ನಿಡ್ತ- ಸೋಮವಾರಪೇಟೆ, ಜ.31: ಕನ್ನಡ ಭಾಷೆ, ಸಾಹಿತ್ಯ, ಸಂಸ್ಕøತಿ, ಆಚಾರ ವಿಚಾರಗಳು ತಳಮಟ್ಟದಲ್ಲಿ ನೆಲೆಯಾಗಿರುವ ಸೋಮವಾರಪೇಟೆ ತಾಲೂಕಿನ ನಿಡ್ತ ಗ್ರಾಮದಲ್ಲಿ, ಕನ್ನಡ ಸಾಹಿತ್ಯ ಪರಿಷತ್‍ನಿಂದ ಎರಡು ದಿನಗಳ ಕಾಲ ಆಯೋಜನೆಗೊಂಡಿರುವ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ, ಕನ್ನಡ ಮನಗಳ ಸಮ್ಮಿಲನದೊಂದಿಗೆ ಹಬ್ಬದ ವೈಭವಕ್ಕೆ ಸಾಕ್ಷಿಯಾಯಿತು.ಹಲವಷ್ಟು ಐತಿಹಾಸಿಕ ಕುರುಹುಗಳನ್ನು ಹೊಂದಿರುವ, ಹಿಂದೆ ‘ನಿಡತ’ವೆಂದು ಕರೆಯಲ್ಪಡುತ್ತಿದ್ದ, ಬ್ರಾಹ್ಮಣರ ಅಗ್ರಹಾರವೂ ಆಗಿದ್ದ, ಹಲವಷ್ಟು ವೀರಗಲ್ಲುಗಳು ನೆಲೆಯಾಗಿರುವ ನಿಡ್ತ ಗ್ರಾಮದಲ್ಲಿ ಇಂದು ಕನ್ನಡದ ಜಾತ್ರೆ ವೈಭವಯುತವಾಗಿ ಮೇಳೈಸಿತು.
ವ್ಯಾಪಾರ ವಹಿವಾಟು, ವಾಹನಗಳ ಓಡಾಟ, ಜನಜಂಗುಳಿ, ಗಿಜಿಗಿಜಿಯ ಪಟ್ಟಣಕ್ಕೆ ತದ್ವಿರುದ್ಧವಾಗಿ, ಪ್ರಶಾಂತತೆಯ, ಸುತ್ತಮುತ್ತಲೂ ಹಸಿರ ಹೊದಿಕೆ, ಕೃಷಿಯೇ ಜೀವನಾಧಾರವಾಗಿರುವ, ಸುಂದರ, ಸ್ವಚ್ಛ ಪರಿಸರದಲ್ಲಿರುವ ನಿಡ್ತ ಗ್ರಾಮದಲ್ಲಿ ಆಯೋಜಿಸಲಾಗಿದ್ದ ಸಾಹಿತ್ಯ ಸಮ್ಮೇಳನದ ಅಂಗವಾಗಿ ನಡೆದ ಸಮ್ಮೇಳನಾಧ್ಯಕ್ಷರ ಮೆರವಣಿಗೆ ಅತ್ಯಂತ ಆಕರ್ಷಣೀಯವಾಗಿತ್ತು.ಮೆರವಣಿಗೆಯಲ್ಲಿ ಭಾಗಿಯಾಗಿದ್ದ ಕನ್ನಡ ಮನಸ್ಸುಗಳು, ಶಾಲಾ ಕಾಲೇಜು ವಿದ್ಯಾರ್ಥಿಗಳು ಕನ್ನಡಾಂಬೆಗೆ ಜೈಕಾರ ಕೂಗುತ್ತಾ ಕನ್ನಡಪ್ರೇಮ ಮೆರೆದರು. ಸಮ್ಮೇಳನದ ಅಂಗವಾಗಿ ನಿಡ್ತ ಗ್ರಾಮವನ್ನು ಕನ್ನಡ ಬಾವುಟ, ತಳಿರು ತೋರಣಗಳಿಂದ ಸಿಂಗರಿಸಲಾಗಿತ್ತು. ನವವಧುವಿನಂತೆ ಸಿಂಗರಿಸಲ್ಪಟ್ಟಿದ್ದ ರಸ್ತೆಗಳಲ್ಲಿ, ಕನ್ನಡ ಸಾರಸ್ವತ ಲೋಕದ ಮೆರವಣಿಗೆ ನಡೆಯಿತು. ಇದರೊಂದಿಗೆ ಅಲಂಕೃತ ವಾಹನದಲ್ಲಿ ಕನ್ನಡಾಂಬೆ, ಹಳ್ಳಿ ಮಹಿಳೆ, ಸ್ವಾಮೀಜಿಗಳ ಸ್ತಬ್ಧಚಿತ್ರಗಳ ಮೆರವಣಿಗೆ, ಮುಳ್ಳೂರು ಶಾಲಾ ಶಿಕ್ಷಕ ಸತೀಶ್ ಅವರು ನಿರ್ಮಿಸಿದ್ದ, ಜ್ಞಾನಪೀಠ ಪ್ರಶಸ್ತಿ ಪುರಸ್ಕøತರ ಭಾವಚಿತ್ರ, ಅವರುಗಳ ಕಿರು ಪರಿಚಯವನ್ನು ಸಾರುವ ಮಾದರಿ ಪ್ರದರ್ಶನ ಎಲ್ಲರ ಗಮನ ಸೆಳೆಯಿತು.
ಇದರೊಂದಿಗೆ ತೆರೆದ ವಾಹನದಲ್ಲಿ ಸಮ್ಮೇಳನದ ಅಧ್ಯಕ್ಷರಾದ ನಾಗೇಶ್ ಕಾಲೂರು ದಂಪತಿ, ಜಿಲ್ಲಾ ಕಸಾಪ ಅಧ್ಯಕ್ಷ ಲೋಕೇಶ್ ಸಾಗರ್, ತಾಲೂಕು ಕಸಾಪ ಅಧ್ಯಕ್ಷ ಎಸ್.ಡಿ. ವಿಜೇತ್ ಅವರುಗಳನ್ನು ಮೆರವಣಿಗೆ ಮೂಲಕ ಸಮ್ಮೇಳನ ನಡೆಯುವ ಸರ್ಕಾರಿ ಶಾಲಾ ಮೈದಾನಕ್ಕೆ ಕರೆತರಲಾಯಿತು.
ಮುಳ್ಳೂರು ವೃತ್ತದಿಂದ ಹೊರಟ ಕನ್ನಡ ಸಾಹಿತ್ಯ (ಮೊದಲ ಪುಟದಿಂದ) ಸಮ್ಮೇಳನದ ಮೆರವಣಿಗೆಗೆ ಗ್ರಾಮಸ್ಥರು ಅಭೂತಪೂರ್ವ ಸ್ವಾಗತ ಕೋರಿದರು. ಪ್ರತಿಯೊಂದು ಮನೆಯ ಮುಂಭಾಗದಲ್ಲಿ ಬಣ್ಣದ ರಂಗೋಲಿ ರಚಿಸಿ, ಕನ್ನಡಾಂಬೆಯ ಮೇಲಿನ ಅಭಿಮಾನ ತೋರ್ಪಡಿಸಿದರು. ರಸ್ತೆಯುದ್ದಕ್ಕೂ ತಳಿರುತೋರಣ, ಬಣ್ಣಗಳಿಂದ ಸಿಂಗರಿಸಲಾಗಿತ್ತು.
ಮೆರವಣಿಗೆಯಲ್ಲಿ ಮಂಗಳವಾದ್ಯ, ಪೂರ್ಣಕುಂಭಗಳು, ಕಲಾ ತಂಡಗಳು, ಸ್ತ್ರೀ ಶಕ್ತಿ ಸಂಘದ ಪದಾಧಿಕಾರಿಗಳು, ಧರ್ಮಸ್ಥಳ ಸಂಘದ ಸದಸ್ಯರು, ಕನ್ನಡಪರ ಸಂಘಟನೆಗಳ ಕಾರ್ಯಕರ್ತರು, ಶಾಲಾ ಕಾಲೇಜಿನ ಸಾವಿರಾರು ವಿದ್ಯಾರ್ಥಿಗಳು, ಭಾರತ್ ಸ್ಕೌಟ್ ಮತ್ತು ಗೈಡ್ಸ್ ಸಂಸ್ಥೆಯ ವಿದ್ಯಾರ್ಥಿಗಳು, ಗ್ರಾಮದ ಮಹಿಳೆಯರು ಸಂಭ್ರಮದಿಂದ ಭಾಗವಹಿಸಿದ್ದರು.
ಶನಿವಾರಸಂತೆ ಮತ್ತು ಕೊಡ್ಲಿಪೇಟೆ ಹೋಬಳಿ ವ್ಯಾಪ್ತಿಯ ಎಲ್ಲಾ ಅನುದಾನಿತ ಅನುದಾನ ರಹಿತ ಶಾಲೆಗಳ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಸಮ್ಮೇಳನದಲ್ಲಿ ಭಾಗವಹಿಸುವಂತೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಆದೇಶ ಹೊರಡಿಸಿದ್ದರಿಂದ ಈ ಭಾಗದ ಶಾಲೆಗಳ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ, ಕನ್ನಡಮ್ಮನ ಜಾತ್ರೆಯಲ್ಲಿ ಉತ್ಸಾಹದಿಂದ ಭಾಗಿಯಾಗಿದ್ದರು.
ಮೆರವಣಿಗೆಯಲ್ಲಿ ಭಾಗವಹಿಸಿದ್ದ ಎಲ್ಲರಿಗೂ ಗ್ರಾಮಸ್ಥರು ತಮ್ಮ ಮನೆಯ ಮುಂಭಾಗ ಮಜ್ಜಿಗೆ ಪಾನಕ ವಿತರಿಸಿ, ಕನ್ನಡಾಭಿಮಾನಿಗಳ ದಾಹ ನೀಗಿಸಿದರು.
ಕನ್ನಡ ಸಾರಸ್ವತ ಲೋಕಕ್ಕೆ ಕೊಡುಗೆ ನೀಡಿದ ಮಹನೀಯರ ಭಾವಚಿತ್ರ, ಅವರ ಸಾಧನೆಗಳನ್ನು ಪರಿಚಯಿಸುವ ಫಲಕಗಳನ್ನು ಸಭಾಂಗಣದ ಒಂದು ಭಾಗದಲ್ಲಿ ಅಳವಡಿಸುವ ಮೂಲಕ, ಸಾಹಿತ್ಯ ದಿಗ್ಗಜರ ಸಾಹಿತ್ಯ ಸೇವೆಯನ್ನು ಪರಿಚಯಿಸುವ ಕಾರ್ಯ ನಡೆಯಿತು.
ಇದಕ್ಕೂ ಮುನ್ನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಸಭಾಂಗಣದಲ್ಲಿ ತಹಶೀಲ್ದಾರ್ ಗೋವಿಂದರಾಜು ಅವರು ರಾಷ್ಟ್ರಧ್ವಜಾರೋಹಣ ಮಾಡಿದರು. ಕಸಾಪ ಜಿಲ್ಲಾಧ್ಯಕ್ಷ ಲೋಕೇಶ್ ಸಾಗರ್ ಅವರು ಪರಿಷತ್ತಿನ ಧ್ವಜ ಹಾಗೂ ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಸುನಿಲ್ ಅವರು ನಾಡಧ್ವಜವನ್ನು ಸಮ್ಮೇಳನದ ಅಂಗವಾಗಿ ಶನಿವಾರಸಂತೆ ಹಾಗೂ ಕೊಡ್ಲಿಪೇಟೆ ಹೋಬಳಿ ವ್ಯಾಪ್ತಿಯಲ್ಲಿ ಸಾಮಾಜಿಕ ಸೇವೆ ಸಲ್ಲಿಸಿದ ಮಹನೀಯರ ಹೆಸರಿನಲ್ಲಿ ವಿವಿಧ ದ್ವಾರಗಳನ್ನು ನಿಡ್ತ, ಜಾಗೇನಹಳ್ಳಿ, ಮುಳ್ಳೂರು, ಒಡೆಯನಪುರ ಸೇರಿದಂತೆ ಇತರ ಜಂಕ್ಷನ್‍ಗಳಲ್ಲಿ ನಿರ್ಮಿಸಲಾಗಿತ್ತು.
ಸ್ವಾತಂತ್ರ್ಯ ಹೋರಾಟಗಾರ ಎನ್. ಕೃಷ್ಣಮೂರ್ತಿ ದ್ವಾರವನ್ನು ನಿಡ್ತ ಗ್ರಾ.ಪಂ. ಸದಸ್ಯೆ ಎಲ್.ಹೆಚ್. ನಳಿನಿ, ಹುತಾತ್ಮ ಯೋಧ ಅಶೋಕ್ ದ್ವಾರವನ್ನು ಸದಸ್ಯೆ ಸಾವಿತ್ರಮ್ಮ, ಸಮಾಜ ಸೇವಕ ಎನ್.ಬಿ. ಗುಂಡಪ್ಪ ದ್ವಾರವನ್ನು ಸದಸ್ಯೆ ಹೂವಮ್ಮ, ವಿ.ಎನ್. ಪುಟ್ಟಪ್ಪ ದ್ವಾರವನ್ನು ಸದಸ್ಯ ವಿಜಯ್‍ಕುಮಾರ್, ಮಂಜಯ್ಯ ಮತ್ತು ಕೃಷ್ಣಯ್ಯ ದ್ವಾರವನ್ನು ಗಂಗಾಧರ್, ಮಂಜುನಾಥ್ ಮೂರ್ತಿ ಮುಖ್ಯದ್ವಾರವನ್ನು ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಅವರುಗಳು ಉದ್ಘಾಟಿಸಿದರು.
ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಕೊಡುಗೆ ನೀಡಿದ ಬೆಸೂರು ನಂಜಣ್ಣ ಅವರ ಹೆಸರಿನಲ್ಲಿ ಸಭಾಂಗಣ, ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ ಅವರ ಹೆಸರಿನಲ್ಲಿ ವೇದಿಕೆ, ಮಂಜಯ್ಯ ಮತ್ತು ಕೃಷ್ಣಯ್ಯ ಅವರುಗಳ ಹೆಸರಿನಲ್ಲಿ ಮಹಾದ್ವಾರವನ್ನು ನಿರ್ಮಿಸಿ, ಹಿರಿಯ ಚೇತನಗಳನ್ನು ಸ್ಮರಿಸಲಾಯಿತು.
ಕಾರ್ಯಕ್ರಮ ನಡೆಯುವ ಸಭಾಂಗಣದ ಪಕ್ಕದಲ್ಲಿ ದಿ. ಎನ್.ಸಿ. ಪುಟ್ಟಸ್ವಾಮಿ ಅವರ ಸ್ಮರಣಾರ್ಥ ಪುಸ್ತಕ ಮಳಿಗೆ, ವಿವಿಧ ವಸ್ತುಗಳ ಪ್ರದರ್ಶನ ಮಳಿಗೆ ತೆರೆಯಲಾಗಿತ್ತು. ಕೊಡಗಿನ ಪ್ರಥಮ ಪತ್ರಿಕೆ ಕೊಡಗು ಚಂದ್ರಿಕೆಯ ಹೆಸರಲ್ಲಿ ಸುದ್ದಿಮನೆ ತೆರೆಯಲಾಗಿತ್ತು.
ಸಭಾ ಕಾರ್ಯಕ್ರಮಕ್ಕೂ ಮುನ್ನ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಾರಂಭದಲ್ಲಿ ತಮ್ಮನ್ನು ತೊಡಗಿಸಿಕೊಂಡು ನಂತರದ ದಿನಗಳಲ್ಲಿ ನಿಧನರಾದ ಪತ್ರಕರ್ತ ಒಡೆಯನಪುರ ಸುರೇಶ್, ದ್ವಾರಗಳ ಸಮಿತಿ ಅಧ್ಯಕ್ಷರಾಗಿದ್ದ ನಿಡ್ತ ಕರುಣೇಶ್ ಅವರುಗಳ ಆತ್ಮಕ್ಕೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಒಟ್ಟಾರೆ ಪ್ರಸಕ್ತ ಸಾಲಿನ ಕನ್ನಡ ಸಾಹಿತ್ಯ ಪರಿಷತ್ ಅಸ್ತಿತ್ವಕ್ಕೆ ಬಂದ ಈ 4 ವರ್ಷಗಳಲ್ಲಿ ಈವರೆಗೆ 16 ಸಮ್ಮೇಳನಗಳನ್ನು ನಡೆಸಿದ್ದು, ನಿಡ್ತದಲ್ಲಿ ನಡೆದ 17ನೇ ಸಮ್ಮೇಳನವೂ ಹಲವು ವೈವಿಧ್ಯತೆಗಳೊಂದಿಗೆ ಗಮನ ಸೆಳೆಯಿತು.
ಜಿಲ್ಲೆ, ತಾಲೂಕು ಸಮ್ಮೇಳನಗಳ ಜತೆಗೆ ಮಕ್ಕಳ ಸಮ್ಮೇಳನ, ಮಹಿಳಾ ಸಮ್ಮೇಳನ, ಯುವ ಸಮ್ಮೇಳನವನ್ನೂ ನಡೆಸುವ ಮೂಲಕ ಎಲ್ಲಾ ವರ್ಗದಲ್ಲೂ ಸಾಹಿತ್ಯದ ಬಗ್ಗೆ ಜಾಗೃತಿ, ಒಲವು ಮೂಡಿಸುವ ಕಾರ್ಯ ಜಿಲ್ಲಾ ಕಸಾಪ ಅಧ್ಯಕ್ಷ ಲೋಕೇಶ್ ಸಾಗರ್ ಮತ್ತು ಪದಾಧಿಕಾರಿಗಳಿಂದ ನಡೆಯುತ್ತಿದ್ದು, ಇದಕ್ಕೆ ಕನ್ನಡಾಭಿಮಾನಿಗಳಿಂದ ಶ್ಲಾಘನೆಯೂ ವ್ಯಕ್ತವಾಯಿತು.
-ವಿಜಯ್ ಹಾನಗಲ್