ಮಡಿಕೇರಿ, ಫೆ. 2: ಕೊಡಗು ಜಿಲ್ಲೆಯ ಅಲ್ಲಲ್ಲಿ ಭಾರತದ 71ನೇ ಗಣರಾಜ್ಯೋತ್ಸವ ಆಚರಣೆಯಾಯಿತು. ರಾಷ್ಟ್ರ ಧ್ವಜಾರೋಹಣದೊಂದಿಗೆ ವಿಭಿನ್ನ ಚಟುವಟಿಕೆಗಳನ್ನು ಹಮ್ಮಿಕೊಂಡು ಸಂಭ್ರಮಿಸಲಾಯಿತು.

ಗಾಳಿಬೀಡು ಜವಾಹರ್ ನವೋದಯ: ಪ್ರಜಾಪ್ರಭುತ್ವದ ಮೌಲ್ಯಗಳನ್ನು ಅರಿತು ನಡೆಯಬೇಕಾದ ಅವಶ್ಯಕತೆ ಹಿಂದೆಂದಿಗಿಂತಲೂ ಈಗ ಹೆಚ್ಚಾಗಿದೆ. ವಿವಿಧತೆಯಲ್ಲಿ ಏಕತೆಯನ್ನು ಸಾರುವ ವಿಶಿಷ್ಟ ದೇಶ ನಮ್ಮದು. ಅದೇ ಅದರ ಅಸ್ಮಿತೆಯೂ ಕೂಡ, ಈ ಅಸ್ಮಿತೆಗೆ ಧಕ್ಕೆ ತರಬಹುದಾದ ಎಲ್ಲ ವಾದಗಳನ್ನು ಬದಿಗಿಟ್ಟು ನಾವೆಲ್ಲರೂ ಒಂದು ಎಂದು ಬಾಳಬೇಕು. ಅಂಥದೊಂದು ಹೊಸ ನಾಡನ್ನು ಕಟ್ಟಬೇಕು ಎಂದು ಡಾ. ನಡಿಬೈಲು ಉದಯಶಂಕರ್ ಅವರು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು. ಹಾಗೆಯೇ ಸ್ವಾತಂತ್ರ್ಯ ಹೋರಾಟದಲ್ಲಿ ಕೊಡಗಿನ ವೀರರ ಕೊಡುಗೆ ಅಪಾರವಾದುದು. ಅದಕ್ಕೆ ಕೊಡಗಿನಲ್ಲಿರುವ ನಾವೆಲ್ಲರೂ ಹೆಮ್ಮೆ ಪಡಬೇಕು ಎಂದೂ ಹೇಳಿದರು.

ಗಾಳಿಬೀಡು ಜವಾಹರ್ ನವೋದಯ ವಿದ್ಯಾಲಯದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಧ್ವಜಾರೋಹಣದೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಂದ ಪಥಸಂಚಲನ, ಸಾಮೂಹಿಕ ನೃತ್ಯ, ಡಂಬೆಲ್ಸ್ ಪ್ರದರ್ಶನ, ಯೋಗ ಪ್ರದರ್ಶನ ಗಳು ನಡೆದವು. ಚಿತ್ರಕಲೆ, ಲೇಖನ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಜೀವಶಾಸ್ತ್ರ ವಿಭಾಗದ ಮುಖ್ಯಸ್ಥ ಕೆ. ಗಂಗಾಧರನ್ ಶೈಕ್ಷಣಿಕ ಸಾಧನೆಯ ಜೊತೆ ಮಕ್ಕಳು ಆಟೋಟಗಳತ್ತಲೂ ಗಮನ ಹರಿಸಬೇಕೆಂದರು. ಕಾರ್ಯಕ್ರಮದಲ್ಲಿ ಶಿಕ್ಷಕ, ಶಿಕ್ಷಕೇತರ ಸಿಬ್ಬಂದಿ ಪಾಲ್ಗೊಂಡರು.

ಪತ್ರಕರ್ತರ ಸಂಘ: ಕುಶಾಲನಗರ ಕಾರ್ಯನಿರತ ಪತ್ರಕರ್ತರ ಸಂಘದ ಕಚೇರಿಯಲ್ಲಿ ಗಣರಾಜ್ಯೋತ್ಸವ ಅಂಗವಾಗಿ ಸಂಘದ ಅಧ್ಯಕ್ಷ ರಘು ಹೆಬ್ಬಾಲೆ ಧ್ವಜಾರೋಹಣ ನೆರವೇರಿಸಿದರು.

ಮಾಜಿ ಸೈನಿಕರ ಸಂಘ: ಕುಶಾಲನಗರ ಮಾಜಿ ಸೈನಿಕರ ಸಂಘದ ಕಚೇರಿಯಲ್ಲಿ ಗಣರಾಜ್ಯೋತ್ಸವ ಅಂಗವಾಗಿ ಧ್ವಜಾರೋಹಣ ಕಾರ್ಯಕ್ರಮ ನಡೆಯಿತು. ಸಂಘದ ಅಧ್ಯಕ್ಷ ಎಂ.ಎನ್. ಮೊಣ್ಣಪ್ಪ ಧ್ವಜಾರೋಹಣ ನೆರವೇರಿಸಿದರು. ಕಾರ್ಯದರ್ಶಿ ಎಸ್.ಆರ್. ಮಾದಪ್ಪ ಮತ್ತು ಪದಾಧಿಕಾರಿಗಳು, ಸದಸ್ಯರು ಇದ್ದರು. ಇದೇ ಸಂದರ್ಭ ಸಂಘದ ಆಶ್ರಯದಲ್ಲಿ ಸಂತೋಷಕೂಟ ಹಮ್ಮಿಕೊಂಡಿದ್ದರು.

ಕೂಡಿಗೆ ಗ್ರಾ.ಪಂ.: ಕೂಡಿಗೆ ಗ್ರಾಮ ಪಂಚಾಯಿತಿ ವತಿಯಿಂದ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು. ಧ್ವಜಾರೋಹಣವನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪ್ರೇಮಲೀಲಾ ನೆರವೇರಿಸಿದರು. ಈ ಸಂದರ್ಭ ಗ್ರಾಮ ಪಂಚಾಯಿತಿ ಸದಸ್ಯರುಗಳಾದ ರಾಮಚಂದ್ರ, ರತ್ನಮ್ಮ, ಕಲ್ಪನಾ ಸೇರಿದಂತೆ ಅಭಿವೃದ್ಧಿ ಅಧಿಕಾರಿ ಅಶ್ವಿನಿ, ಕಾರ್ಯದರ್ಶಿ ಶಿಲ್ಪಾ ಹಾಗೂ ಸಿಬ್ಬಂದಿ ವರ್ಗ ಹಾಜರಿದ್ದರು.ನಾಪೋಕ್ಲು: 71ನೇ ಗಣರಾಜ್ಯೋತ್ಸವದ ಅಂಗವಾಗಿ ನಾಪೋಕ್ಲುವಿನ ಮದೀನಾ ಮದರಸದಲ್ಲಿ ಡಾ. ಕುಶಾಲ್ ಧ್ವಜಾರೋಹಣ ನೆರವೇರಿಸಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಬಾಲ ನ್ಯಾಯ ಮಂಡಳಿ ಸದಸ್ಯ ಹಾಗೂ ವಕೀಲ ಎಂ.ಎಂ. ಅಬ್ದುಲ್ ರಿಯಾಜ್ ಹಾಫಿನ್ ಮಾತನಾಡಿ, ದೇಶದ ಸಂವಿಧಾನವನ್ನು ಗೌರವಿಸಿ ಸಂವಿಧಾನದಲ್ಲಿರುವ ಅಂಶಗಳನ್ನು ಪ್ರಾಯೋಗಿಕವಾಗಿ ಅಳವಡಿಸಿದರೆ ಮಾತ್ರ ದೇಶ ಪ್ರಗತಿ ಹೊಂದಲು ಸಾಧ್ಯ ಎಂದು ತಿಳಿಸಿದರು.

ಜಿಲ್ಲಾ ವಕ್ಫ್ ಬೋರ್ಡ್ ಅಧ್ಯಕ್ಷ ಜಹೀರ್, ಹುದಾ ಶಾಲೆಯ ಅಧ್ಯಕ್ಷ ಎಂ.ಎಸ್. ಸಲೀಂ, ಕಾಫಿ ಬೆಳೆಗಾರ ಎಂ.ಎಂ. ಶೌಖತ್ ಹಾಜಿ, ಗಫಾರ್ ಮಹಮದ್ ರಫಿ, ಅಬ್ದುಲ್ ನಜೀರ್, ಮೌಲಾನ ಕೌಸರ್ ಮತ್ತು ಮೆಹಬೂಬ್ ಸಾಬ್ ಹಾಜರಿದ್ದರು.ವೀರಾಜಪೇಟೆ ಕೊಡವಕೇರಿ: ವೀರಾಜಪೇಟೆಯ ಗಾಂಧಿನಗರದ ಕೊಡವಕೇರಿಯಿಂದ 71ನೇ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು.

ಕೊಡವಕೇರಿಯ ಪ್ರಮುಖರು ಹಾಗೂ ಇಲ್ಲಿನ ಪಟ್ಟಣ ಪಂಚಾಯಿತಿಯ ಸದಸ್ಯೆ ಸುನೀತಾ ಜೂನಾ ಅತಿಥಿಯಾಗಿ ಸಭೆಯನ್ನುದ್ದೇಶಿಸಿ ಮಾತನಾಡಿದರು. ನಾಪೋಕ್ಲು: ಕರ್ನಾಟಕ ಪಬ್ಲಿಕ್ ಶಾಲೆ ವತಿಯಿಂದ 71ನೇ ಗಣರಾಜ್ಯೋತ್ಸವ ಅಂಗವಾಗಿ ನಾಪೋಕ್ಲು ಪಟ್ಟಣದಲ್ಲಿ ವಿದ್ಯಾರ್ಥಿಗಳು ಮೆರವಣಿಗೆ ನಡೆಸಿದರು. ಪ್ರೌಢಶಾಲಾ ವಿಭಾಗದ ಎನ್‍ಸಿಸಿ ವಿದ್ಯಾರ್ಥಿಗಳು, ಕಾಲೇಜು ವಿದ್ಯಾರ್ಥಿಗಳು, ಶಿಕ್ಷಕ ವೃಂದ, ಪ್ರೌಢಶಾಲಾ ವಿಭಾಗದ ಉಪಪ್ರಾಂಶುಪಾಲೆ ಪಿ.ಕೆ. ನಳಿನಿ, ಕಾಲೇಜು ಪ್ರಾಂಶುಪಾಲೆ ಡಾ. ಅವನಿಜ ಮತ್ತಿತರರು ಇದ್ದರು.