ಮಡಿಕೇರಿ, ಜ. 31: ಕೊಡವ ಭಾಷೆ ಮಾತನಾಡುವ ಒಂದು ಲಕ್ಷಕ್ಕೂ ಮೇಲ್ಪಟ್ಟು ಜನಸಂಖ್ಯೆ ಹೊಂದಿರುವ ಕೊಡಗಿನ 18 ಸಮುದಾಯಗಳ ಉಪ ಪಂಗಡಗಳ ಸರ್ವಾಂಗೀಣ ಅಭಿವೃದ್ಧಿಗಾಗಿ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಕೊಡವ ಭಾಷಿಕ ಸಮುದಾಯಗಳ ಕೂಟ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಮನವಿ ಪತ್ರ ಸಲ್ಲಿಸಿದೆ.

ಮಡಿಕೇರಿಯಲ್ಲಿ ಮುಖ್ಯಮಂತ್ರಿಗಳನ್ನು ಭೇಟಿಯಾದ ಕೂಟದ ಅಧ್ಯಕ್ಷ ಡಾ.ಮೇಚಿರ ಸುಭಾಷ್ ನಾಣಯ್ಯ ಹಾಗೂ ಪ್ರಮುಖರು ವಿವಿಧ ಬೇಡಿಕೆಗಳ ಕುರಿತು ಗಮನ ಸೆಳೆದರು.

ಕೊಡವ ಭಾಷಿಕ ಸಮುದಾಯಗಳಿಗೆ ಅನುಕೂಲ ಕಲ್ಪಿಸಲು ಸಮುದಾಯಭವನ ಕಟ್ಟಡ ನಿರ್ಮಾಣಕ್ಕೆ ಜಾಗ ಮಂಜೂರು ಮಾಡಿ ರೂ.5 ಕೋಟಿ ಅನುದಾನವನ್ನು ಬಿಡುಗಡೆಗೊಳಿಸಬೇಕು. ಸರ್ವೆ ಸಂಖ್ಯೆ 188/1ಪಿ, 189ರ ಪೈಸಾರಿ ಜಾಗವನ್ನು ಮಂಜೂರು ಮಾಡಲು ಕ್ರಮ ಕೈಗೊಳ್ಳಬೇಕು. ಕೊಡವ ಭಾಷಿಕ 18 ಸಮುದಾಯ ಬಾಂಧವರ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ವಿಚಾರಕ್ಕೆ ಸಂಬಂಧಪಟ್ಟಂತೆ ಕುಲಶಾಸ್ತ್ರೀಯ ಅಧ್ಯಯನ ನಡೆಸಲು ಸರಕಾರದ ವತಿಯಿಂದ ಉನ್ನತ ಮಟ್ಟದ ತಜ್ಞರ ಸಮಿತಿ ನೇಮಕ ಮಾಡಬೇಕು. ಕೊಡವ ಉಪ ಪಂಗಡವಾದ 18 ಭಾಷಿಕ ಜನಾಂಗದವರನ್ನು ಬುಡಕಟ್ಟು ಪರಿಶಿಷ್ಟ ಪಂಗಡ (ಎಸ್.ಟಿ) ಎಂದು ಪರಿಗಣಿಸಿ ಭಾಷಾ ಅಲ್ಪಸಂಖ್ಯಾತರೆಂದು ಘೋಷಿಸಬೇಕು. ಪೂರ್ವಿಕರ ಕಾಲದಿಂದಲೂ ಕೊಡಗಿನಲ್ಲಿ ಅವಿಭಕ್ತ ಕುಟುಂಬದ ಹಿನ್ನೆಲೆಯಲ್ಲಿ ಐನ್‍ಮನೆ, ಮಂದ್‍ಮನೆ, ಕೈಮಡಗಳು ಮತ್ತು ವಿಶಿಷ್ಟ ಸಂಸ್ಕøತಿ, ಧಾರ್ಮಿಕ ಆಚರಣೆಗಳು ಅಸ್ತಿತ್ವದಲ್ಲಿವೆ. ಮುಂದಿನ ಯುವ ಪೀಳಿಗೆಗೆ ಪರಿಚಯಿಸುವ ಅಗತ್ಯತೆ ಇರುವುದರಿಂದ ಇವುಗಳ ತುರ್ತು ನೀವಿಕರಣಕ್ಕೆ ಮತ್ತು ಉನ್ನತೀಕರಣಕ್ಕೆ ತಲಾ 1 ಕೋಟಿ ರೂ. ಆರ್ಥಿಕ ನೆರವು ನೀಡಬೇಕು. ರಾಜಕೀಯ ಮೀಸಲಾತಿಯನ್ನು ಗ್ರಾ.ಪಂ ಮಟ್ಟದಿಂದ ಜಿಲ್ಲಾ ಮಟ್ಟದವರೆಗೆ ಸುಧಾರಿತ ಸ್ಥಿತಿಯಲ್ಲಿ ಸಾಮಾಜಿಕ ವ್ಯವಸ್ಥೆಯಡಿ ಪರಿಗಣಿಸಬೇಕೆಂದು ಡಾ.ಮೇಚಿರ ಸುಭಾಷ್ ನಾಣಯ್ಯ ಅವರು ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿದರು.

ಕೊಡವ ಭಾಷೆ ಮಾತನಾಡುವ ಅಮ್ಮಕೊಡವ, ಹೆಗ್ಗಡೆ, ಐರಿ, ಕೊಯವ, ಕೆಂಬಟ್ಟಿ, ಕುಡಿಯ, ಪಣಿಕ, ನಾಯಿಂದ, ನಾಯರ್, ಕೋಲೆಯ, ಗೊಲ್ಲ, ಮಡಿವಾಳ, ಮಲಿಯ, ಕಣಿಯ, ಮೇದ, ಬಣ್ಣ, ಕಾಪಾಳ, ಬೂಣೆಬಟ್ಟ, ಬಾಣಿಯ ಹಾಗೂ ಮಾರಂಗಿ ಸಮುದಾಯಗಳ ಅಭಿವೃದ್ಧಿಗೆ ಸರ್ಕಾರ ಅಗತ್ಯ ಸಹಕಾರ ನೀಡಬೇಕೆಂದು ಅವರು ಕೋರಿದರು.