ಮಡಿಕೇರಿ, ಫೆ. 3: ಈ ಬದುಕೇ ಹೀಗೆ..., ಯಾವಾಗ ಏನಾಗುತ್ತದೆ ಎಂಬುದನ್ನು ಊಹಿಸಲಾಗದು. ಕಾಲನ ಕರೆ ಯಾವಾಗ ಬರುತ್ತದೆ ಎಂದು ಕಲ್ಪನೆ ಕೂಡ ಮಾಡಲಾಗದು. ಆದರೆ, ಕೆಲವೊಂದು ದುರ್ಘಟನೆಗಳು ಸಂಭವಿಸಿದಾಗ ವಿಧಿಯಾಟ ಅದೆಷ್ಟು ವಿಚಿತ್ರ ಎಂದೆನಿಸಿಬಿಡುತ್ತದೆ. ಅದಕ್ಕೆ ಈ ಘಟನೆಯೇ ಸಾಕ್ಷಿ...!

ತನ್ನ ತಂದೆ ನಿಧನರಾದ ಸುದ್ದಿ ಕೇಳಿ ನಡುರಾತ್ರಿ ಪತ್ನಿ - ಮಗುವಿನೊಂದಿಗೆ ಬಾಡಿಗೆ ಕಾರಿನಲ್ಲಿ ತೆರಳಿದ್ದ ಶಿಕ್ಷಕರೊಬ್ಬರು ಇನ್ನೇನು ತಮ್ಮ ಮನೆ ತಲುಪಿ ತಂದೆಯ ಅಂತಿಮ ದರ್ಶನ ಪಡೆಯಬೇಕು ಎಂದು ಕೊಳ್ಳುವಷ್ಟರಲ್ಲಿ ಕಾರು ಅಪಘಾತ ಕ್ಕೊಳಗಾಗಿ ಪತ್ನಿಯೊಂದಿಗೆ ಇಹಲೋಕ ತ್ಯಜಿಸಿದ ಧಾರುಣ ಕಥೆಯಿದು. ಅಪಘಾತದಲ್ಲಿ ಕಾರಿನ ಮಾಲಿಕ ಹಾಗೂ ವಸಂತ್ ಕುಮಾರ್ ಅವರ ಮಗು ಬದುಕುಳಿದಿದ್ದು, ಕಾರಿನ ಚಾಲಕ ಕೂಡ ಕೊನೆಯುಸಿರೆಳೆ ದಿದ್ದಾರೆ.ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಕೊಂಡಂಗೇರಿ ಸರ್ಕಾರಿ ಪ್ರೌಢಶಾಲೆ ಯಲ್ಲಿ 2008ರ ಸೆಪ್ಟೆಂಬರ್‍ನಿಂದ ಆಂಗ್ಲಭಾಷೆಯ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದ ವಸಂತ್ ಕುಮಾರ್ (37) ಅವರು ಮೂಲತಃ ಬಾಗಲಕೋಟೆಯ ಇಳಕಲ್ಲು ನಿವಾಸಿಯಾಗಿದ್ದು, ಮೂರ್ನಾಡಿನಲ್ಲಿ ಪತ್ನಿ - ಮಗುವಿನೊಂದಿಗೆ ವಾಸವಿದ್ದರು. ಕಳೆದ ರಾತ್ರಿ ಸುಮಾರು 12 ಗಂಟೆ ವೇಳೆಗೆ ವಸಂತ್ ಕುಮಾರ್ ಅವರ ತಂದೆ ಕುಬೇರಪ್ಪ ಅವರು ಹೃದಯಾಘಾತದಿಂದ ಸಾವನ್ನಪ್ಪಿರುವುದಾಗಿ ಸಂದೇಶ ಬಂದ ಹಿನ್ನೆಲೆಯಲ್ಲಿ ವಸಂತ್ ಕುಮಾರ್ ತಮ್ಮ ಪತ್ನಿ ವಿಜಯಲಕ್ಷ್ಮಿ (28) ಹಾಗೂ ಎರಡೂವರೆ ವರ್ಷ ಪ್ರಾಯದ ಪುತ್ರಿ ರಿತಿಕಾಳೊಂದಿಗೆ ಟೊಯೊಟಾ ಕಾರೊಂದನ್ನು ಬಾಡಿಗೆ ಮಾಡಿಕೊಂಡು ಚಾಲಕ ಲೋಹಿತ್, ಕಾರು ಮಾಲೀಕ ಪ್ರವೀಣ್ ಎಂಬವರೊಂದಿಗೆ ರಾತ್ರಿ 1 ಗಂಟೆ ಸುಮಾರಿಗೆ ತಮ್ಮ ತವರೂರಿನತ್ತ ತೆರಳಿದ್ದಾರೆ.

(ಮೊದಲ ಪುಟದಿಂದ)

ಮನೆ ತಲುಪಲಿಲ್ಲ

ತನ್ನ ತಂದೆಯ ಅಂತಿಮ ದರ್ಶನಕ್ಕಾಗಿ ತೆರಳುತ್ತಿದ್ದ ವಸಂತ್ ಕುಮಾರ್ ಕುಟುಂಬಕ್ಕೆ ತಾವೇ ಮಣ್ಣಾಗುತ್ತೇವೆ ಎಂಬ ಕಲ್ಪನೆಯೂ ಇರಲಿಲ್ಲ. ಆದರೆ, ವಿಧಿಯಾಟ ಬೇರೆಯೇ ಆಗಿತ್ತು. ಇಂದು ಬೆಳಿಗ್ಗೆ ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ಸಮೀಪ ಬೋರಾಗದ ಕ್ರಾಸ್ ಎಂಬಲ್ಲಿ ಸುಮಾರು 10 ಗಂಟೆ ವೇಳೆಗೆ ಟಿಪ್ಪರ್ ಲಾರಿಯ ರೂಪದಲ್ಲಿ ಜವರಾಯ ಕಾದುಕುಳಿತಿದ್ದ. ವಸಂತ್ ಕುಮಾರ್ ಅವರು ತೆರಳುತ್ತಿದ್ದ ಕಾರು ಹಾಗೂ ಟಿಪ್ಪರ್ ಲಾರಿ ನಡುವೆ ಭೀಕರ ಅಪಘಾತ ಸಂಭವಿಸಿದೆ. ಪರಿಣಾಮ ವಸಂತ್ ಕುಮಾರ್ ಹಾಗೂ ಪತ್ನಿ ವಿಜಯಲಕ್ಷ್ಮಿ ಸ್ಥಳದಲ್ಲಿಯೇ ಅಸುನೀಗಿದ್ದು, ಕಾರು ಚಾಲಕ ಲೋಹಿತ್ ಅವರು ಕೂಡ ಕೊನೆಯುಸಿರೆಳೆದಿದ್ದು, ವಸಂತ್ ಕುಮಾರ್ ಅವರ ಮಗು ರಿತಿಕಾ ಅದೃಷ್ಟವಶಾತ್ ಬದುಕುಳಿದಿದ್ದಾಳೆ. ಕಾರು ಮಾಲೀಕ ಪ್ರವೀಣ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕೂಡ್ಲಿಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.