ಮಡಿಕೇರಿ, ಫೆ. 2: ಜಿಲ್ಲಾ ಕೇಂದ್ರವಾಗಿರುವ ಮಡಿಕೇರಿಯ ಪ್ರಸಿದ್ಧ ಪ್ರವಾಸಿ ತಾಣವಾದ ರಾಜಾಸೀಟು ಉದ್ಯಾನವನದ ಸನಿಹದಲ್ಲಿ ನಿರ್ಮಾಣಗೊಳ್ಳುತ್ತಿರುವ ಕೂರ್ಗ್ ವಿಲೇಜ್‍ನಲ್ಲಿ ಕೊಡಗಿನ ವೈವಿಧ್ಯಮಯ ವೈಭವವನ್ನು ಐತಿಹ್ಯಪೂರ್ಣವಾಗಿ ಬಿಂಬಿಸುವ ನಿಟ್ಟಿನಲ್ಲಿ ಪರಿಕಲ್ಪನೆಯನ್ನು ಅಂತಿಮಪಡಿಸಲಾಗಿದೆ.

ತೋಟಗಾರಿಕಾ ಇಲಾಖೆಗೆ ಸೇರಿರುವ ಈ ಸ್ಥಳದಲ್ಲಿ ಜಿಲ್ಲಾಧಿಕಾರಿ ಗಳು ಅಧ್ಯಕ್ಷರಾಗಿರುವ ರಾಜಾಸೀಟು ಅಭಿವೃದ್ಧಿ ಸಮಿತಿಯ ಅಧೀನದಲ್ಲಿ ಪ್ರವಾಸೋದ್ಯಮ ಇಲಾಖೆಯ ಮೂಲಕ ಯೋಜನೆಯನ್ನು ರೂಪಿಸಲಾಗಿದೆ. ಈ ಯೋಜನೆ ಹಮ್ಮಿಕೊಂಡ ಬೆನ್ನಲ್ಲೇ ಇದಕ್ಕೆ ಅಪಸ್ವರವೂ ಕೇಳಿಬಂದಿತ್ತಾದರೂ ಇದನ್ನು ವಿಶೇಷ ರೀತಿಯಲ್ಲಿ ಕಾರ್ಯಗತಗೊಳಿಸುವ ಮೂಲಕ ಬಂದು ಆಕರ್ಷಕ ಕೇಂದ್ರವನ್ನಾಗಿಸುವ ನಿಟ್ಟಿನಲ್ಲಿ ಸಂಬಂಧಿಸಿದವರು ಮುಂದಾಗಿದ್ದಾರೆ. ಇದರಂತೆ ಆರಂಭದಲ್ಲಿ ಇದ್ದಂತಹ ಮಳಿಗೆಗಳ ಉದ್ದೇಶವನ್ನು ಕೈಬಿಡಲಾಗಿದ್ದು, ಇಲ್ಲಿ ಕೊಡಗಿನ ವಿವಿಧ ವಿಶೇಷತೆಗಳನ್ನು ಪರಿಚಯಿಸುವ ವಿನೂತನವಾದ ಪರಿಕಲ್ಪನೆಯನ್ನು ಹೊಂದಲಾಗಿದ್ದು, ಇದರಂತೆ ಯೋಜನೆ ರೂಪುಗೊಳ್ಳುತ್ತಿದೆ. ಈ ನಿಟ್ಟಿನಲ್ಲಿ ಇತ್ತೀಚೆಗೆ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಇದನ್ನು ಅಂತಿಮಪಡಿಸಲಾಗಿದೆ.

ಏನೇನು ವಿಶೇಷತೆಗಳು...

ಉದ್ದೇಶಿತ ಕೂರ್ಗ್ ವಿಲೇಜ್‍ನಲ್ಲಿ ಕ್ಲಸ್ಟರ್- ಒಂದು- ಎರಡು- ಮೂರು ಎಂಬ ವಿಭಾಗಗಳಂತೆ ಹಲವು ವಿಶೇಷತೆಗಳು ಪ್ರತಿಬಿಂಬಿತವಾಗಲಿವೆ. ಇದಕ್ಕಾಗಿ ವಿವಿಧ ಇಲಾಖೆಗಳನ್ನು ಒಳಗೊಂಡ ನೋಡಲ್ ಏಜೆನ್ಸಿಗಳನ್ನು ರಚಿಸಲಾಗುತ್ತಿದ್ದು, ಸಂಬಂಧಿಸಿದ ಈ ಅಧಿಕೃತ ಏಜೆನ್ಸಿಗಳ ಮೂಲಕ ಇವುಗಳ ಉಸ್ತುವಾರಿ ಮಾಡಲಾಗುವುದು.

ಈ ಕೂರ್ಗ್ ಹೆರಿಟೇಜ್ ವಿಲೇಜ್‍ನಲ್ಲಿ ಇದಕ್ಕಾಗಿ ಜವಾಬ್ದಾರಿ ನೀಡಲಾಗಿರುವ ವಿವಿಧ ಇಲಾಖೆಗಳಿಂದ ಮ್ಯೂಸಿಯಂ ಸ್ಥಾಪನೆಯಾಗಲಿದೆ.

ಕ್ಲಸ್ಟರ್ ಒಂದರಂತೆ ಉದ್ದೇಶ: ಜಿಲ್ಲೆಯ ಪ್ರಮುಖ ಬೆಳೆಗಳಾದ ಕಾಫಿ, ಕಾಳುಮೆಣಸು, ಏಲಕ್ಕಿ, ಕೊಡಗಿನ, ಕಿತ್ತಳೆ, ಕಾಡು ಹಣ್ಣುಗಳ; ಜೇನುಗಾರಿಕೆಯನ್ನು ಬಿಂಬಿಸುವಂತೆ ಮ್ಯೂಸಿಯಂ ಹಾಗೂ ಇದರ ಜತೆಗೆ ತೋಟಗಾರಿಕಾ ಉತ್ಪನ್ನಗಳ ಹಾಗೂ ವಿವಿಧ ತೋಟಗಾರಿಕಾ ಗಿಡಗಳು ನರ್ಸರಿ ಮಾರಾಟ ಕೇಂದ್ರ ಬರಲಿದೆ. ಗ್ರಾಫಿಕ್ಸ್ - ಪ್ಯಾನಲ್ಸ್, ಪೈಂಟಿಂಗ್ ಮೂಲಕ ಇವುಗಳ ಪ್ರದರ್ಶನವಿರುತ್ತದೆ. ಕಾಫಿ ಮಂಡಳಿ ಹಾಗೂ ಚೆಟ್ಟಳ್ಳಿಯ ಕಾಫಿ ಸಂಶೋಧನಾ ಕೇಂದ್ರ, ತೋಟಗಾರಿಕಾ ಇಲಾಖೆ, ಐಸಿಹೆಚ್‍ಆರ್ ಚೆಟ್ಟಳ್ಳಿ ಹಾಗೂ ಅಪ್ಪಂಗಳ ಇದರ ನೋಡಲ್ ಏಜೆನ್ಸಿಯಾಗಲಿವೆ.

ಕ್ಲಸ್ಟರ್ -2ರಲ್ಲಿ ಕೊಡಗು ಜಿಲ್ಲೆಯ ಪ್ರಮುಖ ಜನಾಂಗವಾದ ಕೊಡವ, ಅಮ್ಮಕೊಡವ, ಅರೆಭಾಷೆ ಜನಾಂಗ ಸೇರಿದಂತೆ ಇತರ ಎಲ್ಲಾ ಮೂಲನಿವಾಸಿಗಳ ಹಾಗೂ ಇಲ್ಲಿನ ಪರಿಶಿಷ್ಟ ಜಾತಿ, ಪಂಗಡಗಳ ಸಂಸ್ಕøತಿ, ಪರಂಪರೆ, ಹಬ್ಬ ಹರಿದಿನಗಳು, ಆಹಾರ ಪದ್ಧತಿ ಇತ್ಯಾದಿಗಳು, ಇದರೊಂದಿಗೆ ಕೊಡಗಿನ ಇತಿಹಾಸ, ರಾಜರ ಕಾಲದ ಇತಿಹಾಸ, ರಕ್ಷಣಾ ಪಡೆಗೆ ಕೊಡಗಿನ ಕೊಡುಗೆ, ಬ್ರಿಟೀಷ್ ಆಡಳಿತ, ಕೊಡಗು ಸಿ ರಾಜ್ಯವಾಗಿದ್ದ ಸಂದರ್ಭದ ಚಿತ್ರಣಗಳು ಅನಾವರಣಗೊಳ್ಳಲಿವೆ.

ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಕೊಡವ ಅಕಾಡೆಮಿ, ಅರೆಭಾಷೆ ಅಕಾಡೆಮಿ, ಐಟಿಡಿಪಿ ಇಲಾಖೆ, ಪ್ರಾಚ್ಯವಸ್ತು ಇಲಾಖೆ ಹಾಗೂ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಗೆ ಇದರ ಜವಾಬ್ದಾರಿ ವಹಿಸಲಾಗುತ್ತಿದೆ.

ಕ್ಲಸ್ಟರ್ 3ರಲ್ಲಿ ಕೊಡಗಿನ ಪ್ರಾಕೃತಿಕ ವೈಭವ, ಬೆಟ್ಟ- ಗುಡ್ಡಗಳ, ಗಿಡ -ಮರಗಳು, ಪ್ರಾಣಿ - ಪಕ್ಷಿಗಳು, ಮೀನುಗಳು ಹಾಗೂ ಇನ್ನಿತರ ಜೀವ ವೈವಿಧ್ಯತೆಗಳನ್ನು ಬಿಂಬಿಸುವ ಹಾಗೂ ಮೀನುಗಾರಿಕೆ ಇಲಾಖೆಯ ಮೂಲಕ ವಿಶೇಷ ‘ಅಕ್ವೇರಿಯಂ’ ಸ್ಥಾಪಿಸಲಾಗುವುದು. ಮೀನುಗಾರಿಕಾ ಇಲಾಖೆ, ಅರಣ್ಯ ಇಲಾಖೆ ಹಾಗೂ ಪೊನ್ನಂಪೇಟೆಯ ಅರಣ್ಯ ಮಹಾವಿದ್ಯಾಲಯ ಇದರ ನೋಡಲ್ ಏಜೆನ್ಸಿಯಾಗಿ ಕಾರ್ಯನಿರ್ವಹಿಸಲಿವೆ.

ಈ ಉದ್ದೇಶಿತ ಪರಿಕಲ್ಪನೆಗಳೆಲ್ಲವೂ ಗ್ರಾಫಿಕ್ಸ್, ಪೈಂಟಿಂಗ್ಸ್, ಆಡಿಯೋ, ವೀಡಿಯೋ ಡಿಸ್‍ಪ್ಲೇ, ಲೈವ್ ಡಿಸ್‍ಪ್ಲೇಗಳ ಮೂಲಕ ಈ ಕೂರ್ಗ್ ಹೆರಿಟೇಜ್ ವಿಜೇಲ್‍ನಲ್ಲಿ ರೂಪುಗೊಳ್ಳಲಿದ್ದು, ಜಿಲ್ಲೆಯಲ್ಲಿ ಇದೊಂದು ಉತ್ತಮ ಪ್ರವಾಸಿತಾಣ ಹಾಗೂ ಮಾಹಿತಿ ಕೇಂದ್ರವಾಗಿ ಮೂಡಿ ಬರಲಿದೆ.