ಮಡಿಕೇರಿ, ಜ. 29: ತಾಲೂಕಿನ ಅರುವತ್ತೋಕ್ಲು ಗ್ರಾಮದ ಶ್ರೀ ವಿಷ್ಣಪ್ಪ ದೇವರ (ಮಹಾವಿಷ್ಣು) ಬ್ರಹ್ಮ ಕಳಶೋತ್ಸವ ಶ್ರದ್ಧಾ ಭಕ್ತಿಯಿಂದ ನಡೆಯಿತು. ಸಹಸ್ರಮಾನದ ಇತಿಹಾಸ ಹೊಂದಿರುವ ಚೋಳರ ಕಾಲದಲ್ಲಿ ರಾಜಾಶ್ರಯದಲ್ಲಿ ಸ್ಥಾಪಿತವಾದ ವಿಷ್ಣಪ್ಪ ದೇವರ ಬ್ರಹ್ಮಕಳಶೋತ್ಸವ ಶಂಕರ ನಾರಾಯಣ ವೈಲಾಯ ತಂತ್ರಿಗಳ ನೇತೃತ್ವದಲ್ಲಿ ನಡೆಯಿತು. ಮೂರು ದಿನಗಳ ಕಾಲ ಸಾಮೂಹಿಕ ಪ್ರಾರ್ಥನೆ, ಆಚಾರ್ಯ ವರಣ, ಪುಣ್ಯಹವಾಚನೆ, ವಾಸ್ತು ಬಲಿ, ರಕ್ಷೋಘ್ನ ಹೋಮ, ಪ್ರಾಯಶ್ಚಿತ್ತ ಹೋಮ, ಅಷ್ಟಾದಿಕ್ಪಾಲಕ ಪ್ರತಿಷ್ಠೆ, ವಿಷ್ಣು ಸಹಸ್ರನಾಮ ಪಾರಾಯಣ, ತತ್ವಹೋಮ, ಸುದರ್ಶನ ಹೋಮ, ಕ್ಷೇತ್ರ ಶುದ್ಧಿ, ಮನ್ಯು ಸೂಕ್ತ, ಭಾಗ್ಯ ಸೂಕ್ತ ಹೋಮ ,ಕಳಸ ಪೂಜೆ ,ಅದಿವಾಸ ಹೋಮ ಅಷ್ಟಬಂಧ ಕಳಶಾಭಿಷೇಕಗಳು ತಂತ್ರಿಗಳು ಮತ್ತು ದೇವಾಲಯದ ಪ್ರಧಾನ ಅರ್ಚಕ ದೇವಿಪ್ರಸಾದ್ ಭಟ್ ಅವರ ನೇತೃತ್ವದಲ್ಲಿ ನಡೆಯಿತು.
ಊರು ತಕ್ಕರಾದ ತೆನ್ನಿರಾ ಮೈನಾ ಊರಿನ ಪರವಾಗಿ ನಡೆಯಲಿ ಎಂದು ಪ್ರಾರ್ಥನೆ ಸಲ್ಲಿಸಿದರು. ದೇವತಾ ಕಾರ್ಯದಲ್ಲಿ ಆಡಳಿತ ಮಂಡಳಿಯ ಅಧ್ಯಕ್ಷ ಪೂಜಾರಿರ ಮಾದಪ್ಪ, ಉಪಾಧ್ಯಕ್ಷ ಪುತ್ತೇರಿರ ಸೋಮಯ್ಯ, ಪದಾಧಿಕಾರಿಗಳಾದ ಮುಂಜಾಂದಿರ ವಾಸು ನಾಣಯ್ಯ, ಗೋವಿಂದಮ್ಮನ ರಾಮಯ್ಯ, ಚೆರುಮಾಡಂಡ ಸತೀಶ್ ಸೋಮಣ್ಣ, ತಕ್ಕಮುಖ್ಯಸ್ಥರಾದ ಚಾತುರನ ಅಶೋಕ್, ಪೊಡಿಯಂಡ ಸುಬ್ಬಯ್ಯ ಸೇರಿದಂತೆ ಸಾವಿರಾರು ಭಕ್ತರು, ಗ್ರಾಮಸ್ಥರು ಭಾಗಿಯಾಗಿದ್ದರು.