ಮಡಿಕೇರಿ, ಜ. 31: ಬೆಂಗಳೂರು ಕೊಡವ ಸಮಾಜದ ವತಿಯಿಂದ ಫೀ.ಮಾ. ಕಾರ್ಯಪ್ಪ ಜನ್ಮದಿನವಾದ ಜ. 28 ರಂದು ಸಮಾಜದಲ್ಲಿ ಕಾರ್ಯಪ್ಪ ಸ್ಮರಣೆಯೊಂದಿಗೆ ಕೊಡವ ಸಾಂಸ್ಕøತಿಕ ದಿನವನ್ನಾಗಿ ಹಲವು ವರ್ಷದಿಂದ ಆಯೋಜಿಸಲಾಗುತ್ತಿದೆ.

ಇದರಂತೆ ಈ ಬಾರಿಯೂ ಕಾರ್ಯಪ್ಪ ಅವರ 121ನೇ ಜನ್ಮದಿನಾಚರಣೆಯೊಂದಿಗೆ ಸಾಂಸ್ಕøತಿಕ ದಿನಾಚರಣೆ ನಡೆಯಿತು. ಮುಖ್ಯ ಅತಿಥಿಗಳಾಗಿದ್ದ ನಿವೃತ್ತ ಲೆಫ್ಟಿನೆಂಟ್ ಜನರಲ್ ಬುಟ್ಟಿಯಂಡ ಕೆ. ಬೋಪಣ್ಣ, ಸಮಾಜದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಸಮಾಜದ ಸನಿಹದಲ್ಲಿರುವ ಕಾರ್ಯಪ್ಪ ಪ್ರತಿಮೆಗೆ ಪುಷ್ಪಾರ್ಚನೆಗೈದು ಗೌರವ ಸಲ್ಲಿಸಿದರು.

ಬಳಿಕ ಸಮಾಜದ ಸಭಾಂಗಣದಲ್ಲಿ ಮುಕ್ಕಾಟಿರ ನಾಣಯ್ಯ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ಜರುಗಿತು. ಅತಿಥಿ ಲೆ.ಜ. ಬೋಪಣ್ಣ ಅವರು ಮಾತನಾಡಿ, ಕಾರ್ಯಪ್ಪ ಅವರ ಸೇವೆ, ಕರ್ತವ್ಯ ಪ್ರಜ್ಞೆ, ರಾಜನೀತಿಯ ಕುರಿತು ಸ್ಮರಿಸಿದರು. ಯುವ ಜನಾಂಗದವರು ದೇಶಸೇವೆಗೆ ಮುಂದಾಗಬೇಕು, ಕಾರ್ಯಪ್ಪ ಅವರ ಆದರ್ಶ ಪಾಲನೆ ಮಾಡಬೇಕೆಂದು ಕರೆ ನೀಡಿದರು. ಅಧ್ಯಕ್ಷತೆ ವಹಿಸಿದ್ದ ನಾಣಯ್ಯ ಅವರು ಮಾತನಾಡಿ, ಸೈನಿಕ ಶಾಲೆಯ ಸದುಪಯೋಗವವನ್ನು ಜನಾಂಗದ ಮಕ್ಕಳು ಪಡೆಯಬೇಕೆಂದರು.

ಪಳಂಗಂಡ ರೀಟಾ ನಾಚಪ್ಪ ಪ್ರಾರ್ಥಿಸಿ, ಸಮಾಜದ ಕಾರ್ಯದರ್ಶಿ ಚಿರಿಯಪಂಡ ಸುರೇಶ್ ನಂಜಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಉಪಾಧ್ಯಕ್ಷೆ ಮಲ್ಲೇಂಗಡ ವೀರಾಜಲಜಕುಮಾರ್ ವಂದಿಸಿದರು. ಸಾಂಸ್ಕøತಿಕ ಸಮಾರಂಭದಲ್ಲಿ ಪೊಮ್ಮಾಲೆ ಕೊಡವ ಸಂಘದ ಬಟ್ಟೆಪಾಟ್, ಹನುಮಂತ ನಗರ ಕೊಡವ ಸಂಘದಿಂದ ಉಮ್ಮತ್ತಾಟ್, ಕೆಂಗೇರಿ ಫೀ.ಮಾ. ಕಾರ್ಯಪ್ಪ ಒಕ್ಕೂಟದಿಂದ ಕತ್ತಿಯಾಟ್, ವಿದ್ಯಾರಣ್ಯಪುರ ಇಗ್ಗುತಪ್ಪ ಕ್ಷೇಮಾಭಿವೃದ್ಧಿ ಸಂಘ, ಕಾವೇರಿ ಕೊಡವ ಸಂಘದಿಂದ ನೃತ್ಯ, ಸುಲ್ತಾನ್‍ಪಾಳ್ಯ, ವಿಜಯ ಗಣಪತಿ ಕೊಡವ ಸಂಘದ ಕೋಲಾಟ ಮತ್ತಿತರ ಕಾರ್ಯಕ್ರಮ ಜರುಗಿತು.

ಸಾಂಸ್ಕøತಿಕ ಸಮಿತಿ ಅಧ್ಯಕ್ಷ ಚಿರಿಯಪಂಡ ಆಶಾ ವಿವೇಕ್, ಸಂಚಾಲಕ ಮೂಟೆರ ತಮ್ಮಯ್ಯ, ಚಂಗಂಡ ಸುಬ್ರಮಣಿ ಮತ್ತಿತರರು ಹಾಜರಿದ್ದು; ಉಸ್ತುವಾರಿ ವಹಿಸಿದ್ದರು. ಚೇಂದಿರ ಇಂದು ಹಾಗೂ ಮಲ್ಲೇಂಗಡ ಮುತ್ತಣ್ಣ ಕಾರ್ಯಕ್ರಮ ನಿರೂಪಿಸಿದರು.