ಮಡಿಕೇರಿ, ಫೆ. 3: ಜಿಲ್ಲಾಡಳಿತ, ಜಿಲ್ಲಾಪಂಚಾಯತ್ ಹಾಗೂ ತೋಟಗಾರಿಕಾ ಇಲಾಖೆ ಸಹಯೋಗದಲ್ಲಿ ತಾ.7,8,9 ಹಾಗೂ 10 ರಂದು ನಗರದ ರಾಜಾಸೀಟಿನಲ್ಲಿ ನಡೆಯಲಿರುವ ಫಲಪುಷ್ಪ ಪ್ರದರ್ಶನದ ಅಂಗವಾಗಿ ಜಿಲ್ಲಾಡಳಿತ, ಗ್ರೀನ್ ಸಿಟಿ ಫೋರಂ ಹಾಗೂ ನಗರಸಭೆ ಸಂಯುಕ್ತಾಶ್ರಯದಲ್ಲಿ ಮಮತೆಯ ಮಾರುಕಟ್ಟೆ ಎಂಬ ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ದಾನಿಗಳು ನೀಡುವ ಸುಸ್ಥಿತಿಯಲ್ಲಿರುವ ಬಟ್ಟೆಗಳು, ಆಟಿಕೆಗಳು, ಲೇಖನ ಸಾಮಗ್ರಿಗಳು, ಪುಸ್ತಕಗಳು ಹೀಗೆ ಹಲವಾರು ವಸ್ತುಗಳನ್ನು ಈ ನಾಲ್ಕು ದಿನಗಳ ಕಾಲ ಅತೀ ಕಡಿಮೆ ದರದಲ್ಲಿ ಮಾರಾಟ ಮಾಡಲಾಗುವುದು. ಸಂಗ್ರಹವಾಗುವ ಹಣವನ್ನು ಪೌರ ಕಾರ್ಮಿಕರ ಹಾಗೂ ಸ್ತ್ರೀ ಶಕ್ತಿ ಗುಂಪುಗಳ ಕಲ್ಯಾಣಕ್ಕೆ ಬಳಸಲಾಗುವುದು.ಈ ಬಗ್ಗೆ ನಗರಸಭೆ ಪೌರಾಯುಕ್ತ ಎಂ.ಎಲ್ ರಮೇಶ್ ನಗರಸಭೆ ಸಭಾಂಗಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ್ದರು. ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರ ಕಲ್ಪನೆ ಇದಾಗಿದ್ದು, ನಗರದ ಕಾವೇರಿ ಕಲಾಕ್ಷೇತ್ರದಲ್ಲಿ ತಾ.4 ರಿಂದ (ಇಂದಿನಿಂದ) ದಾನಿಗಳಿಂದ ವಸ್ತುಗಳನ್ನು ಸಂಗ್ರಹಿಸಲಾಗುತ್ತದೆ. ಅನುಪಯುಕ್ತ ಹಾಗೂ ಸುಸ್ಥಿತಿಯಲ್ಲಿರುವ ವಸ್ತುಗಳನ್ನು ನೀಡಿ ಸಹಕರಿಸಲು ಕೋರಿದರು.
ಗ್ರೀನ್ ಸಿಟಿ ಫೋರಂ ಅಧ್ಯಕ್ಷ ವಕೀಲ ಪಿ.ಕೃಷ್ಣಮೂರ್ತಿ ಮಾತನಾಡಿ ದಾನಿಗಳು ನೀಡಿದ ವಸ್ತುಗಳನ್ನು ಕೇವಲ ರೂ.10 ರಿಂದ ರೂ.50 ರ ಒಳಗೆ ಅತೀ ಕಡಿಮೆ ದರದಲ್ಲಿ ಮಾರಾಟ ಮಾಡಲಾಗುವುದು. ಈ ಹಣವನ್ನು ಪೌರಕಾರ್ಮಿಕರ ಹಾಗೂ ಸ್ತ್ರೀ ಶಕ್ತಿ ಗುಂಪುಗಳ ಆರ್ಥಿಕ ಬೆಳವಣಿಗೆಗೆ (ಮೊದಲ ಪುಟದಿಂದ) ಉಪಯೋಗಿಸಲಾಗುವುದು ಎಂದು ತಿಳಿಸಿದರು. ಗ್ರೀನ್ ಸಿಟಿ ಫೋರಂ ಸ್ಥಾಪಕ ಅಧ್ಯಕ್ಷ ಚೆಯ್ಯಂಡ ಸತ್ಯ ಮಾತನಾಡಿ ಫಲಪುಷ್ಪ ಪ್ರದರ್ಶನದ ಸಂದರ್ಭ 2 ಮಳಿಗೆಗಳಲ್ಲಿ ವಸ್ತುಗಳನ್ನು ಸಂಗ್ರಹಿಸಲಾಗುವುದು ಎಂದರು. ಸುದ್ದಿಗೋಷ್ಟಿಯಲ್ಲಿ ಗ್ರೀನ್ ಸಿಟಿ ಫೋರಂನ ಮೋಂತಿ ಗಣೇಶ್, ಅಂಬೆಕಲ್ ನವೀನ್ ಹಾಜರಿದ್ದರು. ಹೆಚ್ಚಿನ ಮಾಹಿತಿಗೆ ಮೊ.7904490545 ಅನ್ನು ಸಂಪರ್ಕಿಸಬಹುದು.