ಶನಿವಾರಸಂತೆ, ಫೆ. 4: ತ್ರಿವಿಧ ದಾಸೋಹಿ ಡಾ. ಶಿವಕುಮಾರ ಮಹಾಸ್ವಾಮೀಜಿ ಭಕ್ತ ಮಂಡಳಿ ಹಾಗೂ ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಘಟಕದ ಸಹಭಾಗಿತ್ವದಲ್ಲಿ ಲಿಂಗೈಕ್ಯ ಡಾ. ಶಿವಕುಮಾರ ಮಹಾಸ್ವಾಮೀಜಿಯವರ ಪುಣ್ಯ ಸಂಸ್ಮರಣೆ ಕಾರ್ಯಕ್ರಮ ಗುಡುಗಳಲೆ ಜಾತ್ರಾ ಮೈದಾನದ ಶ್ರೀ ಬಸವೇಶ್ವರ ದೇವಾಲಯ ಆವರಣದಲ್ಲಿ ನಡೆಯಿತು.

ಕಾರ್ಯಕ್ರಮದ ಪ್ರಯುಕ್ತ ಬೆಳಿಗ್ಗೆ ಶನಿವಾರಸಂತೆಯ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಿಂದ ನಂದಿಧ್ವಜ, ಹುದ್ದೂರು ಶ್ರೀ ವೀರಭದ್ರ ವೀರಗಾಸೆ ಕಲಾವಿದರಾದ ರವಿ ಮತ್ತು ಯೋಗೇಶ್ ತಂಡದವರ ವೀರಗಾಸೆ ಕುಣಿತ, ಹಂಡ್ಲಿ ಗ್ರಾಮದ ಸರಕಾರಿ ಪ್ರಾಥಮಿಕ ಪ್ರೌಢಶಾಲಾ ವಿದ್ಯಾರ್ಥಿಗಳ ಬ್ಯಾಂಡ್‍ಸೆಟ್, ಮಂಗಳವಾದ್ಯದೊಂದಿಗೆ ಸಿದ್ಧಗಂಗಾಶ್ರೀಗಳ ಭಾವಚಿತ್ರ ಮೆರವಣಿಗೆ ಆರಂಭವಾಗಿ ಪಟ್ಟಣದ ಮುಖ್ಯ ರಸ್ತೆಯಲ್ಲಿ ಸಾಗಿ ಗುಡುಗಳಲೆ ಜಾತ್ರಾ ಮೈದಾನದಲ್ಲಿ ಸಮಾವೇಶಗೊಂಡಿತು.

ಶ್ರೀ ಬಸವೇಶ್ವರ ದೇವಾಲಯ ಆವರಣದಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಕಿರಿಕೊಡ್ಲಿ ಮಠದ ಸದಾಶಿವಸ್ವಾಮೀಜಿ ಮಾತನಾಡಿ, ತ್ರಿಕಾಲ ಜ್ಞಾನಿ ಸಿದ್ಧಗಂಗಶ್ರೀಗಳು ಜಗತ್ತಿಗೆ ಆದರ್ಶಪುರುಷರು. ಮಾನವಧರ್ಮ ದೊಡ್ಡದು ಎಂದು ಸಾರಿದ ಶಿವಕುಮಾರಸ್ವಾಮೀಜಿ ಅವರ ತತ್ವಾದರ್ಶಗಳನ್ನು ಯುವ ಜನಾಂಗ ಪಾಲಿಸಬೇಕು ಎಂದು ಕರೆ ನೀಡಿದರು.

ಕಲ್ಲುಮಠದ ಮಹಾಂತಸ್ವಾಮೀಜಿ, ಶಿಡಿಗಳಲೆ ಮಠದ ಶಿವಲಿಂಗಸ್ವಾಮೀಜಿ ಹಾಗೂ ಮುದ್ದಿನಕಟ್ಟೆ ಮಠ ಅಭಿನವ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿದರು. ತಾ.ಪಂ. ಸದಸ್ಯ ಅನಂತ್‍ಕುಮಾರ್, ವೀರಶೈವ ಲಿಂಗಾಯತ ಸಮಾಜ ಜಿಲ್ಲಾ ಘಟಕದ ಅಧ್ಯಕ್ಷ ಶಿವಪ್ಪ, ಉಪಾಧ್ಯಕ್ಷ ಜಿ.ಎಂ. ಕಾಂತರಾಜ್, ತಾಲೂಕು ಘಟಕದ ಅಧ್ಯಕ್ಷ ಕೆ.ಬಿ. ಹಾಲಪ್ಪ, ಸದಸ್ಯರಾದ ಡಿ.ಬಿ. ಸೋಮಪ್ಪ, ಎಸ್.ವಿ. ವಸಂತ್, ಡಿ.ಬಿ. ಧರ್ಮಪ್ಪ, ಎಸ್.ಪಿ. ನಂಜಪ್ಪ, ಶರಣ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಎಸ್. ಮಹೇಶ್, ರಾಜ್ಯ ಕಾರ್ಯದರ್ಶಿ ರಾಜೇಶ್ವರಿ, ಪ್ರಮುಖರಾದ ಬಿ.ಎಸ್. ಮೋಹನ್, ಆದಿಲ್ ಪಾಶ, ಕೆ.ವಿ. ಮಂಜುನಾಥ್, ಎಚ್.ಎನ್. ಸಂದೀಪ್, ಸೋಮಶೇಖರ್, ಸಿ.ಬಿ. ಪ್ರಸನ್ನ, ಗಿರೀಶ್, ಲತೇಶ್, ಅಜ್ಜಳ್ಳಿ ರವಿ, ವೀರೇಂದ್ರ ರವಿಕುಮಾರ್, ವಿನೂತ್ ಶಂಕರ್, ಆನಂದ್ ಉಪಸ್ಥಿತರಿದ್ದರು.