ಚಿತ್ರ ವರದಿ: ವಾಸು ಎ.ಎನ್
ಸಿದ್ದಾಪುರ, ಜ. 30: ಬಡವರ ಜೀವಕ್ಕೆ ನೆರಳಾಗಿರುವ ತಣಲ್ ಸಂಸ್ಥೆ ಬಡವರ ಪಾಲಿಗೆ ಆಶಾಕಿರಣ. ಕೇರಳ ರಾಜ್ಯದ ವಡಗರದಲ್ಲಿ ಕಳೆದ 12 ವರ್ಷಗಳ ಹಿಂದೆ ಪ್ರಾರಂಭವಾದ ತಣಲ್ (ನೆರಳು) ಚಾರಿಟೇಬಲ್ ಟ್ರಸ್ಟ್ ಇಂದು ಬಡವರ ನೆರವಿಗೆ ಮುಂದಾಗಿರುವುದು ಎಲ್ಲರ ಪ್ರಶಂಸೆಗೆ ಒಳಪಟ್ಟಿದೆ. ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ತಣಲ್ ಸಂಸ್ಥೆಯು ತೀವ್ರವಾಗಿ ಅನಾರೋಗ್ಯ ದಿಂದ ಬಳಲುತ್ತಿರುವ ಬಡ ರೋಗಿಗಳಿಗಾಗಿ ಡಯಾಲಿಸಿಸ್ ಕೇಂದ್ರಗಳನ್ನು ಆರಂಭಿಸಿ ಉಚಿತವಾಗಿ ಡಯಾಲಿಸಿಸ್‍ಗಳನ್ನು ಮಾಡಿ ಕೊಡುತ್ತಿದೆ. ಅತೀ ಕಡು ಬಡವ ನೂರಾರು ಕುಟುಂಬಗಳನ್ನು ಗುರುತಿಸಿ ಅವರಿಗೆ ಉಚಿತವಾಗಿ ಆಹಾರದ ಕಿಟ್‍ಗಳನ್ನು ನಿರಂತರವಾಗಿ ವಿತರಣೆ ಮಾಡುತ್ತಿದೆ. ಅನಾಥರಿಗೂ ಆಶ್ರಯ ನೀಡಲಾಗುತ್ತಿದೆ ತಣಲ್ ಸಂಸ್ಥೆಯು ಈಗಾಗಲೇ ಕೇರಳ ರಾಜ್ಯ ಹಾಗೂ ಕರ್ನಾಟಕ ರಾಜ್ಯದಲ್ಲಿ ಸೇರಿದಂತೆ ಒಟ್ಟು 54 ಡಯಾಲಿಸಿಸ್ ಕೇಂದ್ರಗಳನ್ನು ತೆರೆದು ಬಡ ರೋಗಿಗಳಿಗೆ ಚಿಕಿತ್ಸೆಯನ್ನು ನೀಡುತ್ತಿದೆ. ಕೇರಳ ರಾಜ್ಯದ ವಡಗರದಲ್ಲಿ 100 ಯಂತ್ರಗಳನ್ನು ಒಂದೇ ಜಾಗದಲ್ಲಿ ಹೊಂದಿಕೊಂಡಿದ್ದು ಪ್ರತಿನಿತ್ಯ 400 ಮಂದಿ ರೋಗಿಗಳಿಗೆ ಡಯಾಲಿಸಿಸ್ ಮಾಡಲಾಗುತ್ತಿದೆ ಎಂದು ಸಂಸ್ಥೆ ಮಾಹಿತಿ ನೀಡಿದ್ದಾರೆ.
ಸಿದ್ದಾಪುರ ವ್ಯಾಪ್ತಿಯ ಹಲವಾರು ಮಂದಿ ರೋಗಿಗಳು ಈ ಹಿಂದೆ ಡಯಾಲಿಸಿಸ್‍ಗಾಗಿ ದೂರದ ಊರಿಗೆ ತೆರಳುತ್ತಿದ್ದರು. ಬಡ ರೋಗಿಗಳಿಗೆ ದೂರದ ಊರಿಗೆ ತೆರಳಲು ಆರ್ಥಿಕ ಪರಿಸ್ಥಿತಿ ಇಲ್ಲದೇ ಸಂಕಷ್ಟಕ್ಕೆ ಸಿಲುಕುತ್ತಿದ್ದರು. ಇದನ್ನು ಅರಿತ ತಣಲ್ ಸಂಸ್ಥೆ ಸಿದ್ದಾಪುರದ ಎಂ.ಜಿ. ರಸ್ತೆಯ ಹೀರಾ ಸೆಂಟರ್ ಬಳಿಯಲ್ಲಿ ನವೆಂಬರ್ 16, 2019 ರಿಂದ ಉಚಿತವಾಗಿ ರೋಗಿಗಳಿಗೆ ಡಯಾಲಿಸಿಸ್ ಪ್ರಾರಂಭ ಮಾಡಲಾರಂಭಿಸಿತು. ನವೆಂಬರ್ ತಿಂಗಳಿನಲ್ಲಿ 22 ಮಂದಿ, ಡಿಸೆಂಬರ್‍ನಲ್ಲಿ 95, ಜನವರಿಯಲ್ಲಿ 95 ಮಂದಿ ಡಯಾಲಿಸಿಸ್‍ಗಾಗಿ ರೋಗಿಗಳು ಆಗಮಿಸಿ ಸದುಪಯೋಗ ಪಡಿಸಿಕೊಂಡಿದ್ದಾರೆ ಎಂದು ಸಂಸ್ಥೆಯ ಸಿಬ್ಬಂದಿಗಳು ತಿಳಿಸಿದ್ದಾರೆ. ಸಿದ್ದಾಪುರದ ಡಯಾಲಿಸಿಸ್‍ನ ಕೇಂದ್ರದಲ್ಲಿ 5 ಮಂದಿ ಸಿಬ್ಬಂದಿಗಳು ಸೇವೆ ಸಲ್ಲಿಸುತ್ತಿದ್ದಾರೆ. ದಿನಕ್ಕೆ 8 ಮಂದಿ ಚಿಕಿತ್ಸೆ ಪಡೆಯಲು ಆಗಮಿಸುತ್ತಿದ್ದಾರೆ.
ಸಮಾಜ ಸೇವೆಯಲ್ಲಿ ತಣಲ್: ತಣಲ್ ಸಂಸ್ಥೆಯು ಅನಾಥರಾಗಿರುವ ವಯೋವೃದ್ಧರಿಗಾಗಿ ಹಾಗೂ ನಿರ್ಗತಿಕರಿಗಾಗಿ ಕೇರಳ ರಾಜ್ಯದ ವಡಚೇರಿ ಎಂಬಲ್ಲಿ ನಿರ್ಗತಿಕರ ಕೇಂದ್ರ ಪಾರಂಭಿಸಿದ್ದು, ಅಲ್ಲಿ 270ಕ್ಕೂ ಅಧಿಕ ಮಂದಿ ಆಶ್ರಯ ಪಡೆಯುತ್ತಿದ್ದಾರೆ. ಇದಲ್ಲದೇ ಮಡಿಕೇರಿಯ ತ್ಯಾಗರಾಜ ಕಾಲೋನಿಯಲ್ಲಿ ನಿರ್ಗತಿಕರ ಕೇಂದ್ರವನ್ನು ಪ್ರಾರಂಭಿಸಿ ಅಲ್ಲಿ 23 ಮಂದಿ ಆಶ್ರಯ ಪಡೆಯುತ್ತಿದ್ದಾರೆ. ಅವರುಗಳ ಎಲ್ಲಾ ಖರ್ಚು ವೆಚ್ಚಗಳನ್ನು ತಣಲ್ ಸಂಸ್ಥೆಯು ಭರಿಸುತ್ತಿದೆ.
ಅಧಿಕೃತವಾಗಿ ಉದ್ಘಾಟನೆ : ಸಿದ್ದಾಪುರದ ಎಂ.ಜಿ. ರಸ್ತೆಯ ಹೀರಾ ಮಸೀದಿಯ ಬಳಿ ಇರುವ ತಣಲ್ ಸಂಸ್ಥೆ ವತಿಯಿಂದ ಪ್ರಾರಂಭಿಸಿರುವ ಬಡ ರೋಗಿಗಳಿಗೆ ಡಯಾಲಿಸಿಸ್ ಕೇಂದ್ರದ ಉದ್ಘಾಟನೆ ಕಾರ್ಯಕ್ರಮವು ಫೆ. 1 ರಂದು ಸಂಜೆ 4 ಗಂಟೆಗೆ ನಡೆಯಲಿದೆ. ಉದ್ಘಾಟನೆಯನ್ನು ಶಾಸಕ ಕೆ.ಜಿ. ಬೋಪಯ್ಯ ನೆರವೇರಿಸಲಿದ್ದಾರೆ. ತಣಲ್ ಸಂಸ್ಥೆಯ ಅಧ್ಯಕ್ಷ ಡಾ. ಇದ್ರೀಸ್ ಪ್ರಾಸ್ತಾವಿಕ ನುಡಿ, ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ , ಗ್ರಾ.ಪಂ. ಅಧ್ಯಕ್ಷ ಮಣಿ, ಸಿದ್ದಾಪುರ ಜುಮ್ಮಾ ಮಸೀದಿ ಅಧ್ಯಕ್ಷ ಕೆ. ಉಸ್ಮಾನ್ ಹಾಜಿ, ಎಸ್.ಎನ್.ಡಿ.ಪಿ. ಯೂನಿಯನ್‍ನ ಜಿಲ್ಲಾಧ್ಯಕ್ಷ ವಿ.ಕೆ. ಲೋಕೇಶ್, ಲಯನ್ಸ್ ಕ್ಲಬ್ ಅದ್ಯಕ್ಷ ಕೆ.ಜೆ. ವಿವೇಕ್ ಜೋಯಪ್ಪ, ಸಂತ ಜೋಸೆಫ್ ಚರ್ಚ್‍ನ ಧರ್ಮಗುರುಗಳಾದ ರೇ.ಫಾ. ಜೋನಸ್ ಸೇರಿದಂತೆ ಹಲವಾರು ಗಣ್ಯರು ಭಾಗವಹಿಸಲಿದ್ದಾರೆ.
ಸಂತ್ರಸ್ತರ ಸಂಕಷ್ಟಕ್ಕೆ ಸ್ಪಂದಿಸಿದ ಸಂಸ್ಥೆ: ಕೊಡಗು ಜಿಲ್ಲೆಯಲ್ಲಿ ಕಳೆದ ಎರಡು ವರ್ಷಗಳಿಂದ ಪ್ರವಾಹಕ್ಕೆ ಸಿಲುಕಿ ಮನೆ ಕಳೆದುಕೊಂಡ ಸಂತ್ರಸ್ತರ ಕುಟುಂಬಗಳಿಗೆ ತಣಲ್ ಸಂಸ್ಥೆಯು ಸ್ಪಂದಿಸಿದೆ. ಈ ಬಾರಿಯ ಪ್ರವಾಹಕ್ಕೆ ಸಿಲುಕಿ ಮನೆ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿಕೊಂಡಿದ್ದ ಸಂತ್ರಸ್ತರಿಗಾಗಿ ಮನೆ ನಿರ್ಮಾಣ ಮಾಡಲು ನೆಲ್ಯಹುದಿಕೇರಿ ಗ್ರಾಮದಲ್ಲಿ 2 1/2 ಏಕರೆ ಜಾಗವನ್ನು ಖರೀದಿಸಲಾಗಿದ್ದು ಈಗಾಗಲೇ ಆ ಜಾಗದಲ್ಲಿ 15 ಮನೆಗಳ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ. ಮತ್ತಷ್ಟು ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿರುವ ತಣಲ್ ಸಂಸ್ಥೆಯು ಬಡವರ ಪಾಲಿಗೆ ಸಂಜೀವಿನಿಯಾಗಿ ಸೇವೆ ಸಲ್ಲಿಸುತ್ತಿರುವ ಬಗ್ಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.