ಸೋಮವಾರಪೇಟೆ, ಜ. 31: ಎಲ್ಲೆಡೆ ರಾಷ್ಟ್ರೀಯ ಹಬ್ಬಗಳ ಆಚರಣೆ ಕಡ್ಡಾಯವಾಗಿ ನಡೆಸಬೇಕು ಎಂದು ತಾಲೂಕು ಪಂಚಾಯಿತಿ ಉಪಾಧ್ಯಕ್ಷ ಎಂ.ಬಿ. ಅಭಿಮನ್ಯುಕುಮಾರ್ ಹೇಳಿದರು.

ತಾಲೂಕು ಸ್ತ್ರೀ ಶಕ್ತಿ ಭವನದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ಹಾಗೂ ಕೊಡಗು ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ನಡೆದ ತಾಲೂಕು ಮಟ್ಟದ ಪ್ರಬಂಧ ಸ್ಪರ್ಧೆ ಹಾಗೂ ದೇಶ ಭಕ್ತಿ ಗೀತೆಗಳ ಸ್ಪರ್ಧಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ರಾಷ್ಟ್ರೀಯ ಹಬ್ಬಗಳಂದು ಹೆಚ್ಚಿನ ಸರ್ಕಾರಿ ನೌಕರರು ಮನೆಯಲ್ಲಿಯೇ ಕಾಲ ಕಳೆಯುತ್ತಾರೆ. ಇದು ಲಕ್ಷಾಂತರ ಮಂದಿ ತಮ್ಮ ಜೀವವನ್ನು ಬಲಿಕೊಟ್ಟು ನಮಗೆ ಸ್ವಾತಂತ್ರ್ಯ ತಂದುಕೊಟ್ಟವರಿಗೆ ಅಪಮಾನ ಮಾಡಿದಂತೆ. ಪ್ರಪಂಚದಲ್ಲಿ ದೊಡ್ಡ, ಬಲಿಷ್ಠ ಹಾಗೂ ವೈವಿಧ್ಯತೆಯ ಸಂವಿಧಾನವನ್ನು ನೀಡಿದ ಕೀರ್ತಿ ಬಾಬಾ ಸಾಹೇಬ್ ಅಂಬೇಡ್ಕರ್‍ರವರಿಗೆ ಸಲ್ಲುತ್ತದೆ. ದೇಶದ ದಾರಿದೀಪ ನಮ್ಮ ಸಂವಿಧಾನವಾಗಿದ್ದು, ಅದಕ್ಕೆ ಎಲ್ಲರೂ ಗೌರವ ನೀಡಬೇಕೆಂದರು.

ಸಂವಿಧಾನ ನಮಗೆ ನೀಡಿರುವ ಹಕ್ಕುಗಳನ್ನು ತಿಳಿದುಕೊಳ್ಳಬೇಕು, ಜತೆಯಲ್ಲಿ ಕರ್ತವ್ಯಗಳನ್ನೂ ನಿರ್ವಹಿಸಬೇಕು. ಪ್ರತಿಯೊಬ್ಬರಲ್ಲೂ ದೇಶಕ್ಕಾಗಿ ನಾನು ಎಂಬ ಭಾವನೆ ಮೂಡಬೇಕಿದೆ.

ವಿದ್ಯಾರ್ಥಿಗಳು ತಮ್ಮಲ್ಲಿ ಸಂವಿಧಾನದ ಅರಿವು ಮೂಡಿಸಿಕೊಂಡು ಸ್ವೇಚ್ಛಾಚಾರಕ್ಕೆ ಬಲಿಯಾಗದೆ, ಸ್ವಾತಂತ್ರ್ಯವನ್ನು ಅನುಭವಿಸಬೇಕು ಎಂದು ಕಿವಿಮಾತು ಹೇಳಿದರು.

ತಾಲೂಕು ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷೆ ಹೆಚ್.ಎನ್. ತಂಗಮ್ಮ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಶಿಕ್ಷಣದ ಅವಧಿಯಲ್ಲಿಯೇ ಸಮಯಪಾಲನೆಯ ಅರಿವು ಮೂಡಿಸಬೇಕಿದೆ. ಆಗ ಮಾತ್ರ ಅವರು ಜೀವನದಲ್ಲಿ ಗುರಿಮುಟ್ಟಲು ಸಾಧ್ಯ ಎಂದು ಹೇಳಿದರು.

ವೇದಿಕೆಯಲ್ಲಿ ಸಿಆರ್‍ಪಿ ವಿಜಯಕುಮಾರ್, ಇಲಾಖೆಯ ಮೇಲ್ವಿಚಾರಕಿ ನಿರ್ಮಲ, ಸವಿತ, ರೇಖಾ, ತೀರ್ಪುಗಾರರಾದ ಕೆಂಪರಾಜು, ವೀರಣ್ಣ ಮತ್ತಿತರರು ಉಪಸ್ಥಿತರಿದ್ದರು. ತಾಲೂಕಿನ ವಿವಿಧೆಡೆಗಳಿಂದ ಆಗಮಿಸಿದ್ದ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಪಾಲ್ಗೊಂಡರು.