ಕುಶಾಲನಗರ, ಜ. 31: ಕರ್ನಾಟಕ ದಲಿತ ಸಂಘರ್ಷ ಸಮಿತಿ ವತಿಯಿಂದ ಸೋಮವಾರಪೇಟೆ ತಾಲೂಕಿನ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಫೆ. 9 ರಂದು ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಆಯೋಜಿಸಲಾಗಿದೆ ಎಂದು ದಸಂಸ ಜಿಲ್ಲಾ ಸಂಚಾಲಕ ಹೆಚ್.ಎಲ್. ದಿವಾಕರ್ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಅವರು, ಕಳೆದ 31 ವರ್ಷಗಳಿಂದ ಜಿಲ್ಲಾ ಮಟ್ಟದಲ್ಲಿ ಎಸ್.ಎಸ್.ಎಲ್.ಸಿ.ಯಿಂದ ಪದವಿವರೆಗಿನ ಎಲ್ಲ ಮಕ್ಕಳಿಗೂ ಪ್ರತಿಭಾ ಪುರಸ್ಕಾರ ನಡೆಸಿಕೊಂಡು ಬರಲಾಗುತಿತ್ತು. ಇದೀಗ ಮೂರು ತಾಲೂಕು ಮಟ್ಟದಲ್ಲೂ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ದಲಿತ ಸಮುದಾಯದ ಏಳಿಗೆಗೆ ದಲಿತ ರಾಜಕಾರಣಿಗಳ ಹಾಗೂ ನಾಯಕರ ಪಾತ್ರ ಕುರಿತು ವಿಚಾರ ಸಂಕಿರಣವನ್ನು ಏರ್ಪಡಿಸಲಾಗಿದೆ ಎಂದರು.

ಅಂದು ಬೆಳಿಗ್ಗೆ 11.30 ಗಂಟೆಗೆ ಕುಶಾಲನಗರದ ಎಪಿಸಿಎಂಎಸ್ ಸಭಾಂಗಣದಲ್ಲಿ ನಡೆಯುವ ಈ ಕಾರ್ಯಕ್ರಮವನ್ನು ರಾಜ್ಯ ಹೈಕೋರ್ಟ್ ಹಿರಿಯ ವಕೀಲ ಹೆಚ್.ಎಸ್. ಚಂದ್ರಮೌಳಿ ಉದ್ಘಾಟಿಸಲಿದ್ದಾರೆ. ದಸಂಸ ಸಮಿತಿ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಹೆಚ್.ಪಿ. ಶಿವಕುಮಾರ್ ಅಧ್ಯಕ್ಷತೆ ವಹಿಸುವರು. ಮುಖ್ಯ ಭಾಷಣಕಾರರಾಗಿ ಕೂಡಿಗೆ ಸರ್ಕಾರಿ ಪಿಯು ಕಾಲೇಜು ಪ್ರಾಂಶುಪಾಲ ಮಹಾಲಿಂಗಯ್ಯ ಪಾಲ್ಗೊಳ್ಳಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಮಡಿಕೇರಿ ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಲಕ್ಷ್ಮಿಚಂದ್ರಶೇಖರ, ಜಿಲ್ಲಾ ಅಕ್ಷರ ದಾಸೋಹ ಅಧಿಕಾರಿ ಎಂ. ಕೃಷ್ಣಪ್ಪ, ವಕೀಲ ಜಯೇಂದ್ರ, ಗ್ರಾಮಾಂತರ ಠಾಣಾಧಿಕಾರಿ ನಂದೀಶ್ ಕುಮಾರ್, ಕಾಂಗ್ರೆಸ್ ವಕ್ತಾರ ಸುರೇಶ್, ಹಿರಿಯ ನಾಯಕರಾದ ವೀರಭದ್ರಪ್ಪ, ಹೆಚ್.ಎಲ್. ಕುಮಾರ್, ಈರಪ್ಪ, ಹೆಚ್.ಜೆ. ದಾಮೋದರ್, ದೀಪಕ್ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಸೋಮವಾರಪೇಟೆ ತಾಲೂಕಿನ ಎಸ್.ಎಸ್.ಎಲ್.ಸಿ.ಯಿಂದ ಪದವಿ, ಸ್ನಾತಕೋತ್ತರ ವರೆಗಿನ ದಲಿತ ಸಮುದಾಯದ ಪ್ರತಿಭಾವಂತ ಮಕ್ಕಳು ಫೆ. 5 ರೊಳಗೆ ತಮ್ಮ ಜೆರಾಕ್ಸ್ ಅಂಕಪಟ್ಟಿ ಹಾಗೂ ಜಾತಿ ಪ್ರಮಾಣ ಪತ್ರವನ್ನು ತಾಲೂಕು ಸಂಚಾಲಕ ಮಾದಾಪಟ್ಟಣದ ಹೆಚ್.ಜೆ. ದಾಮೋದರ್ ಅವರಿಗೆ ಸಲ್ಲಿಸಬೇಕು ಎಂದರು.

ಹೆಚ್ಚಿನ ಮಾಹಿತಿಗಾಗಿ ದಿವಾಕರ್-9481523648, ದಾಮೋದರ್-9632394737 ಸಂಪರ್ಕಿಸಲು ಕೋರಿದ್ದಾರೆ.