ಗೋಣಿಕೊಪ್ಪಲು, ಜ.31: ಗಾಂಜಾ ಮಾರಾಟ ವನ್ನೇ ಕಾಯಕ ವನ್ನಾಗಿಸಿಕೊಂಡು ಅನೇಕ ಯುವಕರ ಬದುಕಿನಲ್ಲಿ ಚೆಲ್ಲಾಟವಾಡುತ್ತಾ ಜೀವನ ಸಾಗಿಸುತ್ತಿದ್ದಾತನನ್ನು ಬಂಧಿಸಿರುವ ಗೋಣಿಕೊಪ್ಪ ಪೊಲೀಸರು ಆತ ಬಳಸುತ್ತಿದ್ದ ವಾಹನದೊಂದಿಗೆ ಸುಮಾರು ಅರ್ಧ ಕೆ.ಜಿ.ಗಾಂಜಾವನ್ನು ವಶಪಡಿಸಿ ಕೊಂಡು ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.ತಿತಿಮತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೇವಮಚ್ಚಿಯಲ್ಲಿ ವಾಸವಿರುವ ಚನ್ನಯ್ಯ ಅವರ ಪುತ್ರ ಸತೀಶ್ ಬಂಧಿತ ಆರೋಪಿ. ಈತ ಹಲವಾರು ಸಮಯದಿಂದ ಗಾಂಜಾ ಮಾರಾಟ ಮಾಡುತ್ತಾ; ಐಷಾರಾಮಿ ಜೀವನ ಸಾಗಿಸುತ್ತಿದ್ದ ಎನ್ನಲಾಗಿದೆ. ಹೊರ ಜಿಲ್ಲೆಯಿಂದ ಗಾಂಜಾವನ್ನು ತಂದು ಇದನ್ನು ಸಣ್ಣ ಸಣ್ಣ ಪ್ರಮಾಣದಲ್ಲಿ ಬೇರ್ಪಡಿಸಿ ಅವು ಗಳನ್ನು ತನ್ನ ಕಾರಿನಲ್ಲಿ ಇಟ್ಟುಕೊಂಡು ಗಾಂಜಾ ವ್ಯಸನಿಗಳಿಗೆ ಮಾರಾಟ ಮಾಡುತ್ತಿದ್ದ ಬಗ್ಗೆ ಪೊಲೀಸರ ಮುಂದೆ ಸತ್ಯ ಬಾಯಿ ಬಿಟ್ಟಿದ್ದಾನೆ.
ಆರೋಪಿಯ ವ್ಯವಹಾರದ ಬಗ್ಗೆ ಪೊಲೀಸರು ನಿಗಾ ವಹಿಸಿದ್ದರು. ಖಚಿತ ಮಾಹಿತಿಯ ಮೇರೆ ಶುಕ್ರವಾರ ಈತನ ವಾಸದ ಮನೆಯ ಮೇಲೆ ಪೊಲೀಸರು ದಿಢೀರ್ ದಾಳಿ ನಡೆಸಿದ ಸಂದರ್ಭ ಮಾಲು ಸಹಿತ ಆರೋಪಿ ಸತೀಶ್ ಸೆರೆ ಸಿಕ್ಕಿದ್ದಾನೆ.
ಗಾಂಜಾ ಮಾರಾಟ ಆರೋಪಿ ಬಂಧನ
(ಮೊದಲ ಪುಟದಿಂದ) ಸಾರ್ವಜನಿಕವಾಗಿ ಈತನ ಮೇಲೆ ಗಂಭೀರವಾದ ಆರೋಪಗಳು ಕೇಳಿ ಬಂದ ಹಿನ್ನೆಲೆಯಲ್ಲಿ ವೀರಾಜಪೇಟೆ ಡಿವೈಎಸ್ ಪಿ ಜಯಕುಮಾರ್ ಗೋಣಿಕೊಪ್ಪ ವೃತ್ತ ನೀರಿಕ್ಷಕ ರಾಮರೆಡ್ಡಿ ಈತನ ಚಲನ ವಲನದ ಮೇಲೆ ಹೆಚ್ಚಿನ ನಿಗಾ ವಹಿಸಲು ಕಿರಿಯ ಅಧಿಕಾರಿಗೆ ಸೂಚನೆ ನೀಡಿದ್ದರು. ಇದರಂತೆ ಗೋಣಿಕೊಪ್ಪ ಪೊಲೀಸ್ ಠಾಣೆಯ ಸಬ್ ಇನ್ಸ್‍ಪೆಕ್ಟರ್ ಸುರೇಶ್ ಬೋಪಣ್ಣ, ತಿತಿಮತಿ ಉಪಠಾಣೆಯ ಸಿಬ್ಬಂದಿ ಹಾಗೂ ಗೋಣಿಕೊಪ್ಪ ಪೊಲೀಸ್ ಠಾಣೆಯ ಸಿಬ್ಬಂದಿಗಳು ಕಾರ್ಯಚರಣೆ ನಡೆಸಿ ಆರೋಪಿ ಸತೀಶ್‍ನನ್ನು ಕಾರು ಸಹಿತ ಬಂಧಿಸಿದರು. -ಜಗದೀಶ್, ದಿನೇಶ್