ಮಡಿಕೇರಿ, ಜ. 30: ಪ್ರತಿವರ್ಷದಂತೆ ಇಲ್ಲಿನ ಇಸ್ಕಾನ್ ಮಂದಿರದಲ್ಲಿ ವಿಶೇಷ ಪೂಜೆ, ಭಜನೆಯೊಂದಿಗೆ ಶ್ರೀ ಜಗನ್ನಾಥ, ಸೌಭದ್ರ ಹಾಗೂ ಬಲರಾಮರ ಮೂರ್ತಿಗಳನ್ನು ಹೊತ್ತ ರಥಯಾತ್ರೆಯು ನಗರದ ಮುಖ್ಯಬೀದಿಗಳಲ್ಲಿ ಸಾಗಿತು. ಸದ್ಭಕ್ತರು ರಥ ಎಳೆದು ಕೃತಜ್ಞರಾದರು.ರಥಯಾತ್ರೆಗೆ ಚಾಲನೆ ನೀಡುವ ಮುನ್ನ ಇಸ್ಕಾನ್ ಬಳಗದ ಮುಖ್ಯಸ್ಥ ತ್ರಿವಿಕ್ರಮದಾಸ್ ಅವರು ಮಾತನಾಡಿ; ವರ್ಷಕ್ಕೊಮ್ಮೆ ಅಚಿಂತ್ಯನಾದ ಭಗವಂತ ಶ್ರೀ ಕೃಷ್ಣನು ಈ ಮೂಲಕ ಜನರನ್ನು ಹರಸಲು ಗುಡಿಯಿಂದ ಜನತೆಯೆಡೆಗೆ ಬರುತ್ತಾನೆ ಎಂದು ಬಣ್ಣಿಸಿದರು. ಜಗತ್ತಿಗೆ ಒಡೆಯನಾಗಿರುವ ಅಚಿಂತ್ಯ ರೂಪಿ ಶ್ರೀ ಕೃಷ್ಣನ ಸ್ಮರಣೆ ಮಾತ್ರದಿಂದ ಮನುಷ್ಯ ಮಾತ್ರರ ಚಿಂತೆ, ದುಃಖಗಳು ದೂರವಾಗಿ ಜೀವನ್ಮುಕ್ತಿ ಕಂಡು ಕೊಳ್ಳುವದು ಸಾಧ್ಯವೆಂದು ಅವರು ನೆನಪಿಸಿದರು.ಕಾಲೇಜು ರಸ್ತೆಯ ಪೇಟೆ ಶ್ರೀ ರಾಮಮಂದಿರ (ಮೊದಲ ಪುಟದಿಂದ) ಎದುರಿನಿಂದ ಆರಂಭಗೊಂಡ ರಥಯಾತ್ರೆಯು; ಚೌಕ್, ಗಣಪತಿ ಬೀದಿ, ಮಹದೇವಪೇಟೆ, ಅಂಚೆಕಚೇರಿ ಮುಂಭಾಗ ಮುಖ್ಯರಸ್ತೆಗಳಲ್ಲಿ ಸಂಚರಿಸಿ ಗಾಂಧಿ ಮೈದಾನದಲ್ಲಿ ಸಂಗಮಗೊಂಡಿತು. ಇಸ್ಕಾನ್ ಬಳಗ ಹಾಗೂ ಸದ್ಭಕ್ತರಿಂದ ರಥ ಎಳೆಯುವದರೊಂದಿಗೆ ಹಿಮ್ಮೇಳಕ್ಕೆ ತಕ್ಕಂತೆ ತಾಳ ಹಾಕುತ್ತಾ ಭಗವಂತನ ಸಂಕೀರ್ತನೆ ನಡೆಯಿತು. ಮಹಾಪೂಜೆ ಬಳಿಕ ಸಾಂಸ್ಕøತಿಕ ಕಾರ್ಯಕ್ರಮ ಈ ಪ್ರಯುಕ್ತ ಜರುಗಿತು.ರಥಯಾತ್ರೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನಗರದ ಜನತೆಯೊಂದಿಗೆ; ವಿವಿಧೆಡೆಗಳಿಂದ ಆಗಮಿಸಿದ್ದ ಇಸ್ಕಾನ್ ಅನುಯಾಯಿಗಳು ಭಾಗವಹಿಸಿದ್ದರು. ಬಳಗದ ಪ್ರಮುಖರಾದ ಸುಧೀರ್ ಚೈತನ್ಯ ದಾಸ್, ಸಿದ್ಧಗೋವಿಂದ ದಾಸ್, ಸುಪ್ರೀತಿ ಮಾಧವಿ, ಅನುರಾಧ ಪದ್ಮಾವತಿ, ಗೋಪಿಕಾ ಯಶೋಧ, ಬಸವರಾಜ್, ಪುಟ್ಟರಾಜು ಮೊದಲಾದವರು ನೇತೃತ್ವ ವಹಿಸಿದ್ದರು.