ಕುಶಾಲನಗರ, ಜ. 30: ಕುಶಾಲನಗರದ ಗುಂಡೂರಾವ್ ಬಡಾವಣೆಯ ನಿವೇಶನಗಳ ಇ-ಹರಾಜು ಪ್ರಕ್ರಿಯೆಯನ್ನು ತಕ್ಷಣ ರದ್ದುಗೊಳಿಸಿ ಪುನರ್ ಪರಿಶೀಲನೆ ನಡೆಸಬೇಕೆಂದು ಕುಶಾಲನಗರದ ಜನಪ್ರತಿನಿಧಿಗಳು, ವಿವಿಧ ರಾಜಕೀಯ ಪಕ್ಷಗಳ ಪ್ರಮುಖರು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಪಟ್ಟಣ ಪಂಚಾಯ್ತಿಯ ಗುಂಡೂರಾವ್ ಬಡಾವಣೆಯಲ್ಲಿ ಐಡಿಎಸ್‍ಎಂಟಿಗೆ ಒಳಪಡುವ ಬಡಾವಣೆಯ 50 ನಿವೇಶನಗಳ ಹರಾಜು ಪ್ರಕ್ರಿಯೆಯನ್ನು ನಡೆಸಲು ಪ್ರಕಟಣೆ ಹೊರಡಿಸಿದ್ದು ಈ ಬಡಾವಣೆಯ ಬಹುತೇಕ ನಿವೇಶನಗಳು ಕಾವೇರಿ ನದಿ ಪ್ರವಾಹದಲ್ಲಿ ಜಲಾವೃತಗೊಳ್ಳುತ್ತಿರುವ ಬಗ್ಗೆ ಶಕ್ತಿಯ ವರದಿಗೆ ಸ್ಪಂದಿಸಿರುವ ಪಟ್ಟಣ ಪಂಚಾಯ್ತಿ ಸದಸ್ಯರು ಹಾಗೂ ಕುಶಾಲನಗರ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಬಿ. ಅಮೃತ್‍ರಾಜ್, ಅಧಿಕಾರಿಗಳು ಅವೈಜ್ಞಾನಿಕವಾಗಿ ಬಡಾವಣೆಯ ನಿವೇಶನಗಳನ್ನು ನಿರ್ಮಿಸಿದ್ದು ತಾವರೆಕೆರೆ ಒತ್ತಿನಲ್ಲಿರುವ ನಿವೇಶನಗಳನ್ನು ಹರಾಜು ಪ್ರಕ್ರಿಯೆಗೆ ಇಟ್ಟಿರುವುದು ಸರಿಯಲ್ಲ. ಅಲ್ಲದೆ ಸ್ಥಳೀಯ ಜನಪ್ರತಿನಿಧಿಗಳ ಜೊತೆ ಈ ಬಗ್ಗೆ ಚರ್ಚೆಯೂ ನಡೆಸಿಲ್ಲ. ಮುಳುಗಡೆಯಾಗುತ್ತಿರುವ ನಿವೇಶನಗಳನ್ನು ಕಾನೂನು ಪ್ರಕಾರವಾಗಿ ಹರಾಜು ಮಾಡಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.

ಈ ನಿಟ್ಟಿನಲ್ಲಿ ಪಂಚಾಯ್ತಿ ಆಡಳಿತಾಧಿಕಾರಿಗಳಿಗೆ ಆಕ್ಷೇಪಣಾ ಪತ್ರ ನೀಡಲಾಗಿದೆ. ಜಿಲ್ಲಾಧಿಕಾರಿಗಳ ಬಳಿ ನಿಯೋಗ ತೆರಳಿ ಸಮರ್ಪಕ ಮಾಹಿತಿ ಒದಗಿಸಿ ಕ್ರಮಕೈಗೊಳ್ಳುವಂತೆ ಕೋರಲಾಗುವುದು ಎಂದು ತಿಳಿಸಿದ್ದಾರೆ. ಕಳೆದ ಎರಡು ವರ್ಷಗಳ ಮಳೆಗಾಲದಲ್ಲಿ ಪಟ್ಟಣದ ಹಲವು ಬಡಾವಣೆಗಳು ಪ್ರವಾಹದಿಂದ ಮುಳುಗಡೆಯಾಗಿದ್ದು ಸರಕಾರ ಪರಿಹಾರವನ್ನು ಕೂಡ ನೀಡಿದೆ. ಈ ನಡುವೆ ಮುಳುಗಡೆಯಾಗುತ್ತಿರುವ ನಿವೇಶನಗಳನ್ನು ಹರಾಜಿಗಿಟ್ಟಿರುವುದು ನಿಜಕ್ಕೂ ಹಾಸ್ಯಾಸ್ಪದ ಎಂದು ಕುಶಾಲನಗರ ಬಿಜೆಪಿ ಅಧ್ಯಕ್ಷ ಕೆ.ಜಿ.ಮನು ಪ್ರತಿಕ್ರಿಯಿಸಿದ್ದಾರೆ. ಖಾಸಗಿ ಬಡಾವಣೆಗೆ ಒಂದು ಕಾನೂನು, ಸರಕಾರಿ ಒಡೆತನದ ಬಡಾವಣೆಗೆ ಬೇರೆ ಕಾನೂನು ಮಾಡಿದಂತಿದೆ. ಕೂಡಲೆ ಜಿಲ್ಲಾಧಿಕಾರಿಗಳು ಪ್ರಕ್ರಿಯೆಗೆ ತಡೆಯೊಡ್ಡಬೇಕೆಂದು ಒತ್ತಾಯಿಸಿದ್ದಾರೆ.

50 ನಿವೇಶನಗಳ ಹರಾಜು ಪ್ರಕ್ರಿಯೆ ಫೆ.1 ರಿಂದ ಪ್ರಾರಂಭಗೊಳ್ಳಲಿದ್ದು ಸೆಂಟ್ ಒಂದಕ್ಕೆ ಲಕ್ಷಾಂತರ ರೂಪಾಯಿಗಳನ್ನು ಸರಕಾರ ನಿಗದಿಪಡಿಸಿದೆ. ಲಕ್ಷಾಂತರ ಹಣ ಪಡೆದು ನಿವೇಶನ ನೀಡಿ ಮುಳುಗಡೆಯಾದಲ್ಲಿ ಸಾಮಾನ್ಯ ಜನ ತೊಂದರೆಗೆ ಒಳಗಾಗಲಿದ್ದಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿರುವ ಕುಶಾಲನಗರ ಕಾಂಗ್ರೆಸ್ ನಗರಾಧ್ಯಕ್ಷ ಜೋಸೆಫ್ ವಿಕ್ಟರ್ ಸೋನ್ಸ್ ಹಾಗೂ ಕುಡ ಮಾಜಿ ಅಧ್ಯಕ್ಷ ಮಂಜುನಾಥ್ ಗುಂಡೂರಾವ್, ಅಧಿಕಾರಿಗಳು ಸ್ಥಳ ಪರಿಶೀಲನೆ ಮಾಡಿ ವಾಸ್ತವಾಂಶ ತಿಳಿದು ಟೆಂಡರ್ ಪ್ರಕ್ರಿಯೆಗೆ ಯೋಜನೆ ರೂಪಿಸಬೇಕು ಎಂದು ಪ್ರತಿಕ್ರಿಯಿಸಿದ್ದಾರೆ. ಮುಂದಿನ ದಿನಗಳ ಸ್ಥಿತಿಗತಿ ನೋಡಿಕೊಂಡು ತಾವರೆಕೆರೆ ಒತ್ತಿನಲ್ಲಿರುವ ನಿವೇಶನಗಳ ಬಗ್ಗೆ ಯೋಜನೆ ರೂಪಿಸಬಹುದು ಎಂದು ತಿಳಿಸಿದ್ದಾರೆ.