ವೀರಾಜಪೇಟೆ, ಫೆ. 4: ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರವೆಸಗಿದ ಆರೋಪದ ಮೇರೆ ಯೋಧನೋರ್ವ 40 ವರ್ಷ ಸಜೆಗೊಳಗಾಗಿದ್ದಾನೆ. ಕೇರಳದ ಮಾನಂದವಾಡಿಯ ವೈನಾಡ್ನ ಮುದುಕರದ ನಿವಾಸಿ ಹಾಗೂ ಸಿ.ಆರ್.ಪಿ.ಎಫ್. ಯೋಧ ಸಿ.ಡಿ. ನಿತೀನ್ ಎಂಬಾತನಿಗೆ ಇಲ್ಲಿನ ಎರಡನೇ ಅಧಿಕ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾದ ಬಿ.ಜಿ. ರಮಾ ಅವರು ಭಾರತೀಯ ದಂಡ ಸಂಹಿತೆ ಹಾಗೂ ಫೋಕ್ಸೋ ಅಪರಾಧಗಳಿಗಾಗಿ ತಲಾ 20 ವರ್ಷ ಸಜೆ ಹಾಗೂ ಒಟ್ಟು 95000 ರೂ ದಂಡ ವಿಧಿಸಿದ್ದಾರೆ.ಕಳೆದ ತಾ. 12.3.2019 ರಂದು ಆರೋಪಿ ನಿತಿನ್ ಇಂಜಿಲಗೆರೆಯ ಪುಲಿಯೇರಿ ಗ್ರಾಮದ ತನ್ನ ಹೆಂಡತಿಯ ತವರು ಮನೆಗೆ ಬಂದಿದ್ದಾಗ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರವೆಸಗಿದನೆಂದು ಬಾಲಕಿಯ ತಾಯಿ ಸಿದ್ದಾಪುರ ಪೊಲೀಸರಿಗೆ ದೂರು ನೀಡಿದ ಮೇರೆ ಪೊಲೀಸರು ಸಿ.ಡಿ. ನಿತೀನ್ (29) ವಿರುದ್ಧ ಐ.ಪಿ.ಸಿ. ಕಲಂ 448, 376, 506 ಹಾಗೂ ಕಲಂ 4ರ ಫೋಕ್ಸೋ ಕಾಯಿದೆಯಡಿಯಲ್ಲಿ ಪ್ರಕರಣ ದಾಖಲಿಸಿ ಮಡಿಕೇರಿ ವೃತ್ತ ನಿರೀಕ್ಷಕ ನಾಗೇಗೌಡ ಅವರು ಪ್ರಕರಣದ ತನಿಖೆ ನಡೆಸಿ ದೋಷಾರೋಪಣಾ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶೆ ಬಿ.ಜಿ. ರಮಾ ಅವರು ಐ.ಪಿ.ಸಿ ಕಲಂ 376ರ ಅಡಿಯಲ್ಲಿ 20 ವರ್ಷಗಳ ಸಾದಾ ಸಜೆ, ರೂ 50,000 ದಂಡ, ದಂಡ ಕಟ್ಟಲು ತಪ್ಪಿದರೆ ಮತ್ತೆ ಒಂದು ವರ್ಷಗಳ ಸಜೆ ಅನುಭವಿಸಬೇಕು. ಐ.ಪಿ.ಸಿ. 448ರಲ್ಲಿ ಒಂದು ವರ್ಷ ಸಜೆ ರೂ. 1000 ದಂಡ ಐ.ಪಿ.ಸಿ 506 ರಲ್ಲಿ 2 ವರ್ಷ ಸಜೆ ರೂ 5000 ದಂಡ, ದಂಡ ಕಟ್ಟಲು ತಪ್ಪಿದರೆ ಮೂರು ತಿಂಗಳ ಸಜೆ ಅನುಭವಿಸಬೇಕು. ಕಲಂ 4ರ ಫೋಕ್ಸೋ ಕಾಯಿದೆಯಡಿಯಲ್ಲಿ 20ವರ್ಷಗಳ ಸಾದಾ ಸಜೆ, ರೂ 40,000 ದಂಡ, ದಂಡ ಕಟ್ಟಲು ತಪ್ಪಿದರೆ ಒಂದು ವರ್ಷ ಸಜೆ ಅನುಭವಿಸುವಂತೆಯೂ, ದಂಡದ ಹಣದಲ್ಲಿ ಸಂತ್ರಸ್ತೆಗೆ ರೂ. 80,000 ನಗದು ಪರಿಹಾರ ನೀಡುವಂತೆ ತೀರ್ಪಿನಲ್ಲಿ ಆದೇಶಿಸಲಾಗಿದೆ.
ಸರಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕರಾದ
ಡಿ. ನಾರಾಯಣ ವಾದಿಸಿದರು.