ಆಲೂರುಸಿದ್ದಾಪುರ, ಫೆ. 4: ಮಾಲಂಬಿ ಗ್ರಾಮದ ಕೂಡುರಸ್ತೆಯಲ್ಲಿ ಒಂದೆರೆಡು ದಿನಗಳಿಂದ ಒಂಟಿ ಸಲಗವೊಂದು ಸಂಚರಿಸುತ್ತಿದ್ದು, ರಾತ್ರಿ ವೇಳೆಯಲ್ಲಿ ರೈತರ ತೋಟ ಹೊಲಗಳಿಗೆ ನುಗ್ಗಿ ಕೃಷಿ ಫಸಲನ್ನು ನಾಶಗೊಳಿಸುತ್ತಿದೆ. ಸೋಮವಾರ ರಾತ್ರಿ ಮಾಲಂಬಿ ಗ್ರಾಮದ ಕೂಡುರಸ್ತೆ ನಿವಾಸಿ ಸಿ.ಕೆ.ಗಣೇಶ್ ಎಂಬವರಿಗೆ ಸೇರಿದ ಬಾಳೆತೋಟಕ್ಕೆ ನುಗ್ಗಿದ ಒಂಟಿ ಸಲಗವೊಂದು ಬಾಳೆಗಿಡಗಳನ್ನು ಧ್ವಂಸಗೊಳಿಸಿದೆ. ಅಡಿಕೆ ಗಿಡಗಳನ್ನು ತುಳಿದು ಹಾಕಿದೆ. ಗಣೇಶ್ ಅರಣ್ಯ ಇಲಾಖೆಗೆ ದೂರು ನೀಡಿದ್ದಾರೆ. ಇದೆ ಗ್ರಾಮದಲ್ಲಿ ಕಳೆದ ವರ್ಷ ಕಾಡಾನೆಗಳ ಹಿಂಡು ಕಾಫಿ, ಬಾಳೆತೋಟ ಮತ್ತು ಭತ್ತದ ಗದ್ದೆಗಳಿಗೆ ನುಗ್ಗಿ ಅಪಾರ ಪ್ರಮಾಣದಲ್ಲಿ ಫಸಲು ನಷ್ಟ ಪಡಿಸಿತ್ತು. ಈ ಸಂದರ್ಭ ಫಸಲು ಗ್ರಾಮಸ್ಥರು ಅರಣ್ಯ ಇಲಾಖೆಗೆ ಪರಿಹಾರ ನೀಡುವಂತೆ ದೂರು ನೀಡಿದ್ದರು. ಅದರಂತೆ ಅರಣ್ಯ ಅಧಿಕಾರಿಗಳು ಸ್ಥಳಕ್ಕೆ ಬಂದು, ಅರ್ಜಿದಾರರಿಂದ ದಾಖಲಾತಿ ಪಡೆದುಕೊಂಡು ಪರಿಹಾರ ನೀಡುವ ಭರವಸೆ ನೀಡಿದ್ದರಾದರೂ, ವರ್ಷ ಕಳೆದರೂ ಪರಿಹಾರ ಬಂದಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

ಮಾಲಂಬಿ ದೊಡ್ಡೆರೆ ಮೀಸಲು ಅರಣ್ಯದ ಸುತ್ತ ಅರಣ್ಯ ಇಲಾಖೆ ಕಾಡಾನೆ ಬಾರದಂತೆ ಕಂದಕ ನಿರ್ಮಿಸಿದೆ. ಆದರೆ ಮಾಲಂಬಿ ಕೂಡುರಸ್ತೆ ಗ್ರಾಮದ ಬಳಿ ಕಂದಕಮುಚ್ಚಿ ಹೋಗಿದ್ದು ಇದರಿಂದ ಕಾಡಾನೆಗಳು ಸುಲಭವಾಗಿ ಗ್ರಾಮದೊಳಗೆ ನುಸುಳಿ ರೈತರ ಕೃಷಿ ಫಸಲನ್ನು ನಷ್ಟ ಪಡಿಸುತ್ತಿವೆ, ಅರಣ್ಯ ಇಲಾಖೆ ಮುಚ್ಚಿಹೋಗಿರುವ ಕಂದಕವನ್ನು ದುರಸ್ತಿಪಡಿಸಿದರೆ ಕಾಡಾನೆಗಳು ಕಂದಕವನ್ನು ದಾಟುವುದಿಲ್ಲ ಎಂದು ಗ್ರಾಮಸ್ಥರು ಅಭಿಪ್ರಾಯಿಸಿದ್ದಾರೆ.