ವೀರಾಜಪೇಟೆ, ಫೆ. 3: ಮಹಿಳೆಯ ಗರ್ಭ ಕೋಶದಲ್ಲಿದ್ದ ಎರಡೂವರೆ ಕೆ.ಜಿ. ತೂಕದ ಗೆಡ್ಡೆಯನ್ನು ಶಸ್ತ್ರ ಚಿಕಿತ್ಸೆ ಮೂಲಕ ಡಾಕ್ಟರ್ ರೇಣುಕಾ ಅವರು ಹೊರ ತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ.

ವೀರಾಜಪೇಟೆಯ ಸರಕಾರಿ ಆಸ್ಪತ್ರೆಯಲ್ಲಿ ಕಳೆದ ಒಂದು ವಾರದ ಹಿಂದೆ ಹೊಟ್ಟೆ ನೋವು ಎಂದು ಚಿಕಿತ್ಸೆಗೆ ದಾಖಲಾದ ಮಹಿಳೆಗೆ ಶಸ್ತ್ರ ಚಿಕಿತ್ಸೆ ಮೂಲಕ ಗರ್ಭಕೋಶದಲ್ಲಿನ ಎರಡೂವರೆ ಕೆ.ಜಿ ಗಾತ್ರದ ಗೆಡ್ಡೆಯನ್ನು ಹೊರ ತೆಗೆಯಲಾಗಿದೆ.

ಗೋಣಿಕೊಪ್ಪದ ನಿವಾಸಿ 45 ವರ್ಷ ಪ್ರಾಯದ ರತ್ನ ಎಂಬ ಮಹಿಳೆಯು ಮೂರು ವರ್ಷಗಳಿಂದ ಹೊಟ್ಟೆ ನೋವು ಹಾಗೂ ಅಧಿಕ ರಕ್ತ ಸ್ರಾವದಿಂದ ಬಳಲುತ್ತಿದ್ದರು. ಹೊರ ಜಿಲ್ಲೆಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರೂ ರೋಗ ಗುಣಮುಖವಾಗದ ಕಾರಣ ಗೋಣಿಕೊಪ್ಪದ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಹೆಚ್ಚಿನ ಚಿಕಿತ್ಸೆಗಾಗಿ ವೀರಾಜಪೇಟೆ ತಾಲೂಕು ಸರಕಾರಿ ಆಸ್ಪತ್ರೆಯ ಒಳ ರೋಗಿಯಾಗಿ ಒಂದು ವಾರದ ಹಿಂದೆ ದಾಖಲಾಗಿದ್ದರು. ಇವರಿಗೆ ಸ್ತ್ರೀ ರೋಗ ತಜ್ಞೆ ಡಾ. ರೇಣುಕಾ ಚಿಕಿತ್ಸೆ ನೀಡಿ ಸಂಪೂರ್ಣ ಪರೀಕ್ಷೆ ನಡೆಸಿದಾಗ ಗರ್ಭಕೋಶದಲ್ಲಿ ಗೆಡ್ಡೆ ಇರುವುದು ಖಚಿತವಾಯಿತು. ತದ ನಂತರ ಶಸ್ತ್ರ ಚಿಕಿತ್ಸೆ ಮೂಲಕ ಗೆಡ್ಡೆಯನ್ನು ಹೊರ ತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ, ಗೆಡ್ಡೆಯು ಎರಡೂವರೆ ಕೆ.ಜಿ ಇದ್ದು ಶಸ್ತ್ರ ಚಿಕಿತ್ಸೆ ನಡೆಸಿ ಹೊರ ತೆಗೆಯದಿದ್ದಲ್ಲಿ ಜೀವಕ್ಕೆ ಹೆಚ್ಚಿನ ತೊಂದರೆಯಾಗುತಿತ್ತು. ಚಿಕಿತ್ಸೆಯ ನಂತರ ಮಹಿಳೆಗೆ ಆರೋಗ್ಯದಲ್ಲಿ ಚೇತರಿಕೆ ಕಾಣುತ್ತಿದೆ ಎಂದು ಡಾಕ್ಟರ್ ರೇಣುಕಾ ತಿಳಿಸಿದ್ದಾರೆ. ಶಸ್ತ್ರ ಚಿಕಿತ್ಸೆ ವೇಳೆ ಅರವಳಿಕೆ ತಜ್ಞೆ ಡಾ. ಕಸ್ತೂರಿ ಶುಶ್ರೂಷಕಿಯರಾದ ಲಲಿತಾ, ಭಾಗ್ಯ, ಲಕ್ಷ್ಮಿ, ಡಿ ಗ್ರೂಪ್ ನೌಕರಿ ಪೂವಿ ಸಹಕರಿಸಿದ್ದಾರೆ.