ಕುಶಾಲನಗರ, ಜ. 29: ಕುಶಾಲನಗರದ ಗುಂಡೂರಾವ್ ಬಡಾವಣೆಯ ಎರಡನೇ ಹಂತದ ನಿವೇಶನಗಳ ಹರಾಜು ಪ್ರಕ್ರಿಯೆಗೆ ಪಟ್ಟಣ ಪಂಚಾಯ್ತಿ ಮುಂದಾಗಿರುವ ಬಗ್ಗೆ ನಾಗರಿಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಕುಶಾಲನಗರ ಪಟ್ಟಣ ಪಂಚಾಯ್ತಿ ವ್ಯಾಪ್ತಿಗೆ ಒಳಪಡುವ ಬಡಾವಣೆಯಲ್ಲಿ 50 ನಿವೇಶನಗಳ ಹರಾಜು ಪ್ರಕ್ರಿಯೆ ಫೆ.1 ರಿಂದ 15 ರತನಕ ನಡೆಯುವ ಬಗ್ಗೆ ಪ್ರಕಟಣೆ ಹೊರಡಿಸಿದ್ದು ಇದರಲ್ಲಿ ಸುಮಾರು ಶೇ.30 ರಷ್ಟು ನಿವೇಶನಗಳು (ಸುಮಾರು 15 ಕ್ಕೂ ಅಧಿಕ ನಿವೇಶನಗಳು) ಕಾವೇರಿ ನದಿ ಪ್ರವಾಹದಲ್ಲಿ ಮುಳುಗಡೆಯಾಗುತ್ತಿರು ವುದು ಕಳೆದ ಎರಡು ವರ್ಷಗಳ ಬೆಳವಣಿಗೆಯಾಗಿದೆ. ಈ ಬಗ್ಗೆ ಮಾಹಿತಿ ತಿಳಿಸಿದ್ದರೂ ಜಿಲ್ಲಾಧಿಕಾರಿಗಳ ನೇತೃತ್ವದ ಐಡಿಎಸ್‍ಎಂಟಿ ಸಭೆ ಇದನ್ನು ಲೆಕ್ಕಿಸದೆ ಮುಳುಗಡೆ ನಿವೇಶನಗಳನ್ನು ಹರಾಜು ಪ್ರಕ್ರಿಯೆಗೆ ಇಟ್ಟಿರುವುದು ನಿಯಮಬಾಹಿರವಾಗಿದೆ.
ತಾವರೆಕೆರೆ ಒತ್ತಿನಲ್ಲಿರುವ ಬಡಾವಣೆಯಲ್ಲಿ ಕಳೆದ ಆಗಸ್ಟ್ ತಿಂಗಳಲ್ಲಿ ಈ ನಿವೇಶನಗಳ ಮೇಲೆ ಅಂದಾಜು 3 ರಿಂದ 5 ಅಡಿಗಳಷ್ಟು ನೀರು ನಿಂತಿದ್ದು 3 ದಿನಗಳ ಕಾಲ ರಾಷ್ಟ್ರೀಯ ಹೆದ್ದಾರಿಯ ಸಂಚಾರಕ್ಕೆ ಕೂಡ ಅಡ್ಡಿಯಾಗಿತ್ತು. ಈಗಾಗಲೆ ಕುಶಾಲನಗರ ವ್ಯಾಪ್ತಿಯ 8 ರಿಂದ 10 ಬಡಾವಣೆಗಳು ಮಳೆಗಾಲದಲ್ಲಿ ಜಲಾವೃತಗೊಳ್ಳುತ್ತಿದ್ದು ನಾಗರಿಕರಿಗೆ ಭಾರೀ ಹಾನಿ ಉಂಟಾಗುತ್ತಿದೆ. ಸರಕಾರ ಎರಡು ವರ್ಷಗಳಿಂದ ಪರಿಹಾರ ನೀಡುತ್ತಾ ಬಂದಿದ್ದು ನದಿ ನಿರ್ವಹಣೆ ಮಾಡುವಲ್ಲಿ ಸಂಪೂರ್ಣ ನಿರ್ಲಕ್ಷ್ಯ ಧೋರಣೆ ತಾಳುತ್ತಿದೆ ಎಂದು ನಾಗರಿಕರು ಪತ್ರಿಕೆಯೊಂದಿಗೆ ದೂರಿದ್ದಾರೆ. ಈಗಾಗಲೆ ಕೋಟಿಗಟ್ಟಲೆ ಹಣವನ್ನು ಬಡಾವಣೆ ಅಭಿವೃದ್ಧಿ ಹೆಸರಿನಲ್ಲಿ ವ್ಯಯಿಸುತ್ತಿದ್ದು ಇದು ಕೂಡ ಅವೈಜ್ಞಾನಿಕ ಕಾಮಗಾರಿಯಂತೆ ಕಂಡುಬಂದಿದ್ದರೂ ಅಧಿಕಾರಿಗಳು ಕಣ್ಮುಚ್ಚಿ ಕುಳಿತಿರುವುದು ಸಂಶಯಕ್ಕೆ ಎಡೆಮಾಡಿದೆ ಎಂದು ಸಾರ್ವಜನಿಕರು ದೂರಿದ್ದಾರೆ.
ಈ ಹಿನ್ನಲೆಯಲ್ಲಿ ನಿವೇಶನ ಹರಾಜು ಪ್ರಕ್ರಿಯೆ ತಕ್ಷಣ ರದ್ದುಗೊಳಿಸುವಂತೆ ನಾಗರಿಕರು ಆಗ್ರಹಿಸಿದ್ದಾರೆ. ಸ್ಥಳೀಯ ಪಟ್ಟಣ ಪಂಚಾಯ್ತಿ ಪ್ರತಿನಿಧಿಗಳು, ಅಧಿಕಾರಿಗಳು ಕೂಡ ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಸಮರ್ಪಕ ಮಾಹಿತಿ ಒದಗಿಸುವಲ್ಲಿ ವಿಫಲರಾಗಿದ್ದು ಕೂಡಲೇ ಜಿಲ್ಲಾಧಿಕಾರಿಗಳು ಗಮನಹರಿಸ ಬೇಕೆಂದು ಕೋರಿದ್ದಾರೆ.
-ಚಂದ್ರಮೋಹನ್