ಮಡಿಕೇರಿ, ಫೆ. 4: ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ವತಿಯಿಂದ ನಗರದ ಬೋಧಕ ಆಸ್ಪತ್ರೆಯ ಆವರಣದಲ್ಲಿ 450 ಹಾಸಿಗೆ ಸಾಮಥ್ರ್ಯದ ಜಿಲ್ಲಾ ಆಸ್ಪತ್ರೆಯ ಹೆಚ್ಚುವರಿ ಕಟ್ಟಡ ನಿರ್ಮಾಣಕ್ಕೆ ಗುರುತಿಸಿರುವ ಜಾಗದಲ್ಲಿ ಜಾಗ ಸಮತಟ್ಟು ಮಾಡುವ ಕಾರ್ಯ ನಡೆಯುತ್ತಿದ್ದು, ಇದನ್ನು ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಅವರು ಮಂಗಳವಾರ ವೀಕ್ಷಿಸಿದರು.
ತ್ವರಿತವಾಗಿ ಜಾಗವನ್ನು ಸಮತಟ್ಟು ಮಾಡಿ ಕಾಮಗಾರಿ ಆರಂಭಿಸುವಂತೆ ಸಂಬಂಧಪಟ್ಟ ಇಂಜಿನಿಯರುಗಳಿಗೆ ಶಾಸಕರು ನಿರ್ದೇಶನ ನೀಡಿದರು.
ಕಾಮಗಾರಿ ಆರಂಭಿಸಿ ಮಳೆಗಾಲ ಆರಂಭವಾಗುವುದರೊಳಗೆ ಮೊದಲ ಹಂತದ ಕಾಮಗಾರಿ ಪೂರ್ಣ ಗೊಳಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಶಾಸಕರು ಸೂಚಿಸಿದರು.
ಕೊಡಗು ವೈದ್ಯಕೀಯ ಆಸ್ಪತ್ರೆಗೆ ಪಿರಿಯಾಪಟ್ಟಣ, ಹುಣಸೂರು ಹಾಗೂ ಜಿಲ್ಲೆಯಾದ್ಯಂತ ಜನರು ಚಿಕಿತ್ಸೆಗಾಗಿ ಬರುತ್ತಿದ್ದು, ಉತ್ತಮ ಆರೋಗ್ಯ ಸೇವೆ ದೊರೆಯುತ್ತಿದೆ ಎಂದು ವೈದ್ಯಕೀಯ ಕಾಲೇಜಿನ ನಿರ್ದೇಶಕ ಕಾರ್ಯಪ್ಪ ಇದೇ ಸಂದರ್ಭದಲ್ಲಿ ತಿಳಿಸಿದರು.
ತಾ.3ರಂದು ಒಂದೇ ದಿನದಲ್ಲಿ 950 ಹೊರ ರೋಗಿಗಳ ವಿಭಾಗದಲ್ಲಿ ದಾಖಲಾಗಿದ್ದಾರೆ. ವೈದ್ಯಕೀಯ ಕಾಲೇಜು ಆಸ್ಪತ್ರೆಯ ಸೇವೆಯನ್ನು ಸಮರ್ಪಕವಾಗಿ ಒದಗಿಸಲಾಗುತ್ತಿದೆ ಎಂದು ಹೇಳಿದರು. ವೈದ್ಯಕೀಯ ಕಾಲೇಜಿನ ಅಧೀಕ್ಷಕ ಮೋಹನ್, ಇತರರು ಇದ್ದರು.