ಮಡಿಕೇರಿ, ಜ. 31: ಕೊಡಗಿನ ಹಾಲೇರಿ ರಾಜಕುಟುಂಬ ಆರಾಧಿಸಿಕೊಂಡು ಬರುತ್ತಿದ್ದ ಕೋಟೆಯ ಶ್ರೀ ವೀರಭದ್ರೇಶ್ವರ ದೇವಾಲಯವನ್ನು ಪುನರ್ ನಿರ್ಮಿಸುವದು ಒಳಿತು ಎಂದು ದೈವಜ್ಞರು ಅಭಿಪ್ರಾಯಪಟ್ಟಿದ್ದಾರೆ. ಈಚೆಗೆ ಶ್ರೀ ಓಂಕಾರೇಶ್ವರ ದೇವಾಲಯದಲ್ಲಿ ನಡೆದ ಅಷ್ಟಮಂಗಲ ಪ್ರಶ್ನೆಯಲ್ಲಿ; ಶ್ರೀ ವೀರಭದ್ರೇಶ್ವರ ದೇವಾಲಯ ನಾಶಗೊಂಡಿರುವ ಗೋಚರಫಲ ಕಂಡು ಬಂದಿದೆ.
ಈ ವೇಳೆ ವಿಮರ್ಶೆ ನಡೆಸಿರುವ ದೈವಜ್ಞರು; ಒಂದೊಮ್ಮೆ ಕೊಡಗಿನ ರಾಜಕುಟುಂಬ ಆರಾಧಿಸಿಕೊಂಡು ಬಂದಿರುವ; ಅವರ ಕುಲದೇವನಾದ ಶ್ರೀ ವೀರಭದ್ರ ಇಂದು ನೆಲೆ ಹಾಗೂ ಪೂಜೆಯಿಲ್ಲದೆ ಕೋಪಗೊಂಡು ಭೈರವನಾಗಿದ್ದಾಗಿ ಉಲ್ಲೇಖಿಸಿದರು.
ಈ ಸಂಬಂಧ ದಾಖಲೆಗಳ ಪರಿಶೀಲನೆ ಮಾಡಲಾಗಿ; 1818ರಲ್ಲ್ಲಿ ಕೊಡಗಿನ ಆಡಳಿತವನ್ನು ವಶಪಡಿಸಿಕೊಂಡಿದ್ದ ಬ್ರಿಟೀಷರು; ಕೋಟೆ ಆವರಣದಲ್ಲಿದ್ದ ಶ್ರೀ ವೀರಭದ್ರ ದೇವಾಲಯವನ್ನು 1855ರಲ್ಲಿ ಚರ್ಚ್ ಆಗಿ ಪರಿವರ್ತಿಸಿರುವದು ಇತಿಹಾಸ ಪುಟಗಳಲ್ಲಿ ಉಲ್ಲೇಖವಿದೆ. ಬ್ರಿಟಿಷ್ ಆಳ್ವಿಕೆಯ ಬಳಿಕ ಅದೇ ಚರ್ಚ್ ಈಗಿನ ವಸ್ತು ಸಂಗ್ರಹಾಲಯವಾಗಿ ಮಾರ್ಪಾಡುಗೊಂಡಿರುವದು ದೃಢಪಟ್ಟಿದೆ. ಹೀಗಾಗಿ ಪ್ರಸ್ತುತ ಇರುವ ವಸ್ತುಸಂಗ್ರಹಾಲಯದಲ್ಲಿ ರಾಜರ ಕಾಲದ ಶ್ರೀ ವೀರಭದ್ರ ವಿಗ್ರಹ ಕೂಡ ಇಂದಿಗೂ ಇದ್ದು; ಕೊಡಗಿನ ಹುತ್ತರಿ ಹಾಗೂ ಇತರ ಆಚರಣೆಯ ವೇಳೆ ರಾಜಕುಟುಂಬದಿಂದ ವೀರಭದ್ರ ಸನ್ನಿಧಿಯಲ್ಲಿ ಪೂಜೆಯೊಂದಿಗೆ ವಿಶೇಷ ಗೌರವ ಸಲ್ಲಿಸಲ್ಪಡುತ್ತಿದ್ದ ಅಂಶ ಕೂಡ ಬೆಳಕಿಗೆ ಬಂದಿದೆ.
ಈ ದಿಸೆಯಲ್ಲಿ ಕನಿಷ್ಟ ವರ್ಷವೊಂದವರ್ತಿ ಶ್ರೀ ವೀರಭದ್ರನಿಗೆ ಕೋಟೆಯಲ್ಲಿ ಪೂಜೆಯೊಂದಿಗೆ; ನವರಾತ್ರಿಯ ಪರ್ವ ದಿನಗಳಲ್ಲಿ ರಾಜಕುಟುಂಬ ನಡೆಸಿಕೊಂಡು ಬರುತ್ತಿದ್ದ ಉತ್ಸವಗಳನ್ನು ಸಾಂಕೇತಿಕವಾಗಿ ಮುಂದುವರೆಸಿದರೆ ನಾಡಿಗೆ ಒಳ್ಳೆಯದು ಎಂದು ದೈವಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಈಗಿನ ಸನ್ನಿವೇಶದಲ್ಲಿ ರಾಜಪರಂಪರೆಯ ಅರಮನೆಯು ಸರಕಾರಿ ಕಚೇರಿಗಳ ತೆರವಿನಿಂದ ನಿರ್ಜನಗೊಂಡಂತಾಗಿದೆ. ಈ ಕಾಲಘಟ್ಟದಲ್ಲಿ ಸಂಬಂಧಪಟ್ಟವರು ನಾಡಿನ ಕಲ್ಯಾಣಕ್ಕಾಗಿ ಶ್ರೀ ವೀರಭದ್ರನಿಗೆ ಮರು ಸ್ಥಾಪನೆಯೊಂದಿಗೆ ಪೂಜಾ ಕೈಂಕರ್ಯ ಹಾಗೂ ಪುರಾತನ ಪರಂಪರೆ ಮುಂದುವರೆಸಿದರೆ; ದೈವಜ್ಞರ ಆಶಯದಂತೆ ಸರ್ವರಿಗೆ ಒಳಿತಾದೀತು.
-ಶ್ರೀಸುತ