ಮಡಿಕೇರಿ, ಫೆ. 3: ಜಿಲ್ಲಾಡಳಿತದ ವತಿಯಿಂದ ಪ್ರವಾಸೋದ್ಯಮ ಇಲಾಖೆ ಮೂಲಕ ರಾಜಾಸೀಟ್ ಬಳಿ ನಿರ್ಮಾಣವಾಗುತ್ತಿರುವ ‘ಕೂರ್ಗ್ ವಿಲೇಜ್’ ಪ್ರವಾಸಿ ಯೋಜನೆಗೆ ಸಂಬಂಧಿಸಿದಂತೆ ಕಾವೇರಿಸೇನೆ ಸಂಚಾಲಕ ರವಿಚಂಗಪ್ಪ ಅವರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಧೀಶರು ವಜಾಗೊಳಿಸಿದ್ದಾರೆ.ರೂ.98.50 ಲಕ್ಷ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಯೋಜನೆಯಿಂದ ಪರಿಸರಕ್ಕೆ ಹಾನಿಯಾಗಲಿದೆ ಎಂದು ಪುರಸಭೆ ಮಾಜಿ ಅಧ್ಯಕ್ಷ ಕೆ.ಜಿ. ಹರೀಶ್ ತಡೆಯಾಜ್ಞೆ ಕೋರಿ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಪ್ರಕರಣದಲ್ಲಿ ತಮ್ಮನ್ನು ಕೂಡ ವಾದಿಯನ್ನಾಗಿ ಪರಿಗಣಿಸಬೇಕೆಂದು ಕಾವೇರಿಸೇನೆ ಸಂಚಾಲಕ ರವಿಚಂಗಪ್ಪ ಕೂಡ ಅರ್ಜಿ ಸಲ್ಲಿಸಿದ್ದರು. ಆದರೆ ಪ್ರಕರಣದಲ್ಲಿ ರವಿಚಂಗಪ್ಪ ಅವರನ್ನು ಪರಿಗಣಿಸುವ ಅವಶ್ಯಕತೆ ಇಲ್ಲವೆಂದು ಸರಕಾರಿ ಅಭಿಯೋಜಕ ಶ್ರೀಧರನ್ ನಾಯರ್ ಹಾಗೂ ಅರ್ಜಿದಾರ ಹರೀಶ್ ಆಕ್ಷೇಪಣೆ ಸಲ್ಲಿಸಿದ್ದರು. ಈ ಸಂಬಂಧ ಇಂದು ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಬಿ.ಕೆ. ಮನು ಅವರು, ರವಿಚಂಗಪ್ಪ ಅವರ ಅವಶ್ಯಕತೆ ಇರುವುದಿಲ್ಲ ಎಂದು ಪರಿಗಣಿಸಿ,

(ಮೊದಲ ಪುಟದಿಂದ) ಅರ್ಜಿ ವಜಾಗೊಳಿಸಿ ತೀರ್ಪು ನೀಡಿದ್ದಾರೆ.ಹರೀಶ್ ಅವರು ಸಲ್ಲಿಸಿರುವ ತಡೆಯಾಜ್ಞೆ ವಿಚಾರಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ಸೂಚನೆ ಮೇರೆಗೆ ಸರಕಾರಿ ಅಭಿಯೋಜಕರು ಯೋಜನೆಯ ಬಗ್ಗೆ ಸಂಪೂರ್ಣ ದಾಖಲೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಯನ್ನು ತಾ. 4ಕ್ಕೆ (ಇಂದಿಗೆ) ನ್ಯಾಯಾಧೀಶರು ಕಾಯ್ದಿರಿಸಿದ್ದಾರೆ.