ವೀರಾಜಪೇಟೆ, ಜ. 31: ಚೀನಾ ರಾಷ್ಟ್ರದಲ್ಲಿ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಮಾರಣಾಂತಿಕವಾಗಿ ಹರಡುತ್ತಿರುವ ಕೊರೊನಾ ವೈರಸ್ ಕೇರಳ ರಾಜ್ಯಕ್ಕೂ ವ್ಯಾಪಿಸುತ್ತಿದ್ದು ಈ ವೈರಸ್ ರೋಗ ಸಾಂಕ್ರಾಮಿಕವಾಗಿರುವುದರಿಂದ ಯಾವುದೇ ಆಹಾರ ಪದಾರ್ಥಗಳ ಮೂಲಕ ಈ ರೋಗ ನೆರೆ ರಾಜ್ಯದಿಂದ ಕೊಡಗಿಗೆ ಹರಡುವ ಭೀತಿಯಿದ್ದು; ಕೊಡಗು ಕೇರಳ ಗಡಿ ಪ್ರದೇಶದ ನಿವಾಸಿಗಳು ಆತಂಕಗೊಳಗಾಗಿದ್ದಾರೆ.

ಕೇರಳ ರಾಜ್ಯಕ್ಕೂ ಚೀನಾ ರಾಷ್ಟ್ರದ ಪ್ರವಾಸಿಗರು ಭೇಟಿ ನೀಡುತ್ತಿದ್ದು ಈ ಪ್ರವಾಸಿಗರಿಂದಲೂ ಈ ರೋಗ ಹರಡುವ ಸಾಧ್ಯತೆ ಕಂಡು ಬಂದಿದೆ. ಚೀನಾದಲ್ಲಿ ಕೊರೊನಾ ವೈರಸ್ ರಾಷ್ಟ್ರ ವ್ಯಾಪಿ ಹರಡುತ್ತಿರುವ ಹಿನ್ನೆಲೆಯಲ್ಲಿ ಚೀನಾದಲ್ಲಿ ಉನ್ನತ ವ್ಯಾಸಂಗಕ್ಕೆ ತೆರಳಿದ್ದ ಕೇರಳದ ಅನೇಕ ವಿದ್ಯಾರ್ಥಿಗಳು, ಉದ್ಯೋಗಿಗಳು ವೈರಸ್ ರೋಗಕ್ಕೆ ಹೆದರಿ ಕೇರಳಕ್ಕೆ ಹಿಂತಿರುಗಿದ ಪ್ರಸಂಗವೂ ನಡೆದಿದ್ದು; ಇವರಲ್ಲಿ ಕೆಲವರಿಗೆ ಈ ರೋಗ ಸಾಂಕ್ರಾಮಿಕವಾಗಿ ಅಂಟಿದ್ದು ರೋಗಪೀಡಿತರು, ಸೋಂಕಿತರು ಕೇರಳದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕೇರಳ ಅತಿ ಹೆಚ್ಚಿನ ಸಮುದ್ರದ ಕರಾವಳಿ ಪ್ರದೇಶವನ್ನು ಹೊಂದಿದ್ದು, ಸಮುದ್ರದ ಹಸಿ ಮೀನಿಗಾಗಿ ದಕ್ಷಿಣ ಕೊಡಗಿನ ಹಸಿ ಮೀನು ವ್ಯಾಪಾರಿಗಳು ತಲಚೇರಿ, ಕಣ್ಣಾನೂರು ಸಮುದ್ರದ ಕರಾವಳಿಯನ್ನು ಅವಲಂಭಿಸಿದ್ದಾರೆ. ಕೇರಳದಲ್ಲಿ ಹರಡುತ್ತಿರುವ ಕೊರೊನ ವೈರಸ್ ರೋಗವು ಸಾಂಕ್ರಾಮಿಕ ರೋಗವಾಗಿರುವುದರಿಂದ ಈ ರೋಗದ ವೈರಸ್ ಎಲ್ಲ ಅಗತ್ಯ ಆಹಾರ ಪದಾರ್ಥಗಳ ಮೇಲೆ ಹರಡಲಿದೆ. ಈ ರೋಗ ಪೂರ್ಣವಾಗಿ ನಿರ್ಮೂಲನೆಯಾಗುವ ತನಕ ಸಮುದ್ರದ ಹಸಿಮೀನನ್ನು ತಾತ್ಕಾಲಿಕವಾಗಿ ನಿರ್ಬಂಧಿಸಬೇಕಾದ ಅಗತ್ಯವಿದ್ದು; ವೈದ್ಯಕೀಯ ತಜ್ಞರ ಪ್ರಕಾರ ಕೇರಳದಲ್ಲಿ ಯಾವುದೇ ವೈರಸ್ ರೋಗ ಹರಡಲಿ, ಇದು ಮೊದಲು ಹಸಿ ಮೀನಿನ ಮೇಲೆ ಪರಿಣಾಮ ಬೀರಲಿದೆ ಎನ್ನಲಾಗಿದೆ. ಕೇರಳದ ಕಣ್ಣಾನೂರು ಹಾಗೂ ತಲಚೇರಿಯ ಸಮುದ್ರದ ಕರಾವಳಿಯಿಂದ ಪ್ರತಿ ದಿನ ಒಂದು ಟನ್‍ಗೂ ಅಧಿಕವಾಗಿ ಹಸಿ ಮೀನು ದಕ್ಷಿಣ ಕೊಡಗಿಗೆ ರವಾನೆಯಾಗುತ್ತಿದೆ.

ಎರಡು ದಿನಗಳ ಹಿಂದೆ ಚೀನಾದಿಂದ ಬಂದ ಬೆಂಗಳೂರಿನ ಪ್ರವಾಸಿಗರಿಗೂ ರೋಗದ ಸೋಂಕು ತಗುಲಿದ್ದು; ಕೆಲವರು ಬೆಂಗಳೂರಿನ ರಾಜೀವ್ ಗಾಂಧಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದೀಗ ಇತ್ತೀಚಿನ ವಿದ್ಯಾಮಾನಗಳ ಪ್ರಕಾರ ಚೀನಾದಲ್ಲಿ ಕೊರೊನಾ ವೈರಸ್‍ನಿಂದ 130 ಮಂದಿಗೂ ಅಧಿಕ ಮಂದಿ ಸಾವನ್ನಪ್ಪಿದ್ದು ಸುಮಾರು 4000ಕ್ಕೂ ಅಧಿಕ ಮಂದಿಗೆ ರೋಗದ ಸೋಂಕು ತಗಲಿದೆಯೆನ್ನಲಾಗಿದೆ.