ಮಡಿಕೇರಿ, ಜ. 31: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಕರ್ನಾಟಕ ಚಲನಚಿತ್ರ ಅಕಾಡೆಮಿ ವತಿಯಿಂದ ಸರ್ವೋದಯ ಸಮಿತಿ ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಸಹಯೋಗದಲ್ಲಿ ಕಾಲೇಜಿನ ಸಭಾಂಗಣದಲ್ಲಿ ಗಣರಾಜ್ಯೋತ್ಸವ ಪ್ರಯುಕ್ತ ಸ್ವಾತಂತ್ರ್ಯ ಹೋರಾಟ ಹಾಗೂ ಭಾರತ ಸಂವಿಧಾನದ ನಿರ್ಮಾತೃಗಳಾದ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಮತ್ತು ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಕುರಿತ ರಿಚರ್ಡ್ ಅಟೆನ್‍ಬರೊ ನಿರ್ದೇಶನದ ಗಾಂಧಿ ಹಾಗೂ ಡಾ. ಜಬ್ಬಾರ್ ಪಟೇಲ್ ನಿರ್ದೇಶನದ ಡಾ. ಬಿ.ಆರ್. ಅಂಬೇಡ್ಕರ್ ಚಲನಚಿತ್ರ ಪ್ರದರ್ಶನಕ್ಕೆ ಸರ್ವೋದಯ ಸಮಿತಿ ಮಾಜಿ ಅಧ್ಯಕ್ಷ ಟಿ.ಪಿ. ರಮೇಶ್ ಚಾಲನೆ ನೀಡಿ ಅವರು ಮಾತನಾಡಿದರು.

ಗಾಂಧೀಜಿ ಹಾಗೂ ಅಂಬೇಡ್ಕರ್ ಅವರ ಜೀವನ ಮೌಲ್ಯ, ಸತ್ಯ, ಅಹಿಂಸೆ ಹಾಗೂ ಆತ್ಮಬಲದ ಕುರಿತು ಸಮಗ್ರವಾಗಿ ತಿಳಿದುಕೊಳ್ಳಲು ಚಲನಚಿತ್ರ ಸಹಕಾರಿಯಾಗಿದೆ ಎಂದು ಹೇಳಿದರು.

ಸರ್ವೋದಯ ಸಮಿತಿ ಅಧ್ಯಕ್ಷ ಅಂಬೆಕಲ್ಲು ಕುಶಾಲಪ್ಪ ಮಾತನಾಡಿ, ಜಾತ್ಯತೀತ ಸಮಾಜವಾದಿ, ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಎಲ್ಲರಿಗೂ ಮೂಲಭೂತ ಸ್ವಾತಂತ್ರ್ಯ ಒಳಗೊಂಡು ಭಾರತ ಸಂವಿಧಾನ ರಚನೆಗೊಂಡಿದೆ ಎಂದು ಹೇಳಿದರು.

ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲೆ ಚಿತ್ರಾ ವೈ, ಪ್ರಾಧ್ಯಾಪಕ ಕೆ.ಸಿ. ದಯಾನಂದ ಅವರು ಮಾತನಾಡಿ, ಡಾ. ಬಿ.ಆರ್. ಅಂಬೇಡ್ಕರ್ ಹಾಗೂ ಮಹಾತ್ಮ ಗಾಂಧೀಜಿಯವರ ಜೀವನ ಚರಿತ್ರೆಯನ್ನು ಪ್ರತಿಯೊಬ್ಬರು ತಿಳಿದು ಕೊಳ್ಳುವಂತಾಗಬೇಕು ಎಂದರು. ವಾರ್ತಾಧಿಕಾರಿ ಚಿನ್ನಸ್ವಾಮಿ ಸ್ವಾಗತಿಸಿ ಮಾತನಾಡಿ, ಸಮಾಜದಲ್ಲಿ ಸಿನಿಮಾ ಪರಿಣಾಮಕಾರಿ ಮಾಧ್ಯಮವಾಗಿದ್ದು, ಸಮಾಜದ ಆಗು ಹೋಗುಗಳ ಬಗ್ಗೆ ಬೆಳಕು ಚೆಲ್ಲುವಲ್ಲಿ ಹೆಚ್ಚಿನ ಪಾತ್ರ ವಹಿಸುತ್ತದೆ ಎಂದು ತಿಳಿಸಿದರು. ಸರ್ವೋದಯ ಸಮಿತಿ ಸದಸ್ಯರಾದ ಸುರಯ್ಯ ಅಬ್ರಾರ್, ಯಶೋಧ, ಪ್ರೇಮ ಕೃಷ್ಣಪ್ಪ, ಮಿನಾಜ್ ಪ್ರವೀಣ್, ಅಂಬೆಕಲ್ಲು ನವೀನ್ ಇತರರು ಇದ್ದರು. ವಿದ್ಯಾರ್ಥಿ ಶಿವ ಪ್ರಾರ್ಥಿಸಿದರು.