ಮಡಿಕೇರಿ, ಫೆ. 2: ಹನ್ನೆರಡನೇ ಶತಮಾನದಲ್ಲಿ ಮಡಿವಾಳ ಸಮುದಾಯದಲ್ಲಿ ಜನಿಸಿ, ಸಮಾನತೆಯ ಸಮಾಜ ನಿರ್ಮಾಣಕ್ಕೆ ಶ್ರಮಿಸಿದ ಮಹಾನ್ ಶರಣ ಶ್ರೀ ಮಡಿವಾಳ ಮಾಚಿದೇವರು ಎಂದು ಸರ್ವೋದಯ ಸಮಿತಿ ನಿಕಟಪೂರ್ವ ಅಧ್ಯಕ್ಷ ಟಿ.ಪಿ. ರಮೇಶ್ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ವತಿಯಿಂದ ನಗರದ ಡಿ. ದೇವರಾಜ ಅರಸು ಭವನದಲ್ಲಿ ನಡೆದ ಶ್ರೀ ಮಡಿವಾಳ ಮಾಚಿದೇವರ ಜಯಂತೋತ್ಸವ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.
ಹನ್ನೆರಡನೇ ಶತಮಾನದ ಕ್ರಾಂತಿಕಾರಿ ಮಾಚಿದೇವರು ವಚನ ಸಾಹಿತ್ಯಕ್ಕೆ ತಮ್ಮದೆ ಆದ ಕೊಡುಗೆ ನೀಡಿದ್ದಾರೆ. ಶೋಷಣೆಗೆ ಒಳಗಾದವರನ್ನು ಮೇಲೆತ್ತುವ ಕೆಲಸ ಮಾಡಿದರು. ಇವರ ತತ್ವ ಮತ್ತು ಆದರ್ಶಗಳನ್ನು ವಿದ್ಯಾರ್ಥಿಗಳು ತಿಳಿದುಕೊಳ್ಳುವಂತಾಗಬೇಕು ಎಂದರು. ಅಕ್ಷರ ಜ್ಞಾನವಿಲ್ಲದ ಸಂದರ್ಭದಲ್ಲಿ ಉದಯಿಸಿದ ಮಹಾನ್ ಶರಣ, ಹಾಗೆಯೇ ಅನುಭವ ಮಂಟಪ ಕಟ್ಟುವಲ್ಲಿ ಸಹಕಾರ ನೀಡಿದರು. ಮಾಚಿದೇವರು ‘ಅರಸುತನವು ಶ್ರೇಷ್ಠವಲ್ಲ ಅಗಸತನವು ಕೀಳಲ್ಲ’ ಎಂಬುದನ್ನು ಸಾರಿದ್ದಾರೆ. 12ನೇ ಶತಮಾನದ ಅಸಮಾನತೆಯನ್ನು ನಿರ್ಮೂಲನೆ ಮಾಡಲು ಶ್ರಮಿಸಿದರು ಎಂದು ಟಿ.ಪಿ ರಮೇಶ್ ತಿಳಿಸಿದರು.
ಹೆಚ್ಚುವರಿ ಜಿಲ್ಲಾಧಿಕಾರಿ ಡಾ. ವಿ.ಸಿ. ಸ್ನೇಹಾ ಮಾತನಾಡಿ, ಮಡಿವಾಳ ಮಾಚಿದೇವರು ನೀಡಿದ ತತ್ವಗಳು ಪ್ರಸ್ತುತವಾಗಿದ್ದು, ದೇಶದ ಸಂವಿಧಾನದ ಪ್ರಸ್ತಾವನೆಯಲ್ಲಿರುವಂತೆ, ಸಮಾಜವಾದಿ, ಪ್ರಜಾಸತಾತ್ಮಕ ಮೌಲ್ಯಗಳು ಹಾಗೂ ಆಶಯಗಳನ್ನು ಮಾಚಿದೇವರ ವಚನಗಳಲ್ಲಿ ಕಾಣಬಹುದಾಗಿದೆ ಎಂದರು.
ಹಿಂದುಳಿದ ವರ್ಗಗಳ ಇಲಾಖೆಯ ಕಲ್ಯಾಣಾಧಿಕಾರಿ ಲಿಂಗರಾಜಪ್ಪ, ಅಲ್ಪಸಂಖ್ಯಾತರ ಕಲ್ಯಾಣಾದಿಕಾರಿ ಹೆಚ್.ಡಿ. ಪುಟ್ಟರಾಜು ಇತರರು ಇದ್ದರು. ಕೃಷ್ಣಮೂರ್ತಿ ಮತ್ತು ರಾಘವೇಂದ್ರ ಪ್ರಸಾದ್ ತಂಡದವರು ನಾಡಗೀತೆ ಹಾಗೂ ಭಕ್ತಿಗೀತೆ ಹಾಡಿದರು.
ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಹಾಯಕ ನಿರ್ದೇಶಕಿ ಕೆ.ಟಿ. ದರ್ಶನ ಸ್ವಾಗತಿಸಿ, ವಂದಿಸಿದರು. ಮಣಜೂರು ಮಂಜುನಾಥ ನಿರೂಪಿಸಿದರು.