಮ್ಮನ್ನೊಡಗೂಡಿ ಮುಗಿಸಿದೆವು. ಮೃತ ಬೋಪಣ್ಣನವರ ಜೊತೆ ಸೇನಾ ತರಬೇತಿಯಲ್ಲಿದ್ದ ಯುವ ಯೋಧರು ಪಾರ್ಥಿವ ಶರೀರವನ್ನು ಹೊತ್ತು ಸೇನೆಯ ಶೃಂಗರಿಸಿದ ವಾಹನ(ಟ್ರಕ್)ನಲ್ಲಿ ಇಟ್ಟು ಅತೀ ಗೌರವದಿಂದ ಹೊರಟು ಮಧ್ಯ ಭಾರತದ ಜೀವನದಿ ನರ್ಮದಾ ನದಿಯ ದಂಡೆಯಲ್ಲಿರುವ ಗ್ಯೋರಿ ಘಾಟ್ ಸ್ಮಶಾನಕ್ಕೆ ತಂದೆವು.
ಮುಂದುವರಿದು ಸೇನಾಧಿಕಾರಿಗಳು ಮತ್ತು ನಾವು ಒಡಗೂಡಿ ಮೃತ ಬೋಪಣ್ಣನವರ ಸೋದರಿ ಮತ್ತು ಸಂಭಂದಿ ದಿಲೀಪ್‍ಅವರಿಂದ ಕೊಡವ ಸಂಪ್ರದಾಯದಂತೆ ವಿಧಿವಿಧಾನವನ್ನು ಮಾಡಿಸಲಾಯಿತು. ಹಿಂದೂ ಧರ್ಮ ಸಂಪ್ರದಾಯದಂತೆ ಸೌದೆ (ಕಟ್ಟಿಗೆ)ಯಿಂದಲೇ ಸರ್ವವಿಧಿವಿಧಾನ, ಗೌರವದೊಂದಿಗೆ ನಮ್ಮ ನಿಮ್ಮೆಲ್ಲರ ಪ್ರೀತಿಯ ಯೋಧ ಬೋಪಣ್ಣನ ದೇಹಕ್ಕೆ ಸಂಬಂಧಿ ದಿಲೀಪ್ ರವರಿಂದ ಅಗ್ನಿ ಸ್ಪರ್ಶ ಮಾಡಿಸಿ ಮಧ್ಯ ಭಾರತದ ಜೀವನದಿಯ ದಡದಲ್ಲಿ ಅಗ್ನಿಯೊಂದಿಗೆ ಯೋಧ ರಚನ್ ಬೋಪಣ್ಣ ವಿಲೀನನಾದರು.
ಮುಖ್ಯವಾಗಿ ಯೋಧನ ಅಂತ್ಯಕ್ರಿಯೆಯಲ್ಲಿ ಸೇನೆಯ ಮಹಿಳಾಧಿಕಾರಿಗಳು ತಮ್ಮ ಸಂಪ್ರದಾಯದಂತೆ ಕಿವಿಯ ಓಲೆಯನ್ನು ಬಿಚ್ಚಿಟ್ಟು ಪಾಲ್ಗೊಂಡು ಸಂಪ್ರದಾಯವನ್ನು ಎತ್ತಿಹಿಡಿದು ಮಾನವೀಯತೆ ಮೆರೆದರು. ಕಡೆಯದಾಗಿ ನಾವು ಸಂಜೆಯ ಹೊತ್ತಿಗೆ ಚಿತಾಗಾರಕ್ಕೆ ತೆರಳಿ ಬೋಪಣ್ಣ ಚಿತೆಯ ವಿಭೂತಿಯನ್ನು ಶೇಖರಿಕೊಂಡು ನಮ್ಮೂರಿನ ಕಡೆ ಹೊರಟೆವು... ವಿಮಾನ ನಿಲ್ದಾಣದವರೆಗೆ ಕ್ಯಾಪ್ಟನ್ ಶೇಖಾ ಮತ್ತು ಸುಬೇಧಾರ್ ಹನುಮಂತ ಗೌಡರವರು ನಮ್ಮನ್ನು ಬೀಳ್ಕೊಟ್ಟು, ಸಾಂತ್ವನ ಹೇಳಿ, ಧೈರ್ಯ ತುಂಬಿ ಅತೀ ದುಃಖದಿಂದ ನಮಸ್ಕರಿಸಿ ಹೊರಟರು.
ನಮ್ಮ ಮೃತ ಯೋಧ ಬೋಪಣ್ಣನವರ ಅಂತ್ಯಕ್ರಿಯೆಯನ್ನು ಇಷ್ಟರಮಟ್ಟಿಗೆ ದೇವರು ಮೆಚ್ಚುವಂತೆ ನೆರವೇರಿಸಿಕೊಟ್ಟ ಅದರಲ್ಲೂ ಮುಖ್ಯವಾಗಿ ಕೊಡವ ಜನಾಂಗಕ್ಕೇ ಹೆಮ್ಮೆ ಎನಿಸುವ ಲೆಫ್ಟಿನಂಟ್ ಕರ್ನಲ್ ಬೇಪಡಿಯಂಡ ಅಜಿತ್ ಮತ್ತು ಅವರ ಧರ್ಮಪತ್ನಿ ಲೇಖಾ ಅಜಿತ್, ಸುಬೇಧಾರ್ ಹನುಮಂತ ಗೌಡರವರು, ಅವರ ಧರ್ಮಪತ್ನಿ ವಿಜಯಲಕ್ಷ್ಮಿ ಇವರುಗಳ ಸೇವೆ ಸದಾ ಸ್ಮರಣೀಯವಾದುದು.
ಜಬ್ಬಲ್ ಪೂರ್ ಸಿಗ್ನಲ್ ಸೇನಾ ತರಬೇತಿ ಶಿಬಿರದ ಸದಸ್ಯರು ಒಂದು ಕುಟುಂಬ ಇದ್ದಂತೆ ಕಂಡುಬಂದರು.
-ಕಂದಾಸುಬ್ಬಯ್ಯ ಚೀರಂಡ