*ಗೋಣಿಕೊಪ್ಪಲು, ಫೆ. 3 : ಕಿರುಗೂರು ಗ್ರಾ.ಪಂ. ವ್ಯಾಪ್ತಿಯ 1 ಕೋಟಿ 29 ಲಕ್ಷದ ಅನುದಾನದಲ್ಲಿ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಕೆ.ಜಿ. ಬೋಪಯ್ಯ ಗ್ರಾಮಸ್ಥರ ಸಮ್ಮುಖದಲ್ಲಿ ಭೂಮಿ ಪೂಜೆ ನಡೆಸಿ ಚಾಲನೆ ನೀಡಿದರು.
ಕಿರುಗೂರು ಗ್ರಾಮದ ಹೊನ್ನಿಕೊಪ್ಪ ಪರಿಶಿಷ್ಟ ಕಾಲೋನಿ ರಸ್ತೆ ಕಾಮಗಾರಿಗೆ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು ಸ್ವಾತಂತ್ರ್ಯ ನಂತರದಲ್ಲಿ ಮೊದಲ ಬಾರಿಗೆ ಕೇಂದ್ರ ಸರ್ಕಾರ ಕೃಷಿಗೆ ಹೆಚ್ಚು ಉತ್ತೇಜನ ನೀಡಿ ಬಜೆಟ್ ಮಂಡಿಸಿದೆ. ಇದೇ ಮಾದರಿಯಲ್ಲಿ ಮಾರ್ಚ್ 5ರಂದು ರಾಜ್ಯ ಸರ್ಕಾರದ ಬಜೆಟ್ ಮಂಡನೆ ನಡೆಯಲಿದ್ದು, ಈ ಸಂದರ್ಭವೂ ರೈತ ಪರವಾಗಿ ಹೆಚ್ಚಿನ ಆದ್ಯತೆ ಇರಲಿದೆ ಎಂದು ಹೇಳಿದರು. ಮಾರ್ಚ್ ಅಂತ್ಯದೊಳಗೆ ಕೈಗೆತ್ತಿಕೊಂಡ ಎಲ್ಲಾ ಕಾಮಗಾರಿಗಳನ್ನು ಪೂರ್ಣ ಗೊಳಿಸಿ ಸರ್ಕಾರದ ಅನುದಾನವನ್ನು ಸಮರ್ಪಕವಾಗಿ ಬಳಸಿಕೊಳ್ಳುವಂತೆ ಇಂಜಿನಿಯರ್ ಹಾಗೂ ಗುತ್ತಿಗೆದಾರರಿಗೆ ಸಲಹೆ ನೀಡಿದರು.
ಕಿರುಗೂರು ಗ್ರಾಮ ವ್ಯಾಪ್ತಿಯಲ್ಲಿ ತಡೆಗೋಡೆ ನಿರ್ಮಾಣಕ್ಕೆ ಕುಡಿಯುವ ನೀರು ಬೇಡಿಕೆಗೆ ಅನುಗುಣವಾಗಿ ವ್ಯವಸ್ಥೆ ಮಾಡಲಾಗುತ್ತಿದೆ. ಗ್ರಾಮದಲ್ಲಿ ನಡೆಯುವ ಕಾಮಗಾರಿಗಳ ಬಗ್ಗೆ ಗ್ರಾಮಸ್ಥರು ಹೆಚ್ಚಿನ ಕಾಳಜಿಯಿಂದ ಕಳಪೆ ಕಾಮಗಾರಿಯಾಗದಂತೆ ನೋಡಿಕೊಳ್ಳಬೇಕು ಎಂದರು.
ತಾ.ಪಂ. ಸದಸ್ಯೆ ಬಿ.ಕೆ. ಸುಮಾ, ಕಿರುಗೂರು ಗ್ರಾ.ಪಂ. ಅಧ್ಯಕ್ಷೆ ಬೋಜಿ, ಉಪಾಧ್ಯಕ್ಷ ಹೆಚ್.ವಿ. ಪ್ರಕಾಶ್, ಸದಸ್ಯ ಪಿ.ಎಸ್. ಮಂಜುನಾಥ್, ಅಲೆಮಾಡ ಸುಧಿ, ಪಿ.ಎಲ್.ಡಿ. ಬ್ಯಾಂಕ್ ನಿರ್ದೇಶಕ ಪೆಮ್ಮಂಡ ಅಪ್ಪಿ, ಗ್ರಾಮಸ್ಥರಾದ ಚೆಪ್ಪುಡೀರ ಸುನೀಲ್, ಅಲೆಮಾಡ ತಿಮ್ಮಯ್ಯ, ಕಾಕಮಾಡ ಆದರ್ಶ್, ಸಿ.ಟಿ. ಲಾಲ, ಮಾಚಯ್ಯ, ಕೋದಂಗಡ ಜಯಾ, ಚೆರಿಯಪಂಡ ಪೆಮ್ಮಯ್ಯ, ಶಾಸಕರ ಆಪ್ತ ಕಾರ್ಯದರ್ಶಿ ಮಧು ದೇವಯ್ಯ, ಆರ್.ಎಂ.ಸಿ. ನಿರ್ದೇಶಕ ವಿನು ಚಂಗಪ್ಪ, ಜಿಲ್ಲಾ ಪಂಚಾಯತ್ ಇಂಜಿನಿಯರ್ ಮಹಾದೇವ್ ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.