ನಿಡ್ತ-ಸೋಮವಾರಪೇಟೆ, ಜ.31: ರಾಜ್ಯದ ಶಿಕ್ಷಣ, ಆಡಳಿತ, ವ್ಯವಹಾರ, ವಿಜ್ಞಾನ, ತಂತ್ರಜ್ಞಾನದಲ್ಲಿ ಕನ್ನಡ ತನ್ನ ನೆಲೆ ಸ್ಥಾಪಿಸಬೇಕು. ಇದನ್ನು ಸ್ಥಾಪಿಸಲು ಪ್ರಬಲ ರಾಜಕೀಯ ಇಚ್ಚಾಶಕ್ತಿ ಬೇಕು ಎಂದು ಮೈಸೂರಿನ ಮಾನಸ ಗಂಗೋತ್ರಿ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕರು ಹಾಗೂ ಸಾಹಿತಿಗಳಾದ ಡಾ. ಪ್ರೊ. ನೀಲಗಿರಿ ತಳವಾರ್ ಅಭಿಮತ ವ್ಯಕ್ತಪಡಿಸಿದರು.ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ತಾಲೂಕಿನ ನಿಡ್ತ ಗ್ರಾಮದ ಸರ್ಕಾರಿ ಶಾಲಾ ಆವರಣದಲ್ಲಿ ಆಯೋಜಿಸಿದ್ದ 14ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಮುಖ್ಯ ಭಾಷಣ ಮಾಡಿದ ಅವರು, ಇಂಗ್ಲೀಷ್‍ನ ಅಬ್ಬರದ ನಡುವೆಯೂ ಕನ್ನಡದ ಅಸ್ಮಿತೆಗೆ ಧಕ್ಕೆ ಬರುವದಿಲ್ಲ. ಇಂಗ್ಲೀಷ್ ವ್ಯಾಮೋಹ ಮೇಲ್ಪದರ ದಂತೆ ಸೀಮಿತ ಮತ್ತು ಅಲ್ಪಕಾಲಿಕ. ಇಂಗ್ಲೀಷ್, ಉರ್ದು, ಹಿಂದಿಯನ್ನು ಅರಗಿಸಿಕೊಂಡೂ ಕನ್ನಡ ಸಂಸ್ಕøತಿ ಉಳಿದಿದೆ. ಹೀಗೆಂದು ಮೈಮರೆ ಯುವದು ತರವಲ್ಲ ಎಂದು ಕಿವಿಮಾತು ನುಡಿದರು.ಇತ್ತೀಚೆಗೆ ಕನ್ನಡದ ಓದು-ಬರಹದ ಪ್ರವೃತ್ತಿ (ಮೊದಲ ಪುಟದಿಂದ) ಕಡಿಮೆಯಾಗುತ್ತಿದೆ ಎಂದು ವಿಷಾಧಿಸಿದ ಅವರು, ಕನ್ನಡ ಬೆಳೆದರೆ ನಾವು ಬೆಳೆಯುತ್ತೇವೆ. ಉಳಿದರೆ ನಾವು ಉಳಿಯುತ್ತೇವೆ. ಸರ್ಕಾರಗಳು ಇದರಲ್ಲಿ ರಾಜಕೀಯ ಬೆರೆಸದೇ, ಭಾಷೆ, ನೆಲ, ಜಲ ರಕ್ಷಣೆಗೆ ಸೂಕ್ತ ನೀತಿ ರೂಪಿಸಬೇಕು. ಶಿಕ್ಷಣದಲ್ಲಿ ಕನ್ನಡಕ್ಕೆ ಪ್ರಥಮ ಆದ್ಯತೆ ನೀಡಬೇಕು ಎಂದು ಆಗ್ರಹಿಸಿದರು.

ಕನ್ನಡ ಭಾಷೆ, ಸಂಸ್ಕøತಿಯ ಬೇರುಗಳು ಗ್ರಾಮೀಣ ಭಾಗದಲ್ಲಿ ಆಳವಾಗಿ ವ್ಯಾಪಿಸಿವೆ. ಅಳಿವಿನಂಚಿಗೆ ತಲುಪುವ ಸಾಧ್ಯತೆ ಇಲ್ಲ. ಆದರೂ ಮೈಮರೆಯಬಾರದು. ಕನ್ನಡಕ್ಕೆ ಭೌತಿಕ ಬರ ಬಂದರೂ ಸಹ ಬೌದ್ಧಿಕ, ಸೃಜನಾತ್ಮಕ ಬರ ಬರುವುದೇ ಇಲ್ಲ ಎಂದು ಆಶಾಭಾವನೆ ವ್ಯಕ್ತಪಡಿಸಿದರು. ಕೊಡಗು ಕಸಾಪ 50ನೇ ವರ್ಷದ ಸಂಭ್ರಮದಲ್ಲಿದ್ದು, ಇದರ ಅಂಗವಾಗಿ ಕೊಡಗಿನ ಸಾಹಿತ್ಯ ಪರಂಪರೆ ಬಿಂಬಿಸುವ ಸಾಹಿತ್ಯ ಕೋಶವನ್ನು ಹೊರತರಬೇಕು ಎಂದು ಸಲಹೆ ನೀಡಿದರು.

ಸಮ್ಮೇಳನದ ದಿವ್ಯ ಸಾನ್ನಿಧ್ಯ ವಹಿಸಿದ್ದ ಕಿರಿಕೊಡ್ಲಿ ಮಠಾಧೀಶರಾದ ಶ್ರೀ ಸದಾಶಿವ ಸ್ವಾಮೀಜಿ ಮಾತನಾಡಿ, ಕನ್ನಡದ ಮೇಲಿನ ಅಭಿಮಾನ ಎಂದಿಗೂ ಕಡಿಮೆಯಾಗಬಾರದು. ಮಕ್ಕಳು ಟಿ.ವಿ., ಮೊಬೈಲ್ ಹೊರತುಪಡಿಸಿ ಪುಸ್ತಕಗಳನ್ನು ಓದಬೇಕು. ಕನ್ನಡ ಸಾಹಿತ್ಯವನ್ನು ತಮ್ಮ ಜೀವನದಲ್ಲೂ ಅಳವಡಿಸಿಕೊಳ್ಳಬೇಕು ಎಂದು ಕಿವಿಮಾತು ನುಡಿದರು.

ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಅವರು, ಸುಮಧುರವಾದ ಕನ್ನಡ ಭಾಷೆ ಎಲ್ಲರ ಮನಸ್ಸಿನಲ್ಲಿರಬೇಕು. ಹೃದಯದಲ್ಲಿ ಕನ್ನಡಕ್ಕೆ ಸ್ಥಾನ ನೀಡಬೇಕು ಎಂದು ಕರೆಯಿತ್ತರು.

ಕಸಾಪ ಜಿಲ್ಲಾಧ್ಯಕ್ಷ ಲೋಕೇಶ್ ಸಾಗರ್ ಪ್ರಾಸ್ತಾವಿಕವಾಗಿ ಮಾತನಾಡಿ, ಹಳ್ಳಿಗಳಲ್ಲಿ ಸಮ್ಮೇಳನ ಮಾಡುವ ಮೂಲಕ ಸಂಸ್ಕøತಿಯನ್ನು ಎತ್ತಿಹಿಡಿಯುವ ಪ್ರಯತ್ನ ಕಸಾಪದಿಂದ ಆಗುತ್ತಿದೆ. ಕನ್ನಡ ಭಾಷೆ, ಸಂಸ್ಕøತಿ, ಶಾಲೆಗಳ ಉಳಿವು ಮುಖ್ಯ. ಇದು ಕಸಾಪಕ್ಕೂ ಸವಾಲಾಗಿದೆ. ಗ್ರಾಮೀಣ ಪ್ರದೇಶದ ಸಮಸ್ಯೆಗಳು ಬಗೆಹರಿಯಬೇಕು ಎಂಬ ನಿಟ್ಟಿನಲ್ಲಿ ಕಸಾಪದಿಂದ ಜನಪ್ರತಿನಿಧಿಗಳು ಹಾಗೂ ಇಲಾಖಾಧಿಕಾರಿಗಳನ್ನು ಆಹ್ವಾನಿಸಲಾಗುತ್ತಿದೆ ಎಂದರು.

ಪ್ರವಾಹದ ಹಿನ್ನೆಲೆ ಕಸಾಪ ಸಮ್ಮೇಳನಕ್ಕೆ ಸರ್ಕಾರದಿಂದ ಅನುದಾನ ಬರುತ್ತಿಲ್ಲ. ನೆರೆಯ ಅರಕಲಗೂಡಿನಲ್ಲಿ ಶಾಸಕರು ಮತ್ತು ಜನಪ್ರತಿನಿಧಿಗಳೇ ಸ್ವಂತ ಹಣದಿಂದ ಸಮ್ಮೇಳನ ಮಾಡುತ್ತಿದ್ದಾರೆ. ಅಂತಹ ಕಾರ್ಯ ಕೊಡಗಿನಲ್ಲಿ ಸಾಧ್ಯವೇ? ಎಂದು ಲೋಕೇಶ್ ಸಾಗರ್ ಪ್ರಶ್ನಿಸಿದರು.

ಕರ್ನಾಟಕ ಅರೆಭಾಷೆ ಸಂಸೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಲಕ್ಷ್ಮೀನಾರಾಯಣ ಕಜೆಗದ್ದೆ ಮಾತನಾಡಿ, ಹೆಚ್ಚು ಜ್ಞಾನಪೀಠ ಪ್ರಶಸ್ತಿಗಳು ಕನ್ನಡಕ್ಕೆ ಲಭಿಸಿವೆ. ಕೊಡಗು ಮಲೆನಾಡಿನ ಸೌಂದರ್ಯ ಹೊಂದಿರುವ ಭಾಗ, ಇಲ್ಲಿ ಹೆಚ್ಚು ಕನ್ನಡ ಸೇವೆ ನಡೆಯುತ್ತಿದೆ. ಆದರೆ ಯುವ ಸಮುದಾಯ ಇತ್ತೀಚೆಗೆ ಕನ್ನಡ ಸಾಹಿತ್ಯ ಕ್ಷೇತ್ರದಿಂದ ದೂರಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

13ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದ ಭಾರಧ್ವಾಜ್ ಕೆ. ಆನಂದತೀರ್ಥ ಅವರು, 14ನೇ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ನಾಗೇಶ್ ಕಾಲೂರು ಅವರಿಗೆ ಕನ್ನಡ ಧ್ವಜವನ್ನು ಹಸ್ತಾಂತರಿಸಿ ಮಾತನಾಡಿ, ಕಸಾಪದಿಂದ ಒಳ್ಳೆಯ ಕಾರ್ಯಕ್ರಮಗಳು ನಡೆಯುತ್ತಿವೆ ಎಂದು ಶ್ಲಾಘಿಸಿದರು.

ಕಸಾಪ ಮಾಜಿ ಅಧ್ಯಕ್ಷ ಟಿ.ಪಿ. ರಮೇಶ್ ಮಾತನಾಡಿ, ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಇಂದಿಗೆ 50 ವರ್ಷ ತುಂಬಿದೆ. ಕಸಾಪಕ್ಕೆ ಶ್ರಮಿಸಿದ ಎಲ್ಲರನ್ನೂ ಮುಂದಿನ ದಿನಗಳಲ್ಲಿ ಸ್ಮರಿಸುವಂತಾಗಬೇಕು. ಲೇಖಕರು ಮತ್ತು ಕಲಾವಿದರಿಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು ಎಂದರು.

ಜಿ.ಪಂ. ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್ ಮಾತನಾಡಿ, ಕನ್ನಡವನ್ನು ಪ್ರೀತಿಸಿದರಷ್ಟೇ ಸಾಲದು, ಪ್ರತಿ ಮಾತೂ ಕನ್ನಡವಾಗಿರಬೇಕು. ಮಕ್ಕಳಿಗೆ ಸಂಸ್ಕøತಿ ಸಂಸ್ಕಾರ ಕಲಿಸಬೇಕು. ಉತ್ತಮ ಪುಸ್ತಕಗಳನ್ನು ಓದಿ ಒಳ್ಳೆಯ ಸಂದೇಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಸಮ್ಮೇಳನದ ಅಧ್ಯಕ್ಷತೆಯನ್ನು ನಾಗೇಶ್ ಕಾಲೂರು ವಹಿಸಿದ್ದರು. ಜಿ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷೆ ಸರೋಜಮ್ಮ ಮಾತನಾಡಿದರು. ವೇದಿಕೆಯಲ್ಲಿ ನಿಡ್ತ ಗ್ರಾ.ಪಂ. ಅಧ್ಯಕ್ಷ ಮುಸ್ತಫಾ, ತಾ.ಪಂ. ಸದಸ್ಯರಾದ ಲೀಲಾವತಿ, ಅನಂತ್‍ಕುಮಾರ್, ಜಿ.ಪಂ. ಮಾಜಿ ಸದಸ್ಯ ಡಿ.ಬಿ. ಧರ್ಮಪ್ಪ, ನಿಡ್ತ ವಿಎಸ್‍ಎಸ್‍ಎನ್ ಮಾಜಿ ಅಧ್ಯಕ್ಷ ಹೆಚ್.ಪಿ. ಶೇಷಾದ್ರಿ, ಲಯನ್ಸ್ ಅಧ್ಯಕ್ಷ ನಾಗಪ್ಪ, ಸೋಮವಾರಪೇಟೆ ತಾಲೂಕು ಕಸಾಪ ಅಧ್ಯಕ್ಷ ಎಸ್.ಡಿ. ವಿಜೇತ್, ಮಡಿಕೇರಿ ತಾಲೂಕು ಅಧ್ಯಕ್ಷ ಕುಡೆಕಲ್ ಸಂತೋಷ್, ವೀರಾಜಪೇಟೆ ತಾಲೂಕು ಅಧ್ಯಕ್ಷ ಮಧೋಶ್ ಪೂವಯ್ಯ, ಕುಶಾಲನಗರ ಅಧ್ಯಕ್ಷ ರಂಗಸ್ವಾಮಿ, ಪೊನ್ನಂಪೇಟೆ ಅಧ್ಯಕ್ಷ ಚಂದ್ರಶೇಖರ್, ಠಾಣಾಧಿಕಾರಿ ಕೃಷ್ಣನಾಯಕ್ ಸೇರಿದಂತೆ ಇತರರು ವೇದಿಕೆಯಲ್ಲಿದ್ದರು.

ಉಪನ್ಯಾಸಕ ಜಯಕುಮಾರ್ ಕಾರ್ಯಕ್ರಮ ನಿರ್ವಹಿಸಿದರು. ವಿಘ್ನೇಶ್ವರ ಬಾಲಿಕಾ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ನಾಡಗೀತೆ, ಭಾರತಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ರೈತಗೀತೆಯನ್ನು ಪ್ರಸ್ತುತಪಡಿಸಿದರು.