ಸೋಮವಾರಪೇಟೆ, ಜ. 30: ಸಕಾಲದಲ್ಲಿ ಮಣ್ಣಿನ ಪರೀಕ್ಷೆ ಮಾಡಿಸಿ, ಬೆಳೆಗಳಿಗೆ ಸೂಕ್ತ ಪೋಷಕಾಂಶಗಳನ್ನು ನೀಡಿದರೆ ಹೆಚ್ಚಿನ ಇಳುವರಿ ಪಡೆಯಬಹುದು ಎಂದು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಹೆಚ್.ಎಸ್. ರಾಜಶೇಖರ್ ಹೇಳಿದರು.

ಇಲ್ಲಿನ ಕೃಷಿ ಇಲಾಖಾ ಕಚೇರಿಯಲ್ಲಿ ನಡೆದ ತಾಲೂಕು ಕೃಷಿಕ ಸಮಾಜದ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಎರಡು ವರ್ಷಕ್ಕೊಮ್ಮೆ ಮಣ್ಣು ಪರೀಕ್ಷೆಯನ್ನು ಕಡ್ಡಾಯವಾಗಿ ಮಾಡಿಸಬೇಕು. ಈಗ ಮಣ್ಣು ಪರೀಕ್ಷೆಗೆ ಸಕಾಲವಾಗಿದ್ದು, ಕೃಷಿಕರೆಲ್ಲರೂ ಮಣ್ಣು ಪರೀಕ್ಷೆ ಮಾಡಿಸುವ ಮೂಲಕ ಅಗತ್ಯ ಪೋಷಕಾಂಶವನ್ನು ಕೃಷಿ ಭೂಮಿಗೆ ನೀಡಬೇಕು ಎಂದು ಸಲಹೆ ನೀಡಿದರು.

ಕೃಷಿ ಇಲಾಖೆಯಿಂದ ಸಹಾಯಧನದಲ್ಲಿ ದೊರೆಯುವ ಸೌಲಭ್ಯಗಳನ್ನು ಪಡೆದುಕೊಂಡು ಕೃಷಿಯಲ್ಲಿನ ಉತ್ಪಾದನಾ ವೆಚ್ಚ ಕಡಿಮೆ ಮಾಡಿಕೊಳ್ಳಬೇಕು. ಮಣ್ಣು ಪರೀಕ್ಷೆ ಮಾಡಿಸದೆ ಬೇಕಾಬಿಟ್ಟಿ ರಾಸಾಯನಿಕ ಗೊಬ್ಬರವನ್ನು ಹಾಕಿದರೆ ಪ್ರಯೋಜನವಿಲ್ಲ. ಎಲ್ಲರೂ ವೈಜ್ಞಾನಿಕ ಕೃಷಿಯತ್ತ ಗಮನಹರಿಸಬೇಕು. ಕೃಷಿ ಭೂಮಿಗೆ ಕಾಂಪೋಸ್ಟ್ ಗೊಬ್ಬರ ಹಾಕಬೇಕು ಎಂದು ಸಲಹೆಯಿತ್ತರು.

ಕೃಷಿ ಇಲಾಖೆಯಲ್ಲಿ ಪವರ್ ಟ್ರಿಲ್ಲರ್, ಸ್ಪ್ರೇಯರ್, ಕಳೆ ಕೊಚ್ಚುವ ಯಂತ್ರ, ಕಟಾವು ಯಂತ್ರ, ಪಂಪ್‍ಸೆಟ್ಸ್, ಬ್ಯಾಟರಿ ಸ್ಪ್ರೇಯರ್ ಇನ್ನಿತರ ಯಂತ್ರೋಪರಣಗಳು ಸಹಾಯಧನದಲ್ಲಿ ದೊರೆಯುತ್ತದೆ. ಕೃಷಿಕರು ಇದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು.

ಕಾಫಿ ಮಂಡಳಿ ವತಿಯಿಂದ ಸಂಚಾರಿ ಮಣ್ಣು ಪರೀಕ್ಷಾ ಘಟಕ ಕಾರ್ಯನಿರ್ವಹಿಸುತ್ತಿದ್ದು, ಗ್ರಾಮೀಣ ಭಾಗದಲ್ಲಿ ಮಣ್ಣಿನ ಪರೀಕ್ಷೆ ಮಾಡಬಹುದು. ಗ್ರಾಮದ ಮುಖಂಡರು ಕಾಫಿ ಮಂಡಳಿಯ ಅಧಿಕಾರಿಗಳನ್ನು ಸಂಪರ್ಕಿಸಬಹುದು ಎಂದು ಕಾಫಿ ಮಂಡಳಿಯ ವಿಸ್ತರಣಾಧಿಕಾರಿಗಳು ಮಾಹಿತಿ ನೀಡಿದರು.

ಪಶುವೈದ್ಯ ಇಲಾಖೆಯ ಸಹಾಯಕ ನಿರ್ದೇಶಕ ಡಾ. ಎಸ್.ವಿ. ಬದಾಮಿ ಮಾತನಾಡಿ, ರಾಸುಗಳಿಗೆ ವಿಮಾ ಯೋಜನೆಯಿದ್ದು, ಬಿಪಿಎಲ್ ಕಾರ್ಡ್ ಇರುವವರು ಶೇ. 25 ವಂತಿಕೆ ಹಾಗೂ ಎಪಿಎಲ್ ಹೊಂದಿದವರು ಶೇ. 50 ರಷ್ಟು ವಂತಿಕೆ ನೀಡಬೇಕು ಎಂದರು.

ಬಾಳೆ, ತೆಂಗು, ಶುಂಠಿ ಕೃಷಿಗೆ ಸಹಾಯಧನದ ಸೌಲಭ್ಯವಿದೆ. ಯಂತ್ರೋಪಕರಣಗಳನ್ನು ಖರೀದಿಸಲು ಇಲಾಖೆಯಿಂದ ಸಹಾಯಧನ ನೀಡಲಾಗುತ್ತದೆ ಎಂದು ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ಮುತ್ತಪ್ಪ ಹೇಳಿದರು.

ಕೃಷಿಕ ಸಮಾಜದ ತಾಲೂಕು ಅಧ್ಯಕ್ಷ ಎಸ್.ಪಿ. ಪೊನ್ನಪ್ಪ ಮಾತನಾಡಿ, ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಸಕಾಲದಲ್ಲಿ ಕೃಷಿಕರಿಗೆ ತಲಪಿಸುವ ಜವಾಬ್ದಾರಿ ಅಧಿಕಾರಿಗಳದ್ದು. ಕೃಷಿ ಇಲಾಖೆ ಪ್ರತಿವರ್ಷ ಸಹಾಯಧನದಲ್ಲಿ ಸುಣ್ಣವನ್ನು ಕೃಷಿಕರಿಗೆ ಸರಬರಾಜು ಮಾಡಬೇಕು ಎಂದರು. ಪಟ್ಟಣದಲ್ಲಿ ಕೃಷಿಭವನ ನಿರ್ಮಾಣಕ್ಕೆ ಸಿದ್ಧತೆ ನಡೆಯುತ್ತಿದೆ ಎಂದು ಇದೇ ಸಂದರ್ಭ ಪೊನ್ನಪ್ಪ ತಿಳಿಸಿದರು.

ವೇದಿಕೆಯಲ್ಲಿ ಸಮಾಜದ ಉಪಾಧ್ಯಕ್ಷ ಗೋವಿಂದರಾಜು, ಖಜಾಂಚಿ ಯಡವನಾಡು ರಮೇಶ್, ಪದಾಧಿಕಾರಿಗಳಾದ ರಘು, ಸಚಿ ಕಾಳಪ್ಪ, ಜೋಯಪ್ಪ, ಮಹೇಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.