ಗೋಣಿಕೊಪ್ಪ ವರದಿ, ಜ. 31: ಇಲ್ಲಿನ ಸರ್ಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಸೂಪರ್ ಲಯನ್ಸ್ ಕ್ರಿಕೆಟರ್ಸ್ ವತಿಯಿಂದ ಆಯೋಜಿಸಿದ್ದ ಗೋಣಿಕೊಪ್ಪ ಕ್ರಿಕೆಟ್ ಕಾರ್ನಿವಲ್ ಟೂರ್ನಿಯಲ್ಲಿ ಈಗಲ್ಸ್ ತಂಡವು ಚಾಂಪಿಯನ್ ತಂಡವಾಗಿ ಹೊರ ಹೊಮ್ಮಿತ್ತು. ಫೈನಲ್‍ನಲ್ಲಿ ರೋಚಕ ಸೋಲನುಭವಿಸಿದ ಪ್ರತಿಭಾ ಕ್ರಿಕೆಟರ್ಸ್ ತಂಡವು ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತು.

ಭಾನುವಾರ ನಡೆದ ಫೈನಲ್ ಹಣಾಹಣಿಯ ಫೈನಲ್‍ನಲ್ಲಿ ಈಗಲ್ಸ್ ತಂಡವು ಬೌಲಿಂಗ್, ಬ್ಯಾಟಿಂಗ್ ಮೂಲಕ ಮನಮೋಹಕ ಆಟ ಪ್ರದರ್ಶಿಸಿತು. ಮೊದಲು ಬ್ಯಾಟ್ ಮಾಡಿದ ಪ್ರತಿಭಾ ತಂಡವನ್ನು ತನ್ನ ಬಿಗಿ ಬೌಲಿಂಗ್ ದಾಳಿ ಮೂಲಕ ನಿಗದಿತ 5 ಓವರ್‍ಗಳಿಗೆ 30 ರನ್‍ಗಳಿಗೆ ಕಟ್ಟಿಹಾಕಿತು. 31 ರನ್ ಗುರಿ ಬೆನ್ನೆತ್ತಿದ ಈಗಲ್ಸ್ ತಂಡವು ಕೊನೆಯ ಓವರ್‍ನಲ್ಲಿ ರೋಚಕ ಗೆಲವು ದಾಖಲಿಸಿತು. ಪ್ರತಿಭಾ ತಂಡದ ಪ್ರತಿರೋಧ ನಡುವೆ ಗೆಲ್ಲಲು ಕೊನೆಯ ಓವರ್‍ನಲ್ಲಿ 5 ರನ್ ಬೇಕಿದ್ದ ಸಂದರ್ಭ ವಿಕೆಟ್ ಕಳೆದುಕೊಂಡು ಸೋಲು ಕೈಚೆಲ್ಲುವತ್ತ ಸಾಗಿತ್ತು. 4 ಚೆಂಡು ಉಳಿದಿರುವಾಗಲೇ ರಜಾಕ್ ಸಿಕ್ಸರ್ ಬಾರಿಸಿ ಗೆಲವು ತಂದುಕೊಟ್ಟರು.

ಸೆಮಿ ಫೈನಲ್‍ನಲ್ಲಿ ಸೋಲನುಭವಿಸಿದ ಎ.ಒನ್. ಕ್ರಿಕೆಟರ್ಸ್ ತಂಡವು ಮೂರನೇ ಬಹುಮಾನ ಪಡೆದುಕೊಂಡಿತು.

ಬ್ಯಾಟಿಂಗ್, ಬೌಲಿಂಗ್‍ನಲ್ಲಿ ಉತ್ತಮ ನಿರ್ವಹಣೆ ಮಾಡಿದ ಪ್ರತಿಭಾ ತಂಡದ ಆಟಗಾರ ಫಯಾಜ್ ಸರಣಿ ಶ್ರೇಷ್ಠ ಬಹುಮಾನ ಪಡೆದುಕೊಂಡರು. ಈಗಲ್ ತಂಡದ ದರ್ಶನ್ ಪಂದ್ಯ ಪುರುಷ ಪ್ರಶಸ್ತಿ, ಅಪ್ ಕಮಿಂಗ್ ಬಹುಮಾನವನ್ನು ಈಗಲ್ ತಂಡದ ದರ್ಶನ್ ಪಡೆದರು.

ಬೆಸ್ಟ್ ಸ್ಕೋರರ್ ಪ್ರಶಸ್ತಿಯನ್ನು ಮಿಸ್ಟ್ರಿ ತಂಡದ ಸೋನು, ಹೆಚ್ಚು ವಿಕೆಟ್ ಸಾಧನೆಯನ್ನು ಈಗಲ್ಸ್ ತಂಡ ರಶಿ, ಹೆಚ್ಚು ಸಿಕ್ಸರ್ ಬಾರಿಸಿದವರಾಗಿ ಫ್ರೀಡಂ ತಂಡದ ರಶು, ಕೂಲ್ ಕ್ಯಾಪ್ಟನ್ ಬಹುಮಾನವನ್ನು ಲಯನ್ ಕ್ರಿಕೆಟರ್ಸ್ ತಂಡದ ಹರೀಶ್, ಬೆಸ್ಟ್ ಕ್ಯಾಚ್ ಬಹುಮಾನವನ್ನು ವಿರಾಟ್ ತಂಡದ ರಾಜು, ಬೆಸ್ಟ್ ಬೌಲರ್ ಬಹುಮಾನವನ್ನು ಎಒನ್ ತಂಡದ ರಂಜಿತ್, ಆಲ್ ರೌಂಡರ್ ಬಹುಮಾನವನ್ನು ಎಒನ್ ತಂಡದ ಗಗನ್, ಬೆಸ್ಟ್ ಬ್ಯಾಟ್ಸ್‍ಮನ್ ಬಹುಮಾನವನ್ನು ಗ್ಲೋಬಲ್ ತಂಡದ ಸಂತೋಷ್ ಪಿಟ್ಟೆ, ಬೆಸ್ಟ್ ಫಿನಿಶರ್ ಬಹುಮಾನವನ್ನು ಈಗಲ್ ತಂಡದ ರಜಾಕ್ ಪಡೆದರು.

ದಾನಿ ಉಂಬಾಯಿ, ವೇಣುಗೋಪಾಲ್, ರಮೇಶ್, ಇರ್ಫಾನ್, ಸಲಹೆಗಾರ ಸಿಂಗಿ ಸತೀಶ್, ಸೂಪರ್ ಲಯನ್ಸ್ ಕ್ರಿಕೆಟರ್ಸ್ ಅಧ್ಯಕ್ಷ ಜೆಮ್ಷಿರ್, ಗೋಣಿಕೊಪ್ಪ ಪ್ರೆಸ್‍ಕ್ಲಬ್ ಅಧ್ಯಕ್ಷ ಸಣ್ಣುವಂಡ ಕಿಶೋರ್ ನಾಚಪ್ಪ, ಗ್ರಾ. ಪಂ ಸದಸ್ಯ ಸುರೇಶ್ ರೈ ಬಹುಮಾನ ವಿತರಿಸಿದರು. ಕ್ರೀಡೆ, ಶೈಕ್ಷಣಿಕವಾಗಿ ಸಾಧನೆ ಮಾಡಿದ ಸ್ಥಳೀಯ 6 ವಿದ್ಯಾರ್ಥಿಗಳನ್ನು ಈ ಸಂದರ್ಭ ಸನ್ಮಾನಿಸಲಾಯಿತು.